ಶನಿವಾರ, ಏಪ್ರಿಲ್ 4, 2020
19 °C

ಕಳೆದ 10 ವರ್ಷಗಳಲ್ಲಿ 21,211 ವಿದೇಶಿಯರಿಗೆ ಲಭಿಸಿದೆ ಭಾರತದ ಪೌರತ್ವ

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

Indian Flag

ನವದೆಹಲಿ: ಕಳೆದ 10 ವರ್ಷಗಳಲ್ಲಿ 21, 211 ವಿದೇಶಿಯರಿಗೆ ಭಾರತದ ಪೌರತ್ವ ಲಭಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತಿವೆ.

ಹೀಗೆ ಭಾರತದ ಪೌರತ್ವ ಪಡೆದವರಲ್ಲಿ ಬಾಂಗ್ಲಾದೇಶಿಯರು ಮೊದಲ ಸ್ಥಾನದಲ್ಲಿದ್ದಾರೆ. 2011 ಮತ್ತು 6 ಮಾರ್ಚ್ 2020 ಕಾಲಾವಧಿಯಲ್ಲಿ  15, 176 ಮಂದಿ ಬಾಂಗ್ಲಾದೇಶಿಯರಿಗೆ ಭಾರತದ ಪೌರತ್ವ ಲಭಿಸಿದೆ. ಅದೇ ವೇಳೆ 4,085 ಪಾಕಿಸ್ತಾನಿಗಳಿಗೆ ಭಾರತದ ಪೌರತ್ವ ಲಭಿಸಿದೆ.

ಭಾರತದ ಪೌರತ್ವ ಲಭಿಸಿದವರ ಪಟ್ಟಿಯಲ್ಲಿ ಪಾಕಿಸ್ತಾನಿಗಳು ಮೇಲುಗೈ ಸಾಧಿಸುತ್ತಿದ್ದರು. ಆದರೆ ಇಂಡೊ- ಬಾಂಗ್ಲಾದೇಶ ಭೂ ಗಡಿ ಒಪ್ಪಂದದ ನಂತರ 2015ರಲ್ಲಿ 14, 864 ಬಾಂಗ್ಲಾದೇಶಿಯರಿಗೆ ಭಾರತದ ಪೌರತ್ವ ಸಿಕ್ಕಿದೆ.

ಇದನ್ನೂ  ಓದಿ: ಭಾರತ–ಬಾಂಗ್ಲಾ ಭೂಗಡಿ ಅತಂತ್ರದಲ್ಲಿ ಸ್ಥಳೀಯರು

ಜೂನ್ 2015ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಪ್ರಕಾರ  ಭಾರತದಲ್ಲಿದ್ದ 17,160.63 ಎಕರೆ ವಿಸ್ತೀರ್ಣದ ಬಾಂಗ್ಲಾದೇಶದ ಭೂ ಪ್ರದೇಶ ಸುತ್ತುವರೆದಿರುವ 111 ಪ್ರದೇಶಗಳು (enclave) ಬಾಂಗ್ಲಾದೇಶಕ್ಕೆ ಮತ್ತು ಬಾಂಗ್ಲಾದೇಶದಲ್ಲಿದ್ದ 7,110.02 ಎಕರೆ ವಿಸ್ತೀರ್ಣದ ಭಾರತದ ಭೂ ಪ್ರದೇಶ ಸುತ್ತುವರೆದಿರುವ 51   ಪ್ರದೇಶಗಳು (ಎನ್‌ಕ್ಲೇವ್‌) ಭಾರತಕ್ಕೆ ಹಸ್ತಾಂತರವಾಗಿತ್ತು.

ಮೇಲೆ ಉಲ್ಲೇಖಿಸಿದ ಕಾಲಾವಧಿಯಲ್ಲಿ ಭಾರತದ ಪೌರತ್ವ ಪಡೆದ ಅಫ್ಘಾನಿಸ್ತಾನದ ಪ್ರಜೆಗಳ ಸಂಖ್ಯೆ 1,107  ಆಗಿದೆ ಎಂದು ಗೃಹಸಚಿವಾಲಯದ ರಾಜ್ಯ ಸಚಿವ  ನಿತ್ಯಾನಂದ ರಾಯ್ ಹೇಳಿದ್ದಾರೆ.

 ಬುಧವಾರ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ  ರವಿ ಪ್ರಕಾಶ್ ವರ್ಮಾ ಕೇಳಿದ  ಪ್ರಶ್ನೆಗೆ ರಾಯ್ ಈ ಅಂಕಿ ಅಂಶ ನೀಡಿ ಉತ್ತರಿಸಿದ್ದರು. 

ಇದನ್ನೂ  ಓದಿಪಾಕಿಸ್ತಾನದಿಂದ ವಲಸೆ ಬಂದ 44 ಮಂದಿಗೆ ಭಾರತದ ಪೌರತ್ವ

ಗೃಹ ಸಚಿವಾಲಯವು ಧರ್ಮದ ಆದಾರದಲ್ಲಿ ಈ ಅಂಕಿ ಅಂಶಗಳನ್ನು ನೀಡಿಲ್ಲ. ಫೆಬ್ರುವರಿ 11ರಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಲೋಕಸಭೆಯಲ್ಲಿ  ಕೇಳಿದ ಪ್ರಶ್ನೆಗೆ ಉತ್ತರಿಸಿದ  ಗೃಹ ಸಚಿವಾಲಯವು  1955 ಪೌರತ್ವ ಕಾಯ್ದೆ ಪ್ರಕಾರ ಜನರಿಗೆ ಪೌರತ್ವ ನೀಡಲಾಗಿದೆ. ಹಾಗಾಗಿ ಧರ್ಮದ ಆಧಾರದಲ್ಲಿ ಅಂಕಿ ಅಂಶಗಳನ್ನು ಸಿದ್ದಪಡಿಸಿಲ್ಲ ಎಂದಿದೆ.

ಆದಾಗ್ಯೂ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಜೆಂಡಾ ಆಜ್ ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ 600 ಮುಸ್ಲಿಮರಿಗೆ ಭಾರತದ ಪೌರತ್ವ ನೀಡಿದ್ದೇವೆ ಎಂದಿದ್ದರು.

 2019 ಡಿಸೆಂಬರ್ 11ರಂದು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡಿತ್ತು. ಈ ವೇಳೆ ಮಾತನಾಡಿದ್ದ ಅಮಿತ್ ಶಾ, ಇತ್ತೀಚಿನ ವರ್ಷಗಳಲ್ಲಿ 566 ಮುಸ್ಲಿಮರಿಗೆ ಪೌರತ್ವ ನೀಡಲಾಗಿತ್ತು ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿತ್ತು. 

ಆನ್‌ಲೈನ್ ಸಿಟಿಜನ್‌ಶಿಪ್ ಮೊಡ್ಯೂಲ್‌ನಲ್ಲಿನ ಮಾಹಿತಿ ಪ್ರಕಾರ ಪಾಕಿಸ್ತಾನದ 4,085 ಪ್ರಜೆಗಳ ಪೈಕಿ ಶೇ. 50ಕ್ಕಿಂತಲೂ ಹೆಚ್ಚು ಅಥವಾ  2,859 ಪ್ರಜೆಗಳಿಗೆ  2015ರ ನಂತರ ಪೌರತ್ವ ನೀಡಲಾಗಿದೆ. ಕಳೆದ ವರ್ಷ 809 ಮಂದಿಗೆ ಪೌರತ್ವ ಸಿಕ್ಕಿದೆ. ಈ ವರ್ಷ 191 ಪಾಕಿಸ್ತಾನಿಗಳಿಗೆ ಪೌರತ್ವ ಲಭಿಸಿದ್ದು, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಿಂದ ತಲಾ ಓರ್ವ ವ್ಯಕ್ತಿಗೆ ಭಾರತದ ಪೌರತ್ವ ಲಭಿಸಿದೆ. 

ಇದನ್ನೂ ಓದಿ:  ಪ್ರತಿಭಟನೆ ಮಧ್ಯೆ, ಪಾಕ್ ಮಹಿಳೆಗೆ ಭಾರತೀಯ ಪೌರತ್ವ!

2011- 15ರಲ್ಲಿ  263ರಿಂದ 356 ಪಾಕಿಸ್ತಾನಿ ಪ್ರಜೆಗಳು ಭಾರತದ ಪೌರತ್ವ ಪಡೆದಿದ್ದು, ಇದರ ನಂತರದ ವರ್ಷಗಳಲ್ಲಿ  ಪೌರತ್ವ ಪಡೆದವರ ಸಂಖ್ಯೆ 450ರಿಂದ 809ಕ್ಕೆ ಏರಿಕೆಯಾಗಿದೆ.  2013 ಮತ್ತು 2017ರ ಅವಧಿಯಲ್ಲಿ  ಭಾರತೀಯ ಪೌರತ್ವ ಪಡೆದ ಅಫ್ಘಾನಿಸ್ತಾನ ಪ್ರಜೆಗಳ ಸಂಖ್ಯೆ 117- 244 ಇದೆ. 

2011ರಲ್ಲಿ ಬಾಂಗ್ಲಾದೇಶಿ ಪ್ರಜೆಗಳಲ್ಲಿ 54 ಮಂದಿಗೆ ಭಾರತೀಯ ಪೌರತ್ವ ಲಭಿಸಿದೆ. 2011 ಮತ್ತು ಮಾರ್ಚ್ 2020ರ ಕಾಲಾವಧಿಯಲ್ಲ ಚೀನಾದ 8 ಪ್ರಜೆಗಳಿಗೆ ಮತ್ತು  ಮ್ಯಾನ್ಮಾರ್‌ನ 6 ಪ್ರಜೆಗಳಿಗೆ ಪೌರತ್ವ ಲಭಿಸಿದೆ. ಅದೇ ವೇಳೆ ಶ್ರೀಲಂಕಾದ 165 ಮತ್ತು ನೇಪಾಳದ 64 ಪ್ರಜೆಗಳಿಗೆ ಭಾರತದ ಪೌರತ್ವ ಲಭಿಸಿದೆ. ಅಂಕಿ ಅಂಶಗಳ ಪ್ರಕಾರ ಅಮೆರಿಕದ 149 ಪ್ರಜೆಗಳಿಗೆ ಮತ್ತು ಬ್ರಿಟನ್‌ನ 66 ಪ್ರಜೆಗಳಿಗೆ ಪೌರತ್ವ ಲಭಿಸಿದೆ.

 ಏತನ್ಮಧ್ಯೆ ಹಲವಾರು ಭಾರತೀಯರು ಕೆನಡಾ ಮತ್ತು ಆಸ್ಟ್ರೇಲಿಯಾಗೆ ವಲಸೆಹೋಗುವುದನ್ನು ಬಯಸಿದವರಾಗಿದ್ದಾರೆ. ಈ ಅವಧಿಯಲ್ಲಿ ಕೆನಡಾದ 27 ಮಂದಿ ಮತ್ತು ಆಸ್ಟ್ರೇಲಿಯಾದ 11 ಮಂದಿ ಭಾರತದ ಪೌರತ್ವ ಪಡೆದಿದ್ದಾರೆ.  

ತಂಜೇನಿಯಾ, ಕೆನ್ಯಾ, ಮಲೇಷ್ಯಾದ 34, ಇರಾನಿನ 25,  ಜರ್ಮನಿಯ 19 ಮಂದಿಗೆ ಪೌರತ್ವ ಲಭಿಸಿದೆ.
ಮೊಲ್ಡೊವಾ , ಮೊಜಾಂಬಿಕ್, ಯುಗೋಸ್ಲೋವಿಯಾ, ಇರಿಟ್ರಿಯಾ, ಜಮೈಕಾ, ಲೆಬನಾನ್, ಕ್ರೊವೇಷ್ಯಾ,  ಐರ್‌ಲೆಂಡ್,  ಅಲ್ಜೀರಿಯಾ, ಉಗಾಂಡಾ, ಜಪಾನ್,  ಬೆಲೀಜ್, ರಷ್ಯಾ ಮತ್ತು ವೆನುಜ್ವೆಲಾ ದೇಶದವರಿಗೂ ಭಾರತ ಪೌರತ್ವ ನೀಡಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು