ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಾಕೋಟ್ ವಾಯುದಾಳಿಯಲ್ಲಿ 170 ಉಗ್ರರು ಹತರಾಗಿದ್ದರು: ಇಟೆಲಿ ಪತ್ರಕರ್ತೆ

Published : 8 ಮೇ 2019, 12:33 IST
ಫಾಲೋ ಮಾಡಿ
Comments

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತದ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ 170ರಷ್ಟು ಉಗ್ರರು ಹತ್ಯೆಯಾಗಿದ್ದಾರೆ ಎಂದು ವಿದೇಶಿ ಪತ್ರಕರ್ತೆಯೊಬ್ಬರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಫೆಬ್ರುವರಿ 26ರಂದು ಭಾರತ ಬಾಲಾಕೋಟ್ ವಾಯುದಾಳಿ ನಡೆಸಿತ್ತು. ಇಟೆಲಿಯ ಪತ್ರಕರ್ತೆಫ್ರಾನ್ಸೆಸ್ಕಾ ಮರೀನೊ ಪ್ರಕಾರ, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ಶಿಬಿರದ ಮೇಲೆ ನಡೆದ ಈ ವಾಯುದಾಳಿಯಲ್ಲಿ 130ರಿಂದ 170 ಉಗ್ರರು ಹತರಾಗಿದ್ದಾರೆ.

ಇಂಡಿಯಾ ಟುಡೇ ಟಿ.ವಿಯಲ್ಲಿ ಮಾತನಾಡಿದ ಆ ಪತ್ರಕರ್ತೆ ಭಾರತ ನಡೆಸಿದ ವಾಯುದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತ ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರದ ಮೇಲೆ ನಡೆಸಿದ ವಾಯುದಾಳಿಯಲ್ಲುಂಟಾದ ಹಾನಿಯನ್ನು ಮುಚ್ಚಿಡಲು ಪಾಕ್ ಪ್ರಯತ್ನಿಸುತ್ತಿದ್ದರೂ, ಈ ದಾಳಿ ನಂತರದ ಪರಿಣಾಮಗಳ ಬಗ್ಗೆ ನನಗೆ ಗೊತ್ತಿದೆ ಎಂದು ಮರೀನೋ ತಮ್ಮ ವರದಿಯಲ್ಲಿ ಬರೆದಿದ್ದಾರೆ.

ಫೆಬ್ರುವರಿ 26ರಂದು ವಾಯುದಾಳಿ ನಡೆದಾಗ ಶಿಂಕಿಯಾರಿ ಬೇಸ್‍ ಕ್ಯಾಂಪ್‌ನಿಂದ ಪಾಕಿಸ್ತಾನದ ಸೇನಾ ತುಕಡಿ ಬೆಳಗ್ಗೆ 6 ಗಂಟೆಗೆ ಘಟನಾ ಸ್ಥಳಕ್ಕೆ ಬಂದಿದೆ.ಭಾರತದ ವಾಯುಪಡೆ ವಾಯುದಾಳಿ ನಡೆಸಿದ ಎರಡು ಗಂಟೆಗಳ ನಂತರ ಪಾಕ್ ಸೇನೆ ಅಲ್ಲಿಗೆ ಧಾವಿಸಿ, ಗಾಯಗೊಂಡವರನ್ನು ಶಿಂಕಿಯಾರಿಯಲ್ಲಿರುವ ಹರ್ಕುರ್- ಉಲ್- ಮುಜಾಹಿದ್ದೀನ್ ಶಿಬಿರಕ್ಕೆ ಸಾಗಿಸಿ ಅಲ್ಲಿ ಚಿಕಿತ್ಸೆ ನೀಡಿದೆ.

ತಮ್ಮ ಮೂಲಗಳ ಪ್ರಕಾರ ವಾಯುದಾಳಿಯಲ್ಲಿ ಗಾಯಗೊಂಡ 45 ಮಂದಿಗೆ ಸೇನಾಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 20 ಮಂದಿ ಅಸು ನೀಗಿದ್ದಾರೆ.

ವರದಿ ಪ್ರಕಾರ ಗುಣಮುಖರಾದ ಉಗ್ರರು ಪಾಕ್ ಸೇನೆಯ ವಶದಲ್ಲಿದ್ದಾರೆ.ಆ ಪ್ರದೇಶದ ನಂಬಲರ್ಹಮೂಲಗಳಿಂದ ಈ ಮಾಹಿತಿ ಕಲೆ ಹಾಕಲಾಗಿದೆ ಎಂದು ಮರೀನೊ ಹೇಳಿದ್ದಾರೆ. ಚಿಕಿತ್ಸೆ ವೇಳೆ ಸಾವಿಗೀಡಾದವರನ್ನು ಸೇರಿಸಿ ಒಟ್ಟು 130- 170 ಉಗ್ರರು ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಾಯುದಾಳಿಯಲ್ಲಿ ಬಾಂಬ್ ತಯಾರಿಮಾಡುವವರು, ಶಸ್ತ್ರಾಸ್ತ್ರ ತರಬೇತಿ ನೀಡುವವರು ಸೇರಿದಂತೆ 11 ತರಬೇತುದಾರರು ಬಲಿಯಾಗಿದ್ದಾರೆ.

ದಾಳಿಯ ಬಗ್ಗೆ ಮಾಹಿತಿ ಸೋರುವುದನ್ನು ತಪ್ಪಿಸಲು ಜೈಷ್ ಉಗ್ರರು ದಾಳಿಯಲ್ಲಿ ಹತರಾದ ಉಗ್ರರ ಕುಟುಂಬಗಳನ್ನು ಭೇಟಿ ಮಾಡಿ ನಗದು ಹಣ ನೆರವು ನೀಡಿದ್ದಾರೆ. ಬೆಟ್ಟದ ತುದಿಯಲ್ಲಿರುವ ಉಗ್ರರ ಶಿಬಿರಗಳು ಈಗಲೂ ಪಾಕಿಸ್ತಾನದ ಸೇನೆಯ ನಿಯಂತ್ರಣದಲ್ಲಿದೆ ಎಂದ ಮರೀನೊ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT