ಬುಧವಾರ, ಸೆಪ್ಟೆಂಬರ್ 23, 2020
20 °C

ಐದು ರಾಜ್ಯ ಮತದಾನ ಪೂರ್ಣ: ಫಲಿತಾಂಶಕ್ಕೆ ಎಲ್ಲರ ಕಾತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತೆಲಂಗಾಣ ಮತ್ತು ರಾಜಸ್ಥಾನ ವಿಧಾನಸಭೆಗಳ ಮತದಾನ ಶುಕ್ರವಾರ ಪೂರ್ಣಗೊಂಡಿತು. ಇದರೊಂದಿಗೆ ಐದು ರಾಜ್ಯಗಳ ವಿಧಾನಸಭೆಯ ಮತದಾನ ಮುಗಿದಂತಾಯಿತು.

ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿದ ಮತಗಟ್ಟೆಗಳು ಫಲಿತಾಂಶದ ಭವಿಷ್ಯ ನುಡಿದಿದ್ದರೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಎದೆ ಡವಗುಟ್ಟುವಿಕೆ ಕೊನೆಯಾಗಲು ಮಂಗಳವಾರದ ವರೆಗೆ ಕಾಯಬೇಕಿದೆ. ಅಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. 

ಐದು ರಾಜ್ಯಗಳ ಫಲಿತಾಂಶವು ಮುಂದಿನ ವರ್ಷದ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸಲು ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಸಿದ್ಧವಿಲ್ಲ. 

ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಕೊಟ್ಟಿವೆ. ಹಾಗಿದ್ದರೂ ಕಾಂಗ್ರೆಸ್‌ಗೆ ಮತಯಂತ್ರಗಳ ಸುರಕ್ಷತೆಯ ಚಿಂತೆ ಕಾಡುತ್ತಿದೆ. 


ಹೈದರಾಬಾದ್‌ನ ಹೊರವಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಬೆರಳ ಶಾಯಿಯನ್ನು ತೋರಿಸುತ್ತಿರುವ ಲಂಬಾಣಿ ಮಹಿಳೆಯರು –ಎಎಫ್‌ಪಿ ಚಿತ್ರ

ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಮತಯಂತ್ರಗಳ ಸುರಕ್ಷತೆಯ ಬಗ್ಗೆ ಕಳವಳ ಇದೆ ಎಂದು ಕಾಂಗ್ರೆಸ್‌ ಡಿಸೆಂಬರ್‌ 1ರಂದೇ ಹೇಳಿತ್ತು. ಚುನಾವಣಾ ಆಯೋಗಕ್ಕೆ ನಿಯೋಗದಲ್ಲಿ ಹೋಗಿ ಸುರಕ್ಷತೆಯ ಖಾತರಿ ನೀಡಬೇಕು ಎಂದು ಕೋರಿತ್ತು. 

ಮತಯಂತ್ರಗಳನ್ನು ಇಟ್ಟಿರುವ ಕೊಠಡಿಗಳ ಹೊರಭಾಗದಲ್ಲಿ ಕೆಲವು ವ್ಯಕ್ತಿಗಳು ಕೈಯಲ್ಲಿ ಲ್ಯಾಪ್‌ಟಾಪ್‌ ಹಿಡಿದು ಅನುಮಾನಾಸ್ಪದವಾಗಿ ಓಡಾತ್ತಿರುವುದು, ಭೋಪಾಲ್‌ ನಗರದಲ್ಲಿ ಮತಯಂತ್ರ ಇಟ್ಟಿರುವ ಕೊಠಡಿಗೆ ವಿದ್ಯುತ್‌ ಸಂಪರ್ಕ ಕಡಿತವಾಗಿರುವುದು, ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದು ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿವೆ. 

* ಇದನ್ನೂ ಓದಿ: 5 ರಾಜ್ಯಗಳ ಮತಗಟ್ಟೆ ಸಮೀಕ್ಷೆ: ‘ಕಮಲ’ಕ್ಕೆ ಎಚ್ಚರಿಕೆ ಕಾಂಗ್ರೆಸ್‌ ಅಲ್ಪ ಚೇತರಿಕೆ

29 ಸಂಸತ್‌ ಕ್ಷೇತ್ರಗಳಿರುವ ಮಧ್ಯಪ್ರದೇಶದ ಬಗ್ಗೆ ಕಾಂಗ್ರೆಸ್‌ಗೆ ಹೆಚ್ಚು ಆತಂಕ ಇದೆ. ಕಳೆದ ಬಾರಿ ಇಲ್ಲಿನ 27 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 29 ಕ್ಷೇತ್ರಗಳನ್ನೂ ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. 

ಈಗ ವಿಧಾನಸಭೆ ಚುನಾವಣೆ ನಡೆದಿರುವ ಐದು ರಾಜ್ಯಗಳಲ್ಲಿ ಲೋಕಸಭೆಯ 83 ಕ್ಷೇತ್ರಗಳಿವೆ. ಅವುಗಳ ಪೈಕಿ 62 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ಪಡೆದಿತ್ತು. ವಿಧಾನಸಭೆ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ದಟ್ಟ ಪ್ರಭಾವ ಬೀರುವ ಸಾಧ್ಯತೆ ಬಹಳ ಹೆಚ್ಚಾಗಿಯೇ ಇದೆ. 

ಮತದಾನ ಪ್ರಮಾಣ

* ತೆಲಂಗಾಣ: ಶೇಕಡಾ 67

* ರಾಜಸ್ಥಾನ: ಶೇಕಡಾ 74

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು