ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಕೋರೆಗಾಂವ್‌ ಯುದ್ಧಕ್ಕೆ 201 ವರ್ಷ: ನೀವು ಓದಲೇಬೇಕಾದ ಸುದ್ದಿಗಳು

ಲಕ್ಷಾಂತರ ಜನ ಸೇರುವ ನಿರೀಕ್ಷೆ
Last Updated 1 ಜನವರಿ 2019, 6:28 IST
ಅಕ್ಷರ ಗಾತ್ರ

ಪುಣೆ:ಮಹಾರಾಷ್ಟ್ರದ ಕೋರೆಗಾಂವ್‌ನ ದಲಿತ ಯೋಧರು ಅಸ್ಪೃಶ್ಯತೆ ವಿರೋಧಿ ಹೋರಾಟದಲ್ಲಿ ಪೇಶ್ವೆಗಳ ವಿರುದ್ಧ ಗೆಲುವು ಸಾಧಿಸಿ 2019 ಜನವರಿ 1ಕ್ಕೆ 201 ವರ್ಷಗಳಾಗಿವೆ. ಭೀಮಾ ಕೋರೆಗಾಂವ್ ಯುದ್ಧದ ವರ್ಷಾಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಜ್ಯದೆಲ್ಲೆಡೆಯಿಂದ ಲಕ್ಷಾಂತರ ಜನ ಬರುವ ನಿರೀಕ್ಷೆ ಇರುವುದರಿಂದ ಭೀಮಾ ಕೋರೆಗಾಂವ್ ಹಳ್ಳಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಳೆದ ವರ್ಷ 200ನೇ ವರ್ಷಾಚರಣೆ ಸಂದರ್ಭ ನಡೆದ ಕಲ್ಲುತೂರಾಟ ಮತ್ತು ಗಲಭೆಯಲ್ಲಿ ಹಲವರು ಗಾಯಗೊಂಡಿದ್ದರು.ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ನಂತರ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿತ್ತು.ಭೀಮಾ ಕೋರೆಗಾಂವ್ ಯುದ್ಧದ ವರ್ಷಾಚರಣೆಗೆ ಬಲಪಂಥಿಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಏನಿದು ಭೀಮಾ ಕೋರೆಗಾಂವ್ ಯುದ್ಧ?

1818ರಲ್ಲಿ ಕೋರೆಗಾಂವ್‌ನ ಭೀಮಾ ನದಿಯ ದಡದ ಮೇಲೆ ಚಿತ್ಪಾವನ ಬ್ರಾಹ್ಮಣ ಪಂಗಡದ ಪೇಶ್ವೆ ಎರಡನೇ ಬಾಜೀರಾಯನ ಸೇನೆಯ ವಿರುದ್ಧ ಬ್ರಿಟಿಷ್ ಸೇನೆ ಯುದ್ಧ ನಡೆಸಿತ್ತು. ಬ್ರಿಟಿಷ್‌ ಸೈನ್ಯದಲ್ಲಿ ಮಹಾರ್ ಸಮುದಾಯದ ಸೈನಿಕರೂ ಇದ್ದರು. 1818ರ ಜನವರಿ 1ರಂದು ಪೇಶ್ವೆ ಬಾಜೀರಾಯನ ಸೇನೆಯ ವಿರುದ್ಧ ಮಹಾರ್ ರೆಜಿಮೆಂಟ್‌ ಹೋರಾಡಿ ಬಾಜೀರಾಯನನ್ನು ಸೋಲಿಸಿತ್ತು. ಇದು ಭೀಮಾ ಕೋರೆಗಾಂವ್‌ ಯುದ್ಧ ಎಂದೇ ಪ್ರಸಿದ್ಧಿಪಡೆದಿದೆ. ಇದನ್ನು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ ನಡೆದ ಯುದ್ಧವೆಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ.

ಜನವರಿ 1ರ ಹೊಸ ವರ್ಷದ ದಿನ ಆತ್ಮಗೌರವ ಮತ್ತು ದಾಸ್ಯ ವಿಮೋಚನೆಗಾಗಿ ಈ ದೇಶದ ಶೋಷಿತ ವರ್ಗದ ಸೈನಿಕರ ಗುಂಪೊಂದು ಧ್ವನಿಯೆತ್ತಿದ ದಿನವೂ ಹೌದು. ಅಸ್ಪೃಶ್ಯತೆಯ ಆಚರಣೆಯನ್ನು ಮೆರೆಸುತ್ತಿದ್ದ ಪ್ರಭುತ್ವದ ವಿರುದ್ಧ ಸಿಡಿದೆದ್ದ ಗುಂಪೊಂದು, ತಮ್ಮವರ ವಿರುದ್ಧವೇ ಕಾದಾಡಿ ಗೆದ್ದು, ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದನ್ನು ಬರೆದ ದಿನವಿದು. ಮಹಾರಾಷ್ಟ್ರದ ಭೀಮಾ ನದಿಯ ತೀರದಲ್ಲಿ 1818 ಜನವರಿ 1ರಂದು ನಡೆದ ಈ ಸಂಘರ್ಷ ಚರಿತ್ರೆಯಲ್ಲಿ ‘ಕೋರೆಗಾಂವ್ ಯುದ್ಧ’ ಎಂದೇ ಪ್ರಸಿದ್ಧವಾಗಿದೆ.

ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ2017ರ ಡಿಸೆಂಬರ್ 31ರಂದುಕಬೀರ್ ಕಲಾ ಮಂಚ್, ಸಾಂಭಜೀ ಬ್ರಿಗೇಡ್, ಮುಸ್ಲಿಂ ಮೂಲ್‌ನಿವಾಸಿ ಸಂಘ್, ರಾಷ್ಟ್ರ ಸೇವಾ ದಲ್ ಮತ್ತಿತರ 200ಕ್ಕೂ ಹೆಚ್ಚು ಸಂಘಟನೆಗಳು ಪುಣೆಯ ಶನಿವಾರ್ ವಾಡಾದಲ್ಲಿ ಬೃಹತ್ ಸಮಾವೇಶ ಮತ್ತು ಭೀಮಾ ನದಿ ತೀರದ ಕೋರೆಗಾಂವ್‌ವರೆಗೆ 40 ಕಿ.ಮೀ. ಜಾಥಾ ಹಮ್ಮಿಕೊಂಡಿದ್ದವು.

ಕಳೆದ ವರ್ಷ ಭೀಮಾ–ಕೋರೆಗಾಂವ್‌ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮಹಾರಾಷ್ಟ್ರದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ವಿವಿಧೆಡೆ ದಲಿತ ಸಂಘಟನೆಗಳು ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT