ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ: ಇನ್ನೂ ಮಾಸದ ಕರಾಳ ನೆನಪು

Last Updated 25 ನವೆಂಬರ್ 2018, 18:57 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ/ವಡೋದರ: ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಈಗ ದಶಕ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿತ್ತು. ಈ ಕರಾಳ ಘಟನೆ ದೇಶದ ಆಂತರಿಕ ಸುರಕ್ಷತೆ ಮತ್ತು ಭದ್ರತೆಗೂ ಸವಾಲೊಡ್ಡಿತ್ತು.

2008ರ ನವೆಂಬರ್‌ 26ರಂದು ಲಷ್ಕರ್–ಎ–ತಯಬ (ಎಲ್‌ಇಟಿ) ಸಂಘಟನೆಯ ಹತ್ತು ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಕರಾಚಿಯಿಂದ ದೋಣಿಯಲ್ಲಿ ಬಂದು ಮುಂಬೈಗೆ ನುಸುಳಿದ್ದರು. ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್‌, ತಾಜ್‌ಮಹಲ್‌ ಹೋಟೆಲ್‌, ಟ್ರೈಡೆಂಟ್‌ ಹೋಟೆಲ್‌ ಮತ್ತು ಯಹೂದಿ ಕೇಂದ್ರಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿ ಅಮಾಯಕರನ್ನು ಬಲಿತೆಗೆದುಕೊಂಡಿದ್ದರು.

10 ದೇಶಗಳ 28 ವಿದೇಶಿಯರು ಸೇರಿದಂತೆ 166 ಮಂದಿ ಉಗ್ರರ ದಾಳಿಗೆ ಜೀವತೆತ್ತಿದ್ದರು. ಒಂಬತ್ತು ಉಗ್ರರನ್ನು ಕಮಾಂಡೊ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಅಜ್ಮಲ್‌ ಕಸಾಬ್‌ ಮಾತ್ರ ಜೀವಂತವಾಗಿ ಸೆರೆ ಸಿಕ್ಕಿದ್ದ.

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ, ಐಪಿಎಸ್‌ ಅಧಿಕಾರಿ ಅಶೋಕ್‌ ಕಾಮ್ಟೆ ಹಾಗೂ ಎನ್‌ಕೌಂಟರ್ ಪರಿಣತ ವಿಜಯ ಸಲಾಸ್ಕರ್‌ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.

ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಮುಂಬೈ ನಗರ ತಲ್ಲಣಗೊಂಡು ಸ್ತಬ್ಧಗೊಂಡಿತ್ತು. ಜತೆಗೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟು, ಯುದ್ಧದ ಸನ್ನಿವೇಶವನ್ನೇ ಸೃಷ್ಟಿಸಿತ್ತು. ದೇಶದ ಸಾರ್ವಭೌಮತೆ ಮೇಲೆ ದಾಳಿ ನಡೆಸಲಾಗಿದೆ ಎನ್ನುವ ಆತಂಕ ಮತ್ತು ಎಚ್ಚರಿಕೆಯ ಮಾತುಗಳು ಕೇಳಿ ಬಂದಿದ್ದವು.

ಕರಾವಳಿ ಭದ್ರತಾ ಪಡೆಯಲ್ಲಿನ ಲೋಪದೋಷಗಳು, ಬೇಹುಗಾರಿಕೆ ಮಾಹಿತಿ ಸಂಗ್ರಹದಲ್ಲಿನ ವೈಫಲ್ಯ ಹಾಗೂ ವಿವಿಧ ಭದ್ರತಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ಸಹ ದಾಳಿ ಎತ್ತಿ ತೋರಿಸಿತ್ತು.

‘ದಾಳಿ ನಡೆದು ಹತ್ತು ವರ್ಷಗಳಾದರೂ ಪಾಕಿಸ್ತಾನ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನ ಸರ್ಕಾರವೇ ಇದಕ್ಕೆ ಹೊಣೆ’ ಎಂದು ಹಿರಿಯ ವಕೀಲ ಮತ್ತು ಮುಂಬೈ ದಾಳಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕ್ಕಂ ಹೇಳಿದ್ದಾರೆ.

ದಾಳಿಯ ಪ್ರಮುಖ ಸಂಚುಕೋರ ಎನ್ನಲಾದ, ನಿಷೇಧಿತ ಜಮಾತ್‌–ಉದ್‌– ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್‌ ಪಾಕಿಸ್ತಾನದಲ್ಲಿ ಈಗ ಮುಕ್ತವಾಗಿ ಸಂಚರಿಸುತ್ತಿದ್ದಾನೆ. ಜತೆಗೆ, ಈ ದಾಳಿಗೆ ಸಂಬಂಧಪಟ್ಟ ಪಾಕಿಸ್ತಾನದ ಶಂಕಿತ ಏಳು ಮಂದಿಗೂ ಇನ್ನೂ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ.

**

‘ದಾಳಿ ಈಗ ಮೊದಲಿನಷ್ಟು ಸುಲಭವಲ್ಲ’

ನವದೆಹಲಿ: ಭಾರತ ಈಗ ಯಾವುದೇ ಸ್ಥಿತಿ ಎದುರಿಸಲು ಅತ್ಯಂತ ಉತ್ತಮ ರೀತಿಯಲ್ಲಿ ಸನ್ನದ್ಧವಾಗಿದೆ ಮತ್ತು ಹೆಚ್ಚು ಸಂಘಟಿತವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ತಿಳಿಸಿದ್ದಾರೆ.

ಸಮುದ್ರ ಮಾರ್ಗದ ಮೂಲಕ ಭಾರತದಲ್ಲಿ ಮತ್ತೊಮ್ಮೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಕುರಿತ ಆತಂಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಮುಂಬೈ ದಾಳಿ ಬಳಿಕ ಕಡಲತೀರದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಕರಾವಳಿ ಭದ್ರತಾ ವ್ಯವಸ್ಥೆಯಲ್ಲಿ ಅಪಾರ ಬದಲಾವಣೆಗಳನ್ನು ಮಾಡಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೀಗಾಗಿ, ಕರಾವಳಿ ಪ್ರದೇಶದಲ್ಲಿ ಭದ್ರತಾ ಕೋಟೆ ಭೇದಿಸುವುದು ಈಗ ಸುಲಭವಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಮತ್ತೆ ಉಗ್ರರ ದಾಳಿ ನಡೆದರೆ ಯುದ್ಧ’

ವಾಷಿಂಗ್ಟನ್‌: ಪಾಕಿಸ್ತಾನದ ನೆರವಿನೊಂದಿಗೆ ಭಾರತದಲ್ಲಿ ಉಗ್ರರು ಮತ್ತೊಮ್ಮೆ ದಾಳಿ ನಡೆಸಿದರೆ, ಉಭಯ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ‘ಎಲ್‌ಇಟಿ ಮತ್ತು ಐಎಸ್‌ಐ ಸಂಚುಕೋರರಿಗೆ ಪಾಕಿಸ್ತಾನದಲ್ಲಿ ಶಿಕ್ಷೆ ಅಸಾಧ್ಯ’ ಎಂದು ಅಮೆರಿಕದ ಕೇಂದ್ರೀಯ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿ ಬ್ರೂಸ್‌ ರೀಡಲ್‌ ಹೇಳಿದ್ದಾರೆ.

ಭಾರತೀಯ ನೌಕಾಪಡೆ ಈಗ ಬಹು ಆಯಾಮಗಳ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಕರಾವಳಿ ಪಡೆ ಸೇರಿದಂತೆ ವಿವಿಧ ಇಲಾಖೆಗಳಿವೆ. 42 ರೇಡಾರ್‌ ಸ್ಟೇಷನ್‌ಗಳನ್ನು ಸಹ ಸ್ಥಾಪಿಸಲಾಗಿದ್ದು, ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿ ಜತೆ ಅವು ನಿರಂತರ ಸಂಪರ್ಕ ಹೊಂದಿವೆ. ಈ ರೇಡಾರ್‌ ಸ್ಟೇಷನ್‌ಗಳಿಗೆ ಹೆಚ್ಚು ಸ್ಪಷ್ಟವಾಗಿ ಚಿತ್ರಗಳನ್ನು ಸೆರೆ ಹಿಡಿಯುವ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

10 ನಾಟಿಕಲ್‌ ಮೈಲಿಗಳ ವ್ಯಾಪ್ತಿಯಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಈ ಕ್ಯಾಮೆರಾಗಳು ಹೊಂದಿವೆ. ಒಟ್ಟಾರೆ, ಕರಾವಳಿ ತೀರದ 7,500 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲು ಹೊಸದಾಗಿ 38 ರೇಡಾರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಗಲಿರುಳೂ ಸಾವಿರಾರು ಮೀನುಗಾರಿಕೆ ದೋಣಿಗಳ ಮೇಲೆ ನಿಗಾ ವಹಿಸುವುದು ಅತಿ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಈಗ ಇವುಗಳ ಚಲನವಲನದ ಮೇಲೆ ಕಣ್ಣಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೀನುಗಾರಿಕೆ ದೋಣಿಗಳಿಗೆ ಬಣ್ಣಗಳನ್ನು ನಿಗದಿಪಡಿಸಲಾಗಿದೆ. ಮೀನುಗಾರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಬೇಹುಗಾರಿಕೆಯನ್ನು ಮತ್ತಷ್ಟು ಸುಧಾರಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಗುರುಗ್ರಾಮದಲ್ಲಿ ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರ ಸ್ಥಾಪಿಸಲಾಗಿದ್ದು, ಕರಾವಳಿ ಪಡೆ ಹಾಗೂ ನೌಕಾಪಡೆ ನಡುವೆ ಬೇಹುಗಾರಿಕೆ ಮಾಹಿತಿ ವಿನಿಮಯಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

**

ಕರಾಚಿಯಲ್ಲಿ ತರಬೇತಿ ಪಡೆದಿದ್ದ ಕಸಾಬ್‌

ಮುಂಬೈ: ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಅಪರಾಧಿ ಅಜ್ಮಲ್‌ ಕಸಾಬ್‌ಗೆ ಕರಾಚಿಯ ಸಮುದ್ರದಲ್ಲಿ ತರಬೇತಿ ನೀಡಲಾಗಿತ್ತು ಎನ್ನುವುದನ್ನು ಪುಸ್ತಕವೊಂದರಲ್ಲಿ ಬಹಿರಂಗಪಡಿಸಲಾಗಿದೆ.

ಇತಿಹಾಸಕಾರ ಸರೋಜ್‌ ಕುಮಾರ್‌ ಅವರು ಬರೆದಿರುವ ‘ಫ್ರಾಜೈಲ್‌ ಫ್ರಾಂಟಿಯರ್ಸ್‌: ದಿ ಸೀಕ್ರೆಟ್‌ ಹಿಸ್ಟರಿ ಆಫ್‌ ಮುಂಬೈ ಟೆರರ್‌ ಅಟ್ಯಾಕ್ಸ್‌’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಸೋತೆ ಎಂದಿದ್ದ...

ಮುಂಬೈ: ‘ನಿಮಗೆ ಜಯ ದೊರೆಯಿತು. ನಾನು ಸೋತೆ’.

ಇದು ಪಾಕಿಸ್ತಾನಿ ಉಗ್ರ ಅಜ್ಮಲ್‌ ಕಸಾಬ್‌ನ ಕೊನೆಯ ಮಾತುಗಳು.

ಕಸಾಬ್‌ನನ್ನು ಗಲ್ಲಿಗೇರಿಸಲು ಕರೆದೊಯ್ಯುವ ಮುನ್ನ ತನಿಖಾಧಿಕಾರಿಯಾಗಿದ್ದ ರಮೇಶ್‌ ಮಹಾಲೆ ಜತೆ ಮಾತನಾಡಿದ್ದ ಕಸಾಬ್‌, ‘ಸಾಬ್‌ ಆಪ್‌ ಜೀತ್‌ ಗಯೆ, ಮೈ ಹಾರ್‌ ಗಯಾ’ ಎಂದು ಹೇಳಿದ್ದ ಎಂದು ಡಿಜಿಪಿ ದತ್ತ ಪಡ್ಸಲ್‌ಗೈಕರ್‌ ತಿಳಿಸಿದ್ದಾರೆ.

‘ಹೌ ಟು ಫಿಷ್‌’ ಎನ್ನುವ ಹೆಸರಿನಲ್ಲಿ ಈ ತರಬೇತಿ ನೀಡಲಾಗಿತ್ತು. ಈ ತರಬೇತಿಯಿಂದ ಉತ್ತಮ ಉದ್ಯೋಗ ದೊರೆಯಲಿದ್ದು, ಗೌರವಾನ್ವಿತವಾಗಿ ಬದುಕಬಹುದು ಎಂದು ಕಸಾಬ್‌ ಯೋಚಿಸುವಂತೆ ಮಾಡಲಾಗಿತ್ತು.

ಆದರೆ, ಮೀನುಗಾರ ಮತ್ತು ನಾವಿಕನ ರೀತಿಯಲ್ಲಿ ಏಕೆ ತರಬೇತಿ ನೀಡಲಾಗುತ್ತಿದೆ ಎನ್ನುವುದನ್ನು ತನಗೆ ಎಲ್‌ಇಟಿ ತಿಳಿಸಿರಲಿಲ್ಲ ಎಂದು ಕಸಾಬ್‌ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಸಮುದ್ರದ ಮೂಲಕ ದಾಳಿ ನಡೆಸುವ ಯೋಜನೆ ಸೋರಿಕೆಯಾಗುವ ಸಾಧ್ಯತೆಗಳಿದ್ದುದರಿಂದ, ಅದು ಅತ್ಯಂತ ರಹಸ್ಯವಾಗಿರುವಂತೆ ಎಲ್‌ಇಟಿ ಕಮಾಂಡರ್‌ಗಳಾದ ಹಫೀಸ್‌ ಸಯೀದ್‌, ಝಕಿ–ಉರ್‌ ರೆಹಮಾನ್‌ ಲಖ್ವಿ ಮತ್ತು ಅಬು ಹಮ್ಜಾ ಎಚ್ಚರ ವಹಿಸಿದ್ದರು.

ನವೆಂಬರ್‌ 26ರ ದಾಳಿಗೆ ಮುನ್ನವೇ ಉಗ್ರರನ್ನು ಮುಂಬೈಗೆ ಕಳುಹಿಸಲು ಎರಡು ಬಾರಿ ನಡೆಸಿದ್ದ ಪ್ರಯತ್ನಗಳು ವಿಫಲಗೊಂಡಿದ್ದವು. 2008ರ ಸೆಪ್ಟೆಂಬರ್‌ನಲ್ಲಿ ಈ ಉಗ್ರರಿದ್ದ ದೋಣಿ ಸಮುದ್ರದಲ್ಲಿನ ಬಂಡೆಗೆ ಡಿಕ್ಕಿ ಹೊಡೆದಾಗ ಅಪಾಯದಿಂದ ರಕ್ಷಿಸಲಾಗಿತ್ತು. ಇನ್ನೊಂದು ಬಾರಿ 2008ರ ನವೆಂಬರ್‌ 7ರಂದು ನುಸುಳುತ್ತಿದ್ದಾಗ ಭಾರತದ ದೋಣಿಯ ಕ್ಯಾಪ್ಟನ್‌ ಎಚ್ಚರಿಕೆ ನೀಡಿದ್ದರಿಂದ ಶರಣಾಗತರಾಗಲು ನಿರಾಕರಿಸಿ ಪರಾರಿಯಾಗಿದ್ದರು.

ದಾಳಿ ನಡೆಸಿದ ಉಗ್ರರಿಗೆ ಎರಡು ವರ್ಷಗಳ ತರಬೇತಿ ನೀಡುವ ಜವಾಬ್ದಾರಿಯನ್ನು ಎಲ್‌ಇಟಿ ಮತ್ತು ಐಎಸ್‌ಐ ಜಂಟಿಯಾಗಿ ವಹಿಸಿಕೊಂಡಿದ್ದವು ಎಂದು ಬರೆಯಲಾಗಿದೆ.

‘ಪಾರ್ಸಲ್‌’ ಹೆಸರಿನಲ್ಲಿ ಸ್ಥಳಾಂತರ: ಅಜ್ಮಲ್‌ ಕಸಾಬ್‌ನನ್ನು ಗಲ್ಲಿಗೇರಿಸಲು ಮುಂಬೈನಿಂದ ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಿಸುವ ವಿಷಯವನ್ನು ರಹಸ್ಯವಾಗಿ ಇಡಲಾಗಿತ್ತು.

ಸ್ಥಳಾಂತರದ ಕಾರ್ಯಾಚರಣೆಗೆ ‘ಪಾರ್ಸಲ್‌ ರೀಚ್ಡ್‌ ಫಾಕ್ಸ್‌’ ಹೆಸರಿಡಲಾಗಿತ್ತು. ಅಂದಿನ ಗೃಹ ಸಚಿವ ಆರ್‌.ಆರ್‌. ಪಾಟೀಲ ಮತ್ತು ಕೆಲವೇ ಹಿರಿಯ ಅಧಿಕಾರಿಗಳಿಗೆ ಮಾತ್ರವೇ ಈ ಕಾರ್ಯಾಚರಣೆಯ ಮಾಹಿತಿ ಇತ್ತು. ಒಟ್ಟು ಏಳು ಸಂಕೇತಗಳನ್ನು ಬಳಸಲು ಉದ್ದೇಶಿಸಲಾಗಿತ್ತು. ಕೊನೆಗೆ ‘ಪಾರ್ಸಲ್‌ ರೀಚ್ಡ್‌ ಫಾಕ್ಸ್‌’ ಬಳಸಲಾಯಿತು.

2012ರ ನವೆಂಬರ್‌ 20ರಂದು ಕಸಾಬ್‌ಗೆ ಬುರ್ಖಾ ಧರಿಸಿ ಮುಂಬೈನ ಆರ್ಥರ್‌ ರೋಡ್‌ ಜೈಲಿನಿಂದ ಪುಣೆಗೆ ಕರೆದೊಯ್ಯಲಾಯಿತು.

ಈ ಉಗ್ರರಿಗೆ ನಕಾಶೆ ಅಧ್ಯಯನ, ಸಮುದ್ರದ ಆಳ ಮತ್ತು ಜಿಪಿಎಸ್‌ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ತರಬೇತಿ ನೀಡಲಾಗಿತ್ತು. ಜತೆಗೆ ಮೀನುಗಾರರು ಬಳಸುವ ಬಲೆಯನ್ನು ಹೇಗೆ ಉಪಯೋಗಿಸಲಾಗುತ್ತದೆ ಎನ್ನುವುದನ್ನು ಸಹ ತಿಳಿಸಿಕೊಡಲಾಗಿತ್ತು. ಇದರ ಹಿಂದೆ ನೌಕಾಪಡೆಯ ಯೋಧರ ದಾರಿ ತಪ್ಪಿಸುವ ಉದ್ದೇಶವಿತ್ತು. ಜತೆಗೆ, ಆಹಾರವಿಲ್ಲದೆ 60 ಗಂಟೆಗಳ ಕಾಲ ಹೇಗಿರಬೇಕು ಎನ್ನುವ ಬಗ್ಗೆ ತರಬೇತಿ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

ಕಸಾಬ್‌ನನ್ನು 2012ರ ನವೆಂಬರ್‌ 21ರಂದು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

**

‘ಸಂದೀಪ್‌ಗೆ ಗೆಲುವೇ ಮುಖ್ಯವಾಗಿತ್ತು’

ಬೆಂಗಳೂರು: ‘ಸಂದೀಪ್‌ಗೆ ಗೆಲ್ಲುವ ಮನೋಭಾವವಿತ್ತು. ಹೀಗಾಗಿಯೇ ಆತ ಗೆಲ್ಲುವ ಛಲ ಹೊಂದಿರುವ ಸಚಿನ್‌ ತೆಂಡೂಲ್ಕರ್‌ ಅವರನ್ನು ಇಷ್ಟಪಡುತ್ತಿದ್ದ...’

–ಇದು ಪುತ್ರನನ್ನು ನೆನಪಿಸಿಕೊಂಡು ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಉನ್ನಿ ಕೃಷ್ಣನ್‌ ಅವರು ಹೇಳಿದ ಮಾತುಗಳು.

ಮುಂಬೈನ ತಾಜ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊಗಳ ನೇತೃತ್ವ ವಹಿಸಿದ್ದ ಸಂದೀಪ್‌ ಉನ್ನಿಕೃಷ್ಣನ್‌ ಹುತಾತ್ಮರಾಗಿದ್ದರು.

‘ನಮ್ಮ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಗೆಲ್ಲಬೇಕು ಎಂದು ಸಂದೀಪ್‌ ಯಾವಾಗಲೂ ಬಯಸುತ್ತಿದ್ದ. ಸೋಲನ್ನು ಆತ ಇಷ್ಟಪಡುತ್ತಿರಲಿಲ್ಲ. ಕ್ರಿಕೆಟ್‌ನಲ್ಲಿ ಭಾರತ ಸೋತರೆ ಆತನಿಗೆ ನಿರಾಸೆಯಾಗುತ್ತಿತ್ತು. ಇಸ್ರೊದ ಯಾವುದಾದರೂ ಯೋಜನೆಗಳು ವಿಫಲವಾದರೆ ನನಗೆ ಸಾಂತ್ವನ ಹೇಳುತ್ತಿದ್ದ’ ಎಂದು ಇಸ್ರೊ ನಿವೃತ್ತ ಅಧಿಕಾರಿಯೂ ಆಗಿರುವ ಉನ್ನಿ ಕೃಷ್ಣನ್‌ ತಿಳಿಸಿದರು.

‘ಆತನಿಗೆ ಉತ್ತಮ ವೇತನವಿತ್ತು. ಆದರೆ, ಆತ ಹುತಾತ್ಮನಾದ ಬಳಿಕ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಕೇವಲ ₹3ರಿಂದ 4ಸಾವಿರ ಇತ್ತು. ದುಬಾರಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಕಾರಣ ಹಣ ಉಳಿತಾಯ ಮಾಡಿಲ್ಲ ಎಂದು ಭಾವಿಸಿದ್ದೆ. ಆತನ ಸಹೋದ್ಯೋಗಿಗಳೇ ಸಂದೀಪ್‌ ಕೈಗೊಂಡಿದ್ದ ಸಮಾಜ ಸೇವೆ ಬಗ್ಗೆ ತಿಳಿಸಿದರು. ಜತೆಗೆ ದೇಣಿಗೆಗಳನ್ನು ಮತ್ತೆ ನೀಡುವಂತೆ ಹಲವೆಡೆಯಿಂದ ಪತ್ರಗಳು ಸಹ ಬರಲಾರಂಭಿಸಿದವು’ ಎಂದು ತಿಳಿಸಿದರು.

‘ನೀವು ಬರಬೇಡಿ. ನಾವು ಅವರನ್ನು ನೋಡಿಕೊಳ್ಳುತ್ತೇನೆ’ ಎಂದು ಕಾರ್ಯಾಚರಣೆ ಸಂದರ್ಭದಲ್ಲಿ ತನ್ನ ಸಹೋದ್ಯೋಗಿಗಳಿಗೆ ಸಂದೀಪ್‌ ಹೇಳಿದ್ದ ಕೊನೆಯ ಮಾತು.

ಸಂದೀಪ್‌ ಅವರ ಶೌರ್ಯ ಮತ್ತು ಸೇವೆ ಗುರುತಿಸಿ ‘ಅಶೋಕ ಚಕ್ರ’ ಪ್ರಶಸ್ತಿಯನ್ನು 2009ರ ಜನವರಿಯಲ್ಲಿ ನೀಡಲಾಯಿತು.

**

ಮುಂಬೈ ಈಗ ಸುರಕ್ಷಿತವಾಗಿದ್ದು, ಉಗ್ರರ ಯಾವುದೇ ಬೆದರಿಕೆ ಎದುರಿಸಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಹ ನಾವು ಹೊಂದಿದ್ದೇವೆ.
–ಸುಬೋಧ ಕುಮಾರ್‌ ಜೈಸವಾಲ್‌,ಮುಂಬೈ ಪೊಲೀಸ್‌ ಆಯುಕ್ತ

**

ಎಲ್‌ಇಟಿ ಮತ್ತು ಐಎಸ್‌ಐ ಸಂಚುಕೋರರಿಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ. ಪಾಕಿಸ್ತಾನದಲ್ಲಿ ಇದು ಅಸಾಧ್ಯವೂ ಹೌದು.
–ಬ್ರೂಸ್‌ ರೀಡಲ್‌,ಅಮೆರಿಕದ ಕೇಂದ್ರೀಯ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT