ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಅವಧಿಯಲ್ಲಿ ದೇಶ ಏಕಾಂಗಿ; ಈಗ ವಿಶ್ವವೇ ಬೆಂಬಲಕ್ಕಿದೆ: ಸುಷ್ಮಾ ಸ್ವರಾಜ್‌

ಮಸೂದ್‌ ಅಜರ್‌ ನಿಷೇಧ ಪ್ರಸ್ತಾವ: ಕಾಂಗ್ರೆಸ್‌ ನಾಯಕರ ಟೀಕೆಗೆ ಸರಣಿ ಟ್ವಿಟರ್‌ನಲ್ಲಿ ಪ್ರತ್ಯುತ್ತರ
Last Updated 15 ಮಾರ್ಚ್ 2019, 12:12 IST
ಅಕ್ಷರ ಗಾತ್ರ

ನವದೆಹಲಿ: ಜೈಷ್‌ ಎ ಮೊಹಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ಗೆ ವಿಶ್ವಸಂಸ್ಥೆಯಿಂದ ನಿಷೇಧ ಹೇರಲು ಚೀನಾ ತಡೆಯೊಡ್ಡಿರುವುದರಲ್ಲಿ ಯಾವ ನಾಯಕರ ಆಡಳಿತದಲ್ಲಿ ‘ರಾಜತಾಂತ್ರಿಕ ವೈಫಲ್ಯ’ ಆಗಿದೆ ಎನ್ನುವುದನ್ನು ತಿಳಿಯಿರಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶುಕ್ರವಾರ ಕಾಂಗ್ರೆಸ್‌ ಕಾಲೆಳೆದಿದ್ದಾರೆ.

ಜೆಇಎಂ ನಿಷೇಧದ ಪ್ರಸ್ತಾವವನ್ನು 2009ರಲ್ಲಿ ಯುಪಿಎ ಸರ್ಕಾರ ಮುಂದಿಟ್ಟಾಗ ವಿಶ್ವಮಟ್ಟದಲ್ಲಿ ಭಾರತ ಏಕಾಂಗಿಯಾಗಿತ್ತು. ಈಗ 2019ರಲ್ಲಿ ಈ ಪ್ರಸ್ತಾವಕ್ಕೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಟೀಕೆಗೆ ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಚೀನಾ ಅಡ್ಡಗಾಲು ಹಾಕಿದ ನಂತರ ರಾಹುಲ್‌ ಗಾಂಧಿ, ನರೇಂದ್ರ ಮೋದಿ ದುರ್ಬಲ ಪ್ರಧಾನಿ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನು ಕಂಡರೆ ಮೋದಿಗೆ ಭಯ ಎಂದು ಟೀಕಿಸಿದ ಮರುದಿನವೇ ಸುಷ್ಮಾ, ಕಾಂಗ್ರೆಸ್‌ ನಾಯಕರ ವಿರುದ್ಧ ಸರಣಿ ಟ್ವೀಟ್‌ ಮಾಡಿ, ಹರಿಹಾಯ್ದಿದ್ದಾರೆ.

ಜೆಇಎಂ ಮುಖ್ಯಸ್ಥನನ್ನು ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿಯ ಪಟ್ಟಿಗೆ ಸೇರಿಸಲು ಭಾರತ ವಿಶ್ವಸಮುದಾಯದಿಂದ ಅಭೂತಪೂರ್ವ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಇದುವರೆಗೆ ನಾಲ್ಕು ಬಾರಿ ನಿಷೇಧ ಹೇರುವ ಪ್ರಸ್ತಾವ ಮಂಡಿಸಲಾಗಿದೆ. 2009ರಲ್ಲಿ ಯುಪಿಎ ಸರ್ಕಾರ ಇದ್ದಾಗ ಭಾರತ ಏಕಾಂಗಿಯಾಗಿತ್ತು. 2016ರಲ್ಲಿ ದೇಶವು ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಬೆಂಬಲದೊಂದಿಗೆ ಪ್ರಸ್ತಾವ ಮಂಡಿಸಿದೆ. 2017ರಲ್ಲಿ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಈ ಪ್ರಸ್ತಾವವನ್ನು ಪುನಃ ಮಂಡಿಸಿದವು. 2019ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ, 14 ರಾಷ್ಟ್ರಗಳ ಬೆಂಬಲದೊಂದಿಗೆ ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಹೊಸದಾಗಿ ಪ್ರಸ್ತಾವ ಮಂಡಿಸಿವೆ. ಇದಕ್ಕೆ ಭದ್ರತಾ ಸಮಿತಿಯ ಸದಸ್ಯರಲ್ಲದ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಟಲಿ, ಜಪಾನ್‌ ಕೂಡ ಬೆಂಬಲ ವ್ಯಕ್ತಪಡಿಸಿವೆ’ ಎಂದು ಸುಷ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT