ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಮಾತಿಗೆ 50ರ ಸಂಭ್ರಮ

Last Updated 25 ನವೆಂಬರ್ 2018, 18:37 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ‘ಮನದ ಮಾತು’ ಕಾರ್ಯಕ್ರಮವು ಭಾನುವಾರ 50ನೇ ಸಂಚಿಕೆಯನ್ನು ಪೂರೈಸಿದೆ. ‘ಈ ಆನ್‌ಲೈನ್ ಯುಗದಲ್ಲೂ ರೇಡಿಯೊ ಅತ್ಯಂತ ಪ್ರಬಲ ಮಾಧ್ಯಮವಾಗಿ ಉಳಿದಿದೆ. ಹೀಗಾಗಿ ಮನದ ಮಾತು ಕಾರ್ಯಕ್ರಮಕ್ಕೆ ನಾನು ರೇಡಿಯೊವನ್ನೇ ಆಯ್ಕೆ ಮಾಡಿಕೊಂಡೆ’ ಎಂದು ಮೋದಿ ಹೇಳಿದರು.

‘ಒಂದು ಮಾಧ್ಯಮವಾಗಿ ರೇಡಿಯೊ ಎಷ್ಟು ಪರಿಣಾಮಕಾರಿ ಎಂಬುದನ್ನು ನಾನು ಸ್ವತಃ ಅನುಭವಿಸಿ ಅರಿತಿದ್ದೇನೆ. 1988ರಲ್ಲಿ ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಇದ್ದೆ. ಅತ್ಯಂತ ದುರ್ಗಮವಾಗಿದ್ದ ಆ ಪ್ರದೇಶದಲ್ಲಿ ಒಬ್ಬ ಚಹಾ ಮಾರುವ ವ್ಯಕ್ತಿಯಿದ್ದ. ಭಾರತವು ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದನ್ನು ಆತ ತನ್ನ ರೇಡಿಯೊದಲ್ಲಿ ಕೇಳಿಸಿಕೊಂಡು, ಅಲ್ಲಿದ್ದವರಿಗೆಲ್ಲಾ ಮುಟ್ಟಿಸಿದ್ದ’ ಎಂದು ಅವರು ವಿವರಿಸಿದರು.

‘ರೇಡಿಯೊ ಎಲ್ಲರನ್ನೂ ತಲುಪುವ ಮಾಧ್ಯಮ ಎಂಬುದು ನನಗೆ ಅಂದು ಅರ್ಥವಾಯಿತು. ಜನರ ಜತೆ ಮಾತನಾಡಲು ರೇಡಿಯೊವನ್ನೇ ಬಳಸಬೇಕು ಎಂದು ಅಂದು ಕನಸು ಕಂಡಿದ್ದೆ. ಪ್ರಧಾನಿಯಾದ ನಂತರ ಅದನ್ನು ಮಾಡಿದೆ. ರಾಜಕಾರಣವಾಗಲೀ, ಸರ್ಕಾರದ ಸಾಧನೆಯಾಗಲೀ, ಮೋದಿಯ ಹೊಗಳಿಕೆಯಾಗಲೀ ಇದರಲ್ಲಿ ನುಸುಳಬಾರದು ಎಂದು ಮೊದಲ ಕಾರ್ಯಕ್ರಮದಲ್ಲೇ ನಿರ್ಧರಿಸಿದ್ದೆ. ಐವತ್ತೂ ಕಾರ್ಯಕ್ರಮಗಳಲ್ಲಿ ಜನರ ಮನದಲ್ಲಿರುವುದನ್ನಷ್ಟೇ ಮಾತನಾಡಿದ್ದೇನೆ’ ಎಂದು ಅವರು ಹೇಳಿದರು.

‘ಹಿರಿಯರು ಮತ್ತು ಯುವಜನರ ಮಧ್ಯೆ ಮುಕ್ತ ಚರ್ಚೆಯ ವಾತಾವರಣ ದಿನೇದಿನೇ ಕಡಿಮೆಯಾಗುತ್ತಿದೆ. ಕಿರಿಯರು ಹಿರಿಯರ ಮಾತುಗಳನ್ನೇ ಕೇಳುವುದಿಲ್ಲ ಎಂಬ ದೂರುಗಳನ್ನು ಕೇಳಿದ್ದೇನೆ. ಎರಡೂ ತಲೆಮಾರುಗಳು ಅಪೇಕ್ಷೆಗಿಂತ ಸ್ವೀಕಾರ್ಹ ಮತ್ತು ಸಹಮತಕ್ಕೆ ಆದ್ಯತೆ ನೀಡಿದರೆ ಈ ಸಮಸ್ಯೆ ಇರುವುದಿಲ್ಲ’ ಎಂದು ಅವರು ಸಲಹೆ ನೀಡಿದರು.

‘ಅತ್ಯಂತ ಕಡಿಮೆ ಅವಧಿಯಲ್ಲಿ ಸಂವಿಧಾನವನ್ನು ರಚಿಸಿ, ಹಕ್ಕು ಮತ್ತು ಕರ್ತವ್ಯಗಳನ್ನು ಬಾಬಾ ಸಾಹೇಬ್ (ಡಾ.ಬಿ.ಆರ್.ಅಂಬೇಡ್ಕರ್) ಅವರು ನಮಗೆ ನೀಡಿದ್ದಾರೆ. ಸಂವಿಧಾನ ಅಂಗೀಕಾರ ದಿನವನ್ನು ದೇಶ ಸೋಮವಾರ (ನವೆಂಬರ್ 26) ಆಚರಿಸಲಿದೆ. ನಾವು ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಿದರೆ, ನಮ್ಮ ಹಕ್ಕುಗಳಿಗೆ ರಕ್ಷಣೆ ಸಿಗುತ್ತದೆ. ಹಾಗೇಯೇ ನಮ್ಮ ಕರ್ತವ್ಯಗಳನ್ನು ಪೂರೈಸಿದರೂ ಹಕ್ಕುಗಳಿಗೆ ಧಕ್ಕೆಯಾಗುವುದಿಲ್ಲ’ ಎಂದು ಅವರು ಹೇಳಿದರು.

ಮನದ ಮಾತು: ಮುಖ್ಯಾಂಶಗಳು
* ಗುರು ನಾನಕ್ ಅವರ 550ನೇ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು, ಸರ್ಕಾರದ ಎಲ್ಲ ಇಲಾಖೆಗಳು, ರಾಯಭಾರಿ ಕಚೇರಿಗಳು ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ಕೋರಲಾಗಿದೆ.
ಕತಾರ್‌ಪುರ್ ಕಾರಿಡಾರ್ ತೆರೆಯುವ ಮೂಲಕ ಸರ್ಕಾರ ಉತ್ತಮ ನಿರ್ಧಾರವನ್ನು ಕೈಗೊಂಡಿದೆ.ಈ ಮೂಲಕ ದೇಶದಜನರು ಪಾಕಿಸ್ತಾನದ ಕತಾರ್‌ಪುರ್‌ಗೆ ಹೋಗಿ ಗುರು ನಾನಕ್ ದೇವ್ ಅವರ ಪುಣ್ಯಭೂಮಿಯ ದರ್ಶನ ಪಡೆಯಬಹುದು.

* ನಾಳೆ ನವೆಂಬರ್ 26, ಸಂವಿಧಾನ ದಿನ. ವಿಸ್ತೃತ ಮತ್ತು ವಿವರವಾದ ಸಂವಿಧಾನವನ್ನು ಮಹಾನ್ ವ್ಯಕ್ತಿಗಳು ರಚಿಸಿದ್ದಾರೆ.ಇದರಲ್ಲಿ ಬಡವರು ಕೂಡಾ ಅಭಿವೃದ್ದಿ ಹೊಂದಬಹುದು, ಹಕ್ಕುಮತ್ತು ಕರ್ತವ್ಯಗಳು ನಮ್ಮನ್ನು ಮುಂದೆ ಸಾಗುವಂತೆ ಮಾಡುತ್ತವೆ.

* ಕೆಲವೊಮ್ಮೆ ನಮ್ಮ ಹಿರಿಯರ ಜತೆ ಮಾತು ಕಷ್ಟವಾಗುತ್ತದೆ.ನಾನು ಯುವಕರಿಂದ ಕಲಿಯುತ್ತೇನೆ.ಅವರ ಚಿಂತನೆಗಳೊಂದಿಗೆ ಹೊಂದಿಸಿಕೊಳ್ಳುತ್ತೇನೆ.ಇಂದಿನ ಯುವಕರು ತುಂಬಾ ಮಹತ್ವಾಕಾಂಕ್ಷೆ ಹೊಂದಿದವರಾಗಿರುತ್ತಾರೆ. ಅವರಿಗೆ ನಂಬಿಕೆ ಇಲ್ಲದೇ ಇರುವ ಕಾರ್ಯವನ್ನು ಅವರು ಮಾಡಲು ಹೋಗುವುದಿಲ್ಲ.ಯುವಕರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ.ಅವರು ಸಮಯ ವ್ಯರ್ಥ ಮಾಡದೆ ವೇಗವಾಗಿ ಗುರಿ ಸಾಧನೆ ಮಾಡಲು ಹಂಬಲಿಸುತ್ತಾರೆ.ಇವರು ದೇಶವನ್ನು ಬದಲಿಸಬಲ್ಲರು.

* ಈ ದನಿ ನನ್ನದು ಆದರೆ ಉದಾಹರಣೆಗಳು, ಭಾವನೆಗಳು ಮತ್ತು ಮನದ ಮಾತಿನ ಹುರುಪು ಜನರದ್ದು

* ನನಗೆ ಜನರಿಂದ ಪತ್ರಗಳು ಬರುತ್ತವೆ. ನಾನು ಅದನ್ನು ಶ್ರದ್ದೆಯಿಂದ ಓದಿ, ಆ ವ್ಯಕ್ತಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ನಾನು ಆ ಕುಟುಂಬದ ಅಂಗವಾಗಿ ಬಿಡುತ್ತೇನೆ. ಇದೇ ರೀತಿ ನಾನು ದೇಶದಾದ್ಯಂತವಿರುವ ಹಲವು ಕುಟುಂಬಗಳ ಸದಸ್ಯನಾಗಿ ಬಿಟ್ಟಿದ್ದೇನೆ.

* ಒಬ್ಬ ನಾಯಕನ ಮಾತನ್ನು ಕೋಟಿಗಟ್ಟಲೆ ಜನ ಕೇಳುವುದಾದರೆ ಬೇರೆ ಇನ್ನೇನು ಬೇಕು? ಇದು ರಾಜಕೀಯ ರಹಿತ ಕಾರ್ಯಕ್ರಮವಾಗಿದೆ.ಮೋದಿ ಬರುತ್ತಾರೆ, ಮೋದಿ ಹೋಗುತ್ತಾರೆ ಆದರೆ ನಮ್ಮ ದೇಶ ಅಚಲವಾಗಿರುತ್ತದೆ.ನಮ್ಮ ಸಂಸ್ಕೃತಿ ಚಿರಂತನವಾಗಿರುತ್ತದೆ.

*ಮನದ ಮಾತಿಗಾಗಿ ರೇಡಿಯೊ ಮಾಧ್ಯಮನ್ನೇ ಯಾಕೆ ಆಯ್ಕೆ ಮಾಡಿದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, 1998ರಲ್ಲಿ ಹಿಮಾಚಲದಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಟೀ ಕುಡಿಯಲು ಡಾಬಾಕ್ಕೆ ಹೋಗಿದ್ದೆ.ಆ ಡಾಬಾ ನಡೆಸುತ್ತಿದ್ದ ವ್ಯಕ್ತಿ ನನಗೆ ಸಿಹಿ ತಿಂಡಿ ಕೊಟ್ಟಾಗ ನನಗೆ ಅಚ್ಚರಿಯಾಯಿತು. ಭಾರತ ಅಣು ಬಾಂಬ್ ಪರೀಕ್ಷೆ ನಡೆಸಿದ್ದು, ಈ ವಿಷಯವನ್ನು ನಾನು ರೇಡಿಯೊ ಮೂಲಕ ತಿಳಿದುಕೊಂಡೆ ಎಂದು ಆತ ನನ್ನಲ್ಲಿ ಹೇಳಿದರು. ರೇಡಿಯೊ ಉತ್ತಮ ಸಂವಹನ ಮಾಧ್ಯಮವಾಗಿದೆ.ಇದರಂತೆ ಪ್ರಭಾವಿಯಾಗಿರುವ ಬೇರೆ ಮಾಧ್ಯಮಗಳು ಇಲ್ಲ.

*ಮನದ ಮಾತು ಕಾರ್ಯಕ್ರಮದ 50ನೇ ಸರಣಿಯ ಶುಭಾಶಯಗಳೊಂದಿಗೆ ಮೋದಿ ತಮ್ಮ ಮಾತುಗಳನ್ನು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT