ಸೋಮವಾರ, ಮಾರ್ಚ್ 1, 2021
24 °C
ಪ್ಯಾರಡೈಸ್‌ ದಾಖಲೆಯಲ್ಲಿ ಕೇಂದ್ರ ಸಚಿವ ಜಯಂತ್‌ ಸಿನ್ಹಾ, ಸಂಸದ ಆರ್‌.ಕೆ. ಸಿನ್ಹಾ, ಹರ್ಷ ಮೊಯಿಲಿ, ಅಮಿತಾಭ್‌ ಬಚ್ಚನ್‌ ಹೆಸರು

714 ಭಾರತೀಯರ ಹೂಡಿಕೆ ಗುಟ್ಟು ರಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

714 ಭಾರತೀಯರ ಹೂಡಿಕೆ ಗುಟ್ಟು ರಟ್ಟು

ನವದೆಹಲಿ: ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮತ್ತು ಕಂಪೆನಿಗಳು ತೆರಿಗೆರಹಿತ ದೇಶಗಳಲ್ಲಿ ಮಾಡಿರುವ ಹೂಡಿಕೆಗಳ ದಾಖಲೆಗಳು ಸೋರಿಕೆಯಾಗಿವೆ. ಭಾರತದ ರಾಜಕಾರಣಿಗಳು, ಉದ್ಯಮ ಸಂಸ್ಥೆಗಳು, ಸಿನಿಮಾ ತಾರೆಯರು ಸೇರಿ 714 ಹೆಸರುಗಳು ‘ಪ್ಯಾರಡೈಸ್‌ ದಾಖಲೆಗಳು’ ಎಂದು ಹೆಸರಿಸಲಾದ ಈ ಪಟ್ಟಿಯಲ್ಲಿ ಸೇರಿವೆ.

ಹಿಂದಿ ಸಿನಿಮಾ ನಟ ಅಮಿತಾಭ್‌ ಬಚ್ಚನ್‌, ಬ್ಯಾಂಕುಗಳಿಗೆ ₹9,000 ಕೋಟಿ ಸಾಲ ಬಾಕಿ ಉಳಿಸಿ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ, ಉದ್ಯಮ ಸಂಧಾನಕಾರ್ತಿ ನೀರಾ ರಾಡಿಯಾ, ಸಿನಿಮಾ ನಟ ಸಂಜಯ ದತ್‌ ಹೆಂಡತಿ ದಿಲ್‌ನಾಶಿನ್‌ (ಮಾನ್ಯತಾ), ಕೇಂದ್ರ ಸಚಿವ ಜಯಂತ್‌ ಸಿನ್ಹಾ,

ರಾಜ್ಯಸಭಾ ಸದಸ್ಯ ಆರ್‌.ಕೆ. ಸಿನ್ಹಾ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಮಗ ಹರ್ಷ ಹೆಸರು ಈ ಪಟ್ಟಿಯಲ್ಲಿ ಇವೆ.

ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರಾಸ್‌, ಪಾಕಿಸ್ತಾನದ ಮಾಜಿ ಪ್ರಧಾನಿ ಶೌಕತ್‌ ಅಜೀಜ್‌ ಮುಂತಾದ ಪ್ರಭಾವಿಗಳೂ ಹೊರದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಪ್ಯಾರಡೈಸ್‌ ದಾಖಲೆಗಳು ಹೇಳಿವೆ.

ಬರ್ಮುಡಾದ ಆ್ಯಪಲ್‌ಬಿ ಮತ್ತು ಸಿಂಗಪುರದ ಏಷ್ಯಾಸಿಟಿ ಸಲಹಾ ಸಂಸ್ಥೆಗಳಿಂದ ಸೋರಿಕೆಯಾದ 1.34 ಕೋಟಿ ದಾಖಲೆಗಳನ್ನು ತನಿಖಾ ಪತ್ರಕರ್ತರ ಅಂತರಾಷ್ಟ್ರೀಯ ಕೂಟ (ಐಸಿಐಜೆ) ವಿಶ್ಲೇಷಿಸಿ ವರದಿ ಸಿದ್ಧಪಡಿಸಿದೆ. ಇದರಲ್ಲಿ ಹೆಚ್ಚಿನ ದಾಖಲೆಗಳು ಆ್ಯಪಲ್‌ಬಿ ಕಂಪೆನಿಗೆ ಸೇರಿದ್ದಾಗಿವೆ.

ಒಟ್ಟು 180 ದೇಶಗಳ ಜನರು ಮತ್ತು ಕಂಪೆನಿಗಳ ಮಾಹಿತಿ ಪ್ಯಾರಡೈಸ್‌ ದಾಖಲೆಗಳಲ್ಲಿ ಇವೆ. ಭಾರತಕ್ಕೆ ಇದರಲ್ಲಿ 19ನೇ ಸ್ಥಾನ ಇದೆ.ಜಾಗತಿಕ ಮಟ್ಟದಲ್ಲಿ...

* ದಾಖಲೆಗಳಲ್ಲಿ 120ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳ ಹೆಸರು

* ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ ಅವರಿಂದ ಕಳಂಕಿತ ಕಂಪೆನಿಯಲ್ಲಿ ಹೂಡಿಕೆ

* ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತರಾದ 13 ಮಂದಿ, ಕಾರ್ಯದರ್ಶಿಗಳು, ದೇಣಿಗೆ ಕೊಟ್ಟವರಿಂದಲೂ ತೆರಿಗೆರಹಿತ ಪ್ರದೇಶಗಳಲ್ಲಿ ಹೂಡಿಕೆ

* ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಳಿಯನ ಕಂಪೆನಿಯಲ್ಲಿ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರಾಸ್‌ ಅವರಿಂದ ಹೂಡಿಕೆ

* ಪಾಕಿಸ್ತಾನದ ಮಾಜಿ ಪ್ರಧಾನಿ ಶೌಕತ್‌ ಅಜೀಜ್‌ ಅವರ ಹೆಸರೂ ಇದೆ

* ಆ್ಯಪಲ್‌, ನೈಕಿ ಮತ್ತು ಉಬರ್‌ ಸೇರಿ 100ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪೆನಿಗಳುಬಹಿರಂಗವಾದದ್ದು ಹೇಗೆ

* ಜರ್ಮನಿಯ ಪತ್ರಿಕೆ ಜಿಡೋಟ್ಸ್‌ ಜೈತೊಂಗ್‌ಗೆ ಎರಡು ಸಲಹಾ ಸಂಸ್ಥೆಗಳ ಭಾರಿ ಪ್ರಮಾಣದ ದಾಖಲೆಗಳು ಸಿಕ್ಕವು

* ಪತ್ರಿಕೆಯು ಅದನ್ನು ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಕೂಟಕ್ಕೆ ಹಸ್ತಾಂತರಿಸಿತು

* 96 ಮಾಧ್ಯಮ ಸಂಸ್ಥೆಗಳು ಸದಸ್ಯರಾಗಿರುವ ಕೂಟವು ದಾಖಲೆಗಳ ವಿಶ್ಲೇಷಣೆ ನಡೆಸಿತು

* ಹತ್ತು ತಿಂಗಳು ದಾಖಲೆಗಳ ಪರಿಶೀಲನೆ ನಡೆಸಿ ಸೋಮವಾರ ವರದಿಯನ್ನು ಬಹಿರಂಗ ಮಾಡಲಾಗಿದೆಸಿನ್ಹಾ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ

ಕಪ್ಪುಹಣದ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ದ್ರೋಹ ಎಸಗಿದ್ದಾರೆ. ಪ್ಯಾರಡೈಸ್‌ ದಾಖಲೆಗಳಲ್ಲಿ ಹೆಸರು ಉಲ್ಲೇಖವಾಗಿರುವ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಮತ್ತು ಸಂಸದ ಆರ್‌.ಕೆ. ಸಿನ್ಹಾ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.ಬಹುಸಂಸ್ಥೆಗಳ ಗುಂಪಿನಿಂದ ತನಿಖೆ

ಒಂದೂಮುಕ್ಕಾಲು ವರ್ಷ ಹಿಂದೆ ಸೋರಿಕೆಯಾದ ಪನಾಮಾ ದಾಖಲೆಗಳ ಬಗ್ಗೆ ತನಿಖೆ ನಡೆಸಲು ಬಹುಸಂಸ್ಥೆಗಳ ಪ್ರತಿನಿಧಿಗಳಿರುವ ತನಿಖಾ ಗುಂಪ‍ನ್ನು ಸರ್ಕಾರ ರಚಿಸಿತ್ತು. ಅದೇ ಗುಂಪು ಪ್ಯಾರಡೈಸ್‌ ದಾಖಲೆಗಳಲ್ಲಿರುವ ಹೆಸರುಗಳ ಬಗ್ಗೆಯೂ ತನಿಖೆ ನಡೆಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ವಿಜಯ ಮಲ್ಯಗೆ ಲಾಭ

ವಿಜಯ ಮಲ್ಯ ಅವರು ಮಾಲೀಕರಾಗಿದ್ದ ಯುನೈಟೆಡ್‌ ಸ್ಪಿರಿಟ್ಸ್‌ ಲಿ.ನ ಮೂರು ಅಂಗಸಂಸ್ಥೆಗಳ ಭಾರಿ ಮೊತ್ತದ ಸಾಲವನ್ನು ಡಿಯಾಜಿಯೊ ಕಂಪೆನಿ ಮನ್ನಾ ಮಾಡಿತ್ತು. ಇದರಿಂದಾಗಿ ಮಲ್ಯ ಅವರಿಗೆ ₹10 ಸಾವಿರ ಕೋಟಿ ಲಾಭ ಆಗಿದೆ. ಡಿಯಾಜಿಯೊ ಕಂಪೆನಿಗೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಯುನೈಟೆಡ್‌ ಸ್ಪಿರಿಟ್ಸ್‌ ಮೂಲಕ ₹1,225 ಕೋಟಿ ದೊರೆತಿದೆ ಎಂದು ಐಸಿಐಜೆ ವರದಿ ಹೇಳಿದೆ.

ಅಮಿತಾಭ್ ಹೂಡಿಕೆ

ಅಮಿತಾಭ್‌ ಬಚ್ಚನ್‌ ಅವರು ಬರ್ಮುಡಾದ ಡಿಜಿಟಲ್‌ ಮಾಧ್ಯಮ ಕಂಪೆನಿಯೊಂದರಲ್ಲಿ ಷೇರುದಾರರಾಗಿದ್ದಾರೆ. 2000–01ರಲ್ಲಿ ಕೌನ್‌ ಬನೇಗಾ ಕ್ರೋರ್‌ಪತಿ ಕಾರ್ಯಕ್ರಮವನ್ನು ಅವರು ನಿರೂಪಿಸಿದ ಮರು ವರ್ಷ ಈ ವಹಿವಾಟು ನಡೆಸಿದ್ದಾರೆ. ಹಿಂದೆ ಬಹಿರಂಗವಾದ ಪನಾಮಾ ದಾಖಲೆಗಳಲ್ಲಿಯೂ ಅಮಿತಾಭ್‌ ಹೆಸರು ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.