ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಬಿಸಿಲಿನ ತಾಪ: ನಾಲ್ವರು ಬಲಿ

ಆಗ್ರಾದಿಂದ ಕೊಯಮತ್ತೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿದ್ದವರ ಸಾವು
Last Updated 11 ಜೂನ್ 2019, 19:45 IST
ಅಕ್ಷರ ಗಾತ್ರ

ಝಾನ್ಸಿ: ಆಗ್ರಾದಿಂದ ಕೊಯಮತ್ತೂರಿಗೆ ಕೇರಳ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತೆರಳುತ್ತಿದ್ದ ನಾಲ್ವರು ಪ್ರಯಾಣಿಕರು ಬಿಸಿಲಿನ ತೀವ್ರ ತಾಪದಿಂದ ಮೃತಪಟ್ಟಿದ್ದಾರೆ.

ದೆಹಲಿ–ತಿರುವನಂತಪುರ ಮಾರ್ಗದ ರೈಲಿನ ಸ್ಲೀಪರ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇವರೆಲ್ಲರೂ ಹಿರಿಯ ನಾಗರಿಕರು. 68 ಪ್ರವಾಸಿಗರ ತಂಡದಲ್ಲಿದ್ದ ಇವರು ವಾರಾಣಸಿ ಹಾಗೂ ಆಗ್ರಾ ಭೇಟಿ ಮುಗಿಸಿ ವಾಪಸಾಗುತ್ತಿದ್ದಾಗ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಆಗ್ರಾದಲ್ಲಿ ರೈಲು ಹತ್ತಿದ್ದ ಇವರು ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡರು. ರೈಲು ಝಾನ್ಸಿ ರೈಲು ನಿಲ್ದಾಣ ತಲುಪುವಷ್ಟರಲ್ಲಿ ಮೂವರು ಕೊನೆಯುಸಿರೆಳೆದಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮತ್ತೊಬ್ಬ ವ್ಯಕ್ತಿ ಝಾನ್ಸಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಪಚ್ಚಯ್ಯ (80), ಬಾಲಕೃಷ್ಣನ್ (67), ಧನಲಕ್ಷ್ಮಿ (74) ಮತ್ತು ಸುಬ್ಬರಾಯ (71) ಎಂದು ಗುರುತಿಸಲಾಗಿದೆ.

ಹವಾನಿಯಂತ್ರಣ ರಹಿತ ಬೋಗಿಯಲ್ಲಿ ಅವರೆಲ್ಲ ಪ್ರಯಾಣಿಸುತ್ತಿದ್ದರು. ಅತಿಯಾದ ಬಿಸಿಲಿನ ಹೊಡೆತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶವಪರೀಕ್ಷೆ ವರದಿ ಕೈಸೇರಿದ ಬಳಿಕಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬಿಸಿಗಾಳಿ ಮುನ್ಸೂಚನೆ

ಮುಂದಿನ ಐದು ದಿನಗಳಲ್ಲಿಮಧ್ಯಪ್ರದೇಶ, ಹರಿಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಮರಾಠವಾಡ, ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಛತ್ತೀಸಗಡ, ದೆಹಲಿ, ಬಿಹಾರ, ಸೌರಾಷ್ಟ್ರ, ಕಛ್, ಮಧ್ಯ ಮಹಾರಾಷ್ಟ್ರ, ವಿದರ್ಭದ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಅಂಕಿ–ಅಂಶ

6,000 – 2010ರಿಂದ ಈವರೆಗೆ ಭಾರತದಲ್ಲಿ ಬಿಸಿಗಾಳಿಯಿಂದ ಮೃತಪಟ್ಟವರ ಸಂಖ್ಯೆ

50 ಡಿಗ್ರಿ ಸೆಲ್ಸಿಯಸ್ – ರಾಜಸ್ಥಾನದ ಚುರು ಎಂಬಲ್ಲಿ ವಾರದಲ್ಲಿ 2 ಬಾರಿ ದಾಖಲಾದ ಉಷ್ಣಾಂಶ

ದಾಖಲೆ ಬರೆದ ಬಿಸಿಲು

ದೇಶವು ಈ ಬಾರಿ ಅತಿಹೆಚ್ಚು ಬಿಸಿಗಾಳಿಗೆ ಸಾಕ್ಷಿಯಾಗಿದ್ದು, ನಾಲ್ಕು ನಗರಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಚುರು, ದೆಹಲಿ, ಉತ್ತರ ಪ್ರದೇಶದ ಅಲಹಾಬಾದ್ ಹಾಗೂ ಬಾಂಡಾದಲ್ಲಿ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿದ್ದಾರೆ.

ಚುರುವಿನಲ್ಲಿ 50 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ಒಂದೇ ವಾರದಲ್ಲಿ ಎರಡು ಬಾರಿ ದಾಖಲಾಗಿದೆ. ಸಾಮಾನ್ಯ ತಾಪಮಾನಕ್ಕಿಂತ 8 ಡಿಗ್ರಿ ಹೆಚ್ಚು ಉಷ್ಣಾಂಶ ಕಂಡುಬಂದಿದೆ.

ದೆಹಲಿಯಲ್ಲಿ ಬಿಸಿಲಿನ ತಾಪ ಜೋರಾಗಿಯೇ ಇದೆ. ಸೋಮವಾರ ನಗರದಲ್ಲಿ ಸಾರ್ವಕಾಲಿಕ ದಾಖಲೆಯ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಜೂನ್ 9, 2014ರಲ್ಲಿ 47.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವೇ ಈವರೆಗಿನ ಅತಿಹೆಚ್ಚು ತಾಪಮಾನವಾಗಿತ್ತು. ಬಿಸಿಗಾಳಿಯು ದೆಹಲಿ ಜನರನ್ನು ಹೈರಾಣಾಗಿಸಿದೆ.

ಬಂಡಾದಲ್ಲಿ 48.2 ಡಿಗ್ರಿ, ಅಲಹಾಬಾದ್‌ನಲ್ಲಿ 48.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವರ್ಷದಿಂದ ಕ್ರಮೇಣವಾಗಿ ತಾಪಮಾನ ಏರಿಕೆಯಾಗುತ್ತಿದೆ. ಕಳೆದ ವಾರ ಅತ್ಯಂತ ಬಿಸಿಯ 15 ತಾಣಗಳ 11 ಭಾರತದಲ್ಲೇ ಇದ್ದವು.

ಮನೆಯಿಂದ ಹೊರಬರದಂತೆ ಸೂಚನೆ

ಬಿಸಿಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮನೆಯಿಂದ ಹೊರಬರದಂತೆ ಒಡಿಶಾದ ವಿಪತ್ತು ನಿರ್ವಹಣೆ ಪ್ರಾಧಿಕಾರವು ಜನರಿಗೆ ಮುನ್ಸೂಚನೆ ನೀಡಿದೆ. 27 ಜಿಲ್ಲೆಗಳಲ್ಲಿ ವಾರಾಂತ್ಯದವರೆಗೂ ಮುನ್ನೆಚ್ಚರಿಕೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಮಧ್ಯಾಹ್ನ 12ರಿಂದ 3 ಗಂಟೆವರೆಗೂ ಸಾಧ್ಯವಾದಷ್ಟೂ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಲಾಗಿದೆ. ‘ಹೆಚ್ಚು ನೀರು ಕುಡಿಯಿರಿ, ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಕೆಲಸದ ಅವಧಿಯನ್ನು ಬದಲಿಸಿಕೊಳ್ಳಿ, ತಂಪು ವಾತಾವರಣದಲ್ಲಿ ಕೆಲಸ ಮಾಡಿ’ ಎಂದು ಸಲಹೆ ನೀಡಲಾಗಿದೆ.

ಬಿಸಿಲಿನ ಹೊಡೆತದಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ತೆರೆಯಲಾಗಿದೆ. ರಾಜಧಾನಿ ಭುವನೇಶ್ವರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಕರಾವಳಿ ಭಾಗದಲ್ಲಿ ಈ ಬೇಗೆ ಇನ್ನೂ ಜಾಸ್ತಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT