ಇದೆಂಥ ಘೋರ! ಅತ್ಯಾಚಾರ ಮಾಡಿದ ಅಣ್ಣ; ಬಾಲಕಿಯ ಕಣ್ಣು ಕೀಳಿಸಿದಳು ಮಲತಾಯಿ

7

ಇದೆಂಥ ಘೋರ! ಅತ್ಯಾಚಾರ ಮಾಡಿದ ಅಣ್ಣ; ಬಾಲಕಿಯ ಕಣ್ಣು ಕೀಳಿಸಿದಳು ಮಲತಾಯಿ

Published:
Updated:
Deccan Herald

ಶ್ರೀನಗರ: ಒಂಬತ್ತು ವರ್ಷ ವಯಸ್ಸಿನ ಬಾಲಕಿಯ ಮೇಲೆ ಆಕೆಯ ಮಲ ಸಹೋದರ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಮಲ ತಾಯಿಯ ಕುಮ್ಮಕ್ಕಿನಿಂದಲೇ ಈ ಕ್ರೌರ್ಯ ನಡೆದಿದೆ. 

ಕಾಶ್ಮೀರದ ಉರಿ ಪ್ರದೇಶದಲ್ಲಿರುವ ಬಾಲಕಿಯ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಾಡಿನೊಳಗೆ ಆಕೆಯ ದೇಹವನ್ನು ಎಸೆಯಲಾಗಿದೆ. ದೇಹವನ್ನು ಬಿಸಾಡುವ ಮುನ್ನ ಕಣ್ಣು ಗುಡ್ಡೆ ಕೀಳಲಾಗಿದೆ ಹಾಗೂ ಶರೀರದ ಮೇಲೆ ಆಸಿಡ್‌ ಸುರಿದು ಸುಡಲಾಗಿದೆ. ಬಾಲಕಿಯ ಮೇಲೆ ನಡೆದಿರುವ ಅಮಾನುಷ ಕೃತ್ಯದ ಕುರಿತು ಪೊಲೀಸರು ಮಾಹಿತಿ ನೀಡಿದರು. 

ಈ ದುಷ್ಕೃತ್ಯದ ಸಂಬಂಧ ಬಾಲಕಿಯ ಮಲತಾಯಿ, 14 ವರ್ಷ ವಯಸ್ಸಿನ ಮಲ ಸಹೋದರ ಹಾಗೂ ಆತನ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್‌ 24ರಿಂದ ಕಾಣೆಯಾಗಿದ್ದ ಬಾಲಕಿಯ ಹುಡುಕಾಟ ನಡೆದಿತ್ತು. ಕಳೆದ ಭಾನುವಾರ ಕೊಳೆತ ಸ್ಥಿತಿಯಲ್ಲಿ ಆಕೆಯ ದೇಹ ಪತ್ತೆಯಾಗಿದೆ. 

’ಶವ ಪತ್ತೆಯಾದ ಕೂಡಲೇ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆ ಮುಂದುವರಿದಂತೆ ಕ್ರೂರ ಕೊಲೆಯ ಹಿಂದಿರುವ ಕುಟುಂಬದೊಳಗಿನ ಸೇಡು ಮತ್ತು ಅಸೂಯೆಯ ಭಯಾನಕತೆಯ ದರ್ಶನವಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಿರ್‌ ಇಮ್ತಿಯಾಜ್‌ ಹುಸೇನ್‌ ಹೇಳಿದರು. 

ಪ್ರೀತಿ ಮತ್ತು ಸೇಡು

ಭಯಾನಕ ಕೃತ್ಯಕ್ಕೆ ಪ್ರೇರಣೆ ನೀಡಿದ ಮಲತಾಯಿಗೆ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ಸಿಟ್ಟಿತ್ತು. ಆಕೆಯ ಗಂಡ ಎರಡನೇ ಹೆಂಡತಿ ಮತ್ತು 9 ವರ್ಷ ವಯಸ್ಸಿನ ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಸ್ಥಳೀಯಳೂ ಅಲ್ಲದ, ಮೊದಲನೇ ಪತ್ನಿಯೂ ಅಲ್ಲದ ಅವಳನ್ನು ತನ್ನ ಗಂಡ ಅತಿಯಾಗಿ ಓಲೈಸುವುದು, ಪ್ರೀತಿಸುವುದು ಮೊದಲ ಪತ್ನಿಯಾದ ಆಕೆಯಲ್ಲಿ ಅಸೂಯೆ ಸೃಷ್ಟಿಸಿತ್ತು. ತನ್ನ ಮಕ್ಕಳಿಗಿಂತಲೂ ಅತಿಯಾಗಿ ಬಾಲಕಿಯನ್ನು ಮುದ್ದು ಮಾಡುತ್ತಿದುದು ಆಕೆಯಲ್ಲಿ ದ್ವೇಷದ ಭಾವನೆಯನ್ನು ಬೆಳೆಸಿತ್ತು. ಇದೇ ಕಾರಣದಿಂದಾಗಿ ಕೃತ್ಯಕ್ಕೆ ಬೆಂಬಲ ನೀಡಿದ್ದಾಗಿ ಆಕೆ ಪೊಲೀಸರ ವಿಚಾರಣೆಯಲ್ಲಿ ವಿವರಿಸಿದ್ದಾಳೆ. 

ಮುಂದೆ ನಿಂತು ಮಲ ಮಗಳನ್ನು ಕೊಲ್ಲಿಸಿದಳು!

ಗಂಡನ ಮುದ್ದಿನ ಮಗಳನ್ನು ಕೊಲ್ಲುವ ಸಂಚು ರೂಪಿಸಿದ ಮಲತಾಯಿ, ಮಲ ಮಗಳನ್ನು ಮನೆಯ ಸಮೀಪದ ಕಾಡಿಗೆ ಕರೆದೊಯ್ಡಳು. ಅಲ್ಲಿಯೇ ತನ್ನ 14 ವರ್ಷದ ಮಗನಿಗೆ ಆಕೆಯ ಮೇಲೆ ಅತ್ಯಾಚಾರ ಎಸಗುವಂತೆ ಸೂಚಿಸಿದಳು. ತಾಯಿಯ ಕಣ್ಣೆದುರೇ ಮಗ ಆತನ ಮಲ ಸಹೋದರಿ ಮೇಲೆ ಅತ್ಯಾಚಾರ ನಡೆಸಿದ. ಮಲತಾಯಿ ಬಾಲಕಿಯ ಕುತ್ತಿಗೆ ಹಿಸುಕಿ ಹಿಡಿದಳು, ಆಕೆಯ ಮಗ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದು, ಒಂದೇ ಏಟಿಗೆ ಸಾಯಿಸಿದ. 

ಆರೋಪಿಗಳಲ್ಲಿ ಒಬ್ಬ ಮನೆಗೆ ಮರಳಿ ಆಸಿಡ್‌ ಬಾಟಲಿ ತಂದ. 19 ವರ್ಷ ವಯಸ್ಸಿನ ಮತ್ತೊಬ್ಬ ಆರೋಪಿ ಚೂಪಾದ ಚಾಕುವಿನಿಂದ ಬಾಲಕಿಯ ಕಣ್ಣಿನ ಗುಡ್ಡೆಗಳನ್ನು ಕಿತ್ತು ಹಾಕಿ, ದೇಹದ ಮೇಲೆ ಆಸಿಡ್‌ ಸುರಿದ. ಮಗನ ಸ್ನೇಹಿತರು ದೇಹವನ್ನು ಕಾಡಿನ ಪೊದೆಗಳಲ್ಲಿ ಎಸೆದು, ಪೈನ್‌ ಮರದ ರೆಂಬೆ–ಕೊಂಬೆಗಳಿಂದ ಮುಚ್ಚಿದರು. ಕೊಡಲಿ ಮತ್ತು ಚಾಕುವನ್ನು ಮುಚ್ಚಿಟ್ಟರು ಎಂದು ಪೊಲೀಸರು ವಿವರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 4

  Sad
 • 1

  Frustrated
 • 16

  Angry

Comments:

0 comments

Write the first review for this !