ಕಠುವಾ: ಅನಧಿಕೃತ ಅನಾಥಾಶ್ರಮದಿಂದ ಎಂಟು ಬಾಲಕಿಯರು ಸೇರಿ 19 ಮಕ್ಕಳ ರಕ್ಷಣೆ

7
ಪೊಲೀಸ್‌ ಮತ್ತು ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ

ಕಠುವಾ: ಅನಧಿಕೃತ ಅನಾಥಾಶ್ರಮದಿಂದ ಎಂಟು ಬಾಲಕಿಯರು ಸೇರಿ 19 ಮಕ್ಕಳ ರಕ್ಷಣೆ

Published:
Updated:

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಅನಾಥಾಶ್ರಮದ ಮೇಲೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಬಾಲಕಿಯರು ಸೇರಿ 19 ಮಕ್ಕಳನ್ನು ರಕ್ಷಿಸಿದ್ದಾರೆ.

ಅನಾಥಾಶ್ರಮದಲ್ಲಿ ಒಟ್ಟು 21 ಮಕ್ಕಳಿದ್ದರು. ಇದರಲ್ಲಿ ಇಬ್ಬರು ಮಕ್ಕಳು ತಮ್ಮ ಸ್ವಂತ ಸ್ಥಳ ಪಂಜಾಬ್‌ನ ಪಠಾಣ್‌ಕೋಟ್‌ಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ರಕ್ಷಿಸಿರುವ ಮಕ್ಕಳು 5ರಿಂದ 16 ವರ್ಷದೊಳಗಿನವರು. ಪಂಜಾಬ್‌, ಹಿಮಾಚಲಪ್ರದೇಶ ಮತ್ತು ಜಮ್ಮುಗೆ ಸೇರಿದವರಾಗಿದ್ದಾರೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಿ, ಎಲ್ಲರನ್ನೂ ಸರ್ಕಾರದ ಬಾಲ ಆಶ್ರಮ ಮತ್ತು ನಾರಿನಿಕೇತನ ಕೇಂದ್ರಗಳಿಗೆ ಕುಳುಹಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕೇರಳದ ಪಾದ್ರಿಯೊಬ್ಬರು ನಡೆಸುತ್ತಿರುವ ಈ ಅನಾಥಾಶ್ರಮದಲ್ಲಿ ಮಕ್ಕಳಿಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಲಾಗುತ್ತಿದೆ ಎಂದು ಕೆಲವು ಮಕ್ಕಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಾದ್ರಿ ಆಂಟೋನಿ ಥಾಮಸ್‌ ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಗಳನ್ನು ಅಲ್ಲಗಳೆದಿರುವ ಥಾಮಸ್‌, ‘ಅನಾಥಾಶ್ರಮದಲ್ಲಿ ಯಾವುದೇ ಲೋಪಗಳು ಆಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಜಿಲ್ಲಾಧಿಕಾರಿಗೆ ಸಾಕಷ್ಟು ದೂರು ಬಂದಿದ್ದವು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಕಠುವಾ ಉಪ ವಿಭಾಗಾಧಿಕಾರಿ ಜಿತೇಂದರ್‌ ಮಿಶ್ರಾ ತಿಳಿಸಿದ್ದಾರೆ.

ಮಕ್ಕಳ ಕುಟುಂಬದವರನ್ನು ಸಂಪರ್ಕಿಸಲಾಗುತ್ತಿದೆ. ಅನಾಥಾಶ್ರಮ ನಡೆಸಲು ಬೇಕಾದ ದಾಖಲೆಪತ್ರಗಳನ್ನು ಹಾಜರುಪಡಿಸಲು ಪಾದ್ರಿ ವಿಫಲರಾಗಿದ್ದಾರೆ. ಯಾವ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿತ್ತು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಅನಾಥಾಶ್ರಮವು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸಹಭಾಗಿತ್ವದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆಯೇ ಎನ್‌ಜಿಒ ಜತೆಗೆ ಸಂಬಂಧ ಕಡಿದುಕೊಂಡಿರುವುದು ಗೊತ್ತಾಗಿದೆ ಎಂದು ಜಿಲ್ಲಾ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಧರ್‌ ಪಾಟೀಲ್‌ ತಿಳಿಸಿದ್ದಾರೆ.

ಈ ನಡುವೆ ರಾಷ್ಟ್ರೀಯ ಬಜರಂಗ ದಳದ ಕಾರ್ಯಕರ್ತರು ಜಮ್ಮು ಪ್ರೆಸ್‌ ಕ್ಲಬ್‌ ಹೊರಗೆ ಪಾದ್ರಿಯ ಪ್ರತಿಕೃತಿ ದಹಿಸಿ, ಪ್ರತಿಭಟನೆ ಮಾಡಿದರು. ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !