ಶನಿವಾರ, ಫೆಬ್ರವರಿ 22, 2020
19 °C

ಕಾಶ್ಮೀರ: ನಿರ್ಬಂಧಿತ 2ಜಿ ಇಂಟರ್‌ನೆಟ್‌ ಸೇವೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಳೆದ ಆರು ತಿಂಗಳಿಂದ ಇಂಟರ್‌ನೆಟ್‌ ಸೇವೆ ಇಲ್ಲದೇ ಬೇಸತ್ತಿದ್ದ ಕಾಶ್ಮೀರ ಕಣಿವೆಯ ಜನರಿಗೆ ಶುಕ್ರವಾರ (ಜ.25) ಮಧ್ಯರಾತ್ರಿಯಿಂದ ಫೋಸ್ಟ್‌ಪೇಯ್ಡ್‌ ಹಾಗೂ ಪ್ರಿಪೇಯ್ಡ್‌ ಮೊಬೈಲ್‌ ಹಾಗೂ ಲ್ಯಾಂಡ್‌ ಲೈನ್‌ಗಳಿಗೆ 2ಜಿ ಇಂಟರ್‌ನೆಟ್‌ ಸೇವೆ ಒದಗಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದಾಗಿದೆ.

ಆಗಸ್ಟ್‌ 5ರಂದು ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೆಯ ವಿಧಿಯನ್ನು ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೊಂಚ ಪ್ರಮಾಣದಲ್ಲಿ ನಿರ್ಬಂಧಿತ ಇಂಟರ್‌ನೆಟ್‌ ಸೇವೆಯನ್ನು ಒದಗಿಸಿದೆ.

ಸರ್ಕಾರವು 301 ವೆಬ್‌ಸೈಟ್‌ಗಳನ್ನು ಗುರುತಿಸಿದ್ದು, ಅವುಗಳು ಮಾತ್ರ ಲಭ್ಯವಾಗಲಿವೆ. ಕೆಲ ನಿರ್ಬಂಧದ ನಡುವೆ ಸಾಮಾಜಿಕ ಜಾಲತಾಣದ ಬಳಕೆಗೂ ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ನಿರ್ಬಂಧಗಳು ಜನವರಿ 31ರವರೆಗೆ ಮುಂದುವರೆಯಲಿದೆ ಎಂದು ಗೃಹ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರ ನಿಗದಿಪಡಿಸಿದ ವೆಬ್‌ಸೈಟ್‌ಗಳು ಜನರಿಗೆ ಲಭ್ಯವಾಗುವಂತೆ ಹಾಗೂ ಜನರು ಬಳಸುವ ವೆಬ್‌ಸೈಟ್‌ಗಳ ಮೇಲೆ ಕಣ್ಣಿಡುವಂತೆ ಸೇವಾ ಕಂಪೆನಿಗಳಿಗೆ ಸೂಚಿಸಲಾಗಿದ್ದು, ಯಾವುದೇ ರೀತಿಯ ದುರ್ಬಳಕೆ ಕಂಡು ಬಂದರೆ ಸಂಬಂಧಿತ ಸೇವಾ ಕಂಪನಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತಕ್ಷಣವೇ ಸೇವೆ ಒದಗಿಸುವ ಕುರಿತು ಕ್ರಮ ಕೈಗೊಳ್ಳಲು ಎಲ್ಲ ಟೆಲಿಕಾಂ ಹಾಗೂ ಇಂಟರ್‌ ನೆಟ್‌ ಸೇವಾ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಜಮ್ಮು ಕಾಶ್ಮೀರ ವಲಯದ ಐಜಿಪಿಗೆ ಸೂಚನೆ ನೀಡಲಾಗಿದೆ.

ಕಾಶ್ಮೀರ ಕಣಿವೆಯಲ್ಲಿನ ಇಂಟರ್‌ನೆಟ್‌ ಸೇವೆಯ ನಿರ್ಬಂಧಗಳ ಕುರಿತು ಈಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು, ಇಂಟರ್ನೆಟ್ ಸಂಪರ್ಕವು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅವಿಭಾಜ್ಯ ಅಂಗ. ಸರ್ಕಾರದ ನಿರ್ಧಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತದೆ ಎಂಬ ಕಾರಣಕ್ಕೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸುವುದು ಸರಿಯಲ್ಲ. ಇಂಟರ್‌ ಸೇವೆ ಒದಗಿಸುವ ಕುರಿತು ವಾರದ ಒಳಗಾಗಿ ಪರಿಶೀಲಿಸುವಂತೆ  ಜಮ್ಮು ಮತ್ತು ಕಾಶ್ಮೀರಕ್ಕೆ ಸೂಚನೆ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು