ಆಧಾರ್ ತೀರ್ಪು: ಸುಪ್ರಿಂಕೋರ್ಟ್‌ ಅಂತಿಮ ತೀರ್ಪಿನಲ್ಲಿ ಹೇಳಿದ್ದೇನು

7

ಆಧಾರ್ ತೀರ್ಪು: ಸುಪ್ರಿಂಕೋರ್ಟ್‌ ಅಂತಿಮ ತೀರ್ಪಿನಲ್ಲಿ ಹೇಳಿದ್ದೇನು

Published:
Updated:

ನವದೆಹಲಿ: ‘ಆಧಾರ್‌ ಸಾಂವಿಧಾನಾತ್ಮಕ ಸಿಂಧುತ್ವ ಹೊಂದಿದೆ. ಬಡವರಿಗೆ ಘನತೆ ತಂದುಕೊಟ್ಟಿದೆ’ ಎಂದು ಸುಪ್ರಿಂಕೋರ್ಟ್ ಬುಧವಾರ ನೀಡಿದ ತೀರ್ಪಿನಲ್ಲಿ ಹೇಳಿದೆ. ದೇಶದ ಎಲ್ಲ ನಾಗರಿಕರಿಗೆ ವಿಶಿಷ್ಟ ಗುರುತು ನೀಡುವ ಸರ್ಕಾರದ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ನೀಡಿತು.

‘ಎಲ್ಲ ಮೊಬೈಲ್ ಫೋನ್ ಸಂಪರ್ಕವನ್ನು ‘ಆಧಾರ್‌’ಗೆ ಜೋಡಿಸಬೇಕು ಎನ್ನುವ ಸರ್ಕಾರದ ಆದೇಶ ಸಂವಿಧಾನಬಾಹಿರ. ಬ್ಯಾಂಕ್ ಖಾತೆಗಳನ್ನು ‘ಆಧಾರ್‌’ಗೆ ಜೋಡಿಸಬೇಕಾದ ಅಗತ್ಯವಿಲ್ಲ’ ಎಂದು ಸುಪ್ರಿಂಕೋರ್ಟ್ ಹೇಳಿತು.

‘ಆಧಾರ್ ಕಾನೂನಿಗೆ ಸಮರ್ಥನೀಯ ಗುರಿ ಮತ್ತು ಅಗತ್ಯ ಇದೆ’ ಎಂದು ಐವರು ಹಿರಿಯ ನ್ಯಾಯಾಧೀಶರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿತು. ನಾಲ್ಕು ತಿಂಗಳುಗಳಿಂದ ನ್ಯಾಯಪೀಠವು ಆಧಾರ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ 30 ಅರ್ಜಿಗಳ ವಿಚಾರಣೆ ನಡೆಸಿತ್ತು. ಕೇಂದ್ರ ಸರ್ಕಾರವು ‘ಆಧಾರ್’ ಪರವಾಗಿ ವಾದ ಮಂಡಿಸಿತ್ತು.

‘ವಿಶಿಷ್ಟವಾಗಿರುವುದು ಅತ್ಯುತ್ತಮವಾಗಿರುವುದಕ್ಕಿಂತ ಮುಖ್ಯ– ಇದು ಆಧಾರ್‌ನ ಮುಖ್ಯಸಂದೇಶವಾಗಿದೆ’ ಎಂದು ಹೇಳಿದ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ, ‘ಆಧಾರ್‌ಗಾಗಿ ಸಂಗ್ರಹಿಸುವ ದಾಖಲೆ ಮತ್ತು ದತ್ತಾಂಶಗಳನ್ನು ರಕ್ಷಿಸಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಲಾಗಿದೆ. ಭದ್ರತೆಯ ವ್ಯವಸ್ಥೆಯೂ ಉತ್ತಮವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜನರ ಅನುಮತಿ ಪಡೆದೋ, ಪಡೆಯದೆಯೋ ಅವರ ಬೆರಳಚ್ಚು, ಅಕ್ಷಿಪಟಲ (ಐರಿಸ್) ಮತ್ತು ಇತರ ವಿವರಗಳನ್ನು ಸಂಗ್ರಹಿಸುವ ಮೂಲಕ ‘ಆಧಾರ್’ ಖಾಸಗಿತನವನ್ನು ಉಲ್ಲಂಘಿಸಿದೆ’ ಎನನ್ನುವುದು ‘ಆಧಾರ್’ ವಿರೋಧಿಸಿ ಅರ್ಜಿ ಸಲ್ಲಿಸಿದ್ದವರ ವಾದವಾಗಿತ್ತು.

ಆಧಾರ್‌ನ ಟೀಕೆಗಳನ್ನು ನಿರಾಕರಿಸಿದ್ದ ಸರ್ಕಾರವು, 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯು ಬ್ಯಾಂಕ್ ಖಾತೆಗಳು, ಮೊಬೈಲ್‌ ಫೋನ್‌ ಸಂಖ್ಯೆಗಳು ಮತ್ತು ತೆರಿಗೆ ಪಾವತಿಗೆ ಸಂಯೋಜಿಸುವುದು ಕಡ್ಡಾಯ ಎಂದು ಹೇಳಿತ್ತು. ಹೀಗೆ ಮಾಡುವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸೂಕ್ತ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುತ್ತದೆ. ಕಪ್ಪುಹಣ ಮತ್ತು ಅಕ್ರಮ ಹಣ ವರ್ಗಾವಣೆಯನ್ನು ತಡೆಯಲು ಸಾಧ್ಯವಾಗುತ್ತದೆ. ಆಧಾರ್‌ಗಾಗಿ ಸಂಗ್ರಹಿಸಿದ ಎಲ್ಲ ದತ್ತಾಂಶ ಸುರಕ್ಷಿತವಾಗಿದೆ ಎಂದು ಹೇಳಿತ್ತು.

ತೀರ್ಪಿನ ಮುಖ್ಯಾಂಶಗಳು

ಸುಪ್ರಿಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್‌ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನ್‌ವಿಲ್‌ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿತು.

ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಓದಿದರು. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಖನ್‌ವಿಲ್‌ಕರ್ ಈ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರಾದ ಚಂದ್ರಚೂಡ್ ತಮ್ಮ ತೀರ್ಪನ್ನು ಪ್ರತ್ಯೇಕವಾಗಿ  ಓದಿದರು. ಸಿಕ್ರಿ ಅವರು ಓದಿದ ತೀರ್ಪಿನ ಮೂರು ಅಂಶಗಳಿಗೆ ಮಾತ್ರ ನನ್ನ ಸಹಮತವಿಲ್ಲ ಎಂದು ಅಶೋಕ್‌ ಭೂಷಣ್ ಹೇಳಿದರು.

‘ಮೊಬೈಲ್ ಫೋನ್, ಬ್ಯಾಂಕ್ ಖಾತೆಗೆ ಆಧಾರ್‌ ಕಾರ್ಡ್ ನೋಂದಣಿ ಕಡ್ಡಾಯವಲ್ಲ’ ಎಂದು ಹೇಳಿರುವ ಸುಪ್ರಿಂಕೋರ್ಟ್, ‘ಪ್ಯಾನ್‌ಕಾರ್ಡ್‌ ಮತ್ತು ಆದಾಯ ತೆರಿಗೆ ಪಾವತಿಗೆ ಆಧಾರ್ ಜೋಡಣೆ ಕಡ್ಡಾಯ’ ಎಂದು ಅಭಿಪ್ರಾಯಪಟ್ಟಿದೆ. ಆಧಾರ್ ಮಸೂದೆಯನ್ನು ಹಣಕಾಸು ಮಸೂದೆ ಮಾದರಿಯಲ್ಲಿ ಜಾರಿ ಮಾಡಬಹುದು ಎಂದು ಸೂಚಿಸಿತು.

ಆದರೆ ನ್ಯಾಯಾಧೀಶ ಚಂದ್ರಚೂಡ್ ಓದಿದ ಪ್ರತ್ಯೇಕ ತೀರ್ಪಿನಲ್ಲಿ, ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಜಾರಿ ಮಾಡುವುದನ್ನು ಪ್ರಶ್ನಿಸಿದರು. ‘ಆಧಾರ್ ಮಸೂದೆಯನ್ನು ಆರ್ಥಿಕ ಮಸೂದೆ ಎಂದು ಪರಿಗಣಿಸುವ ಕ್ರಮ ನ್ಯಾಯಾಂಗದ ಮರುಪರಿಶೀಲನೆಗೆ ಒಳಪಡಬೇಕು’ ಎಂದು ನ್ಯಾಯಾಧೀಶ ಚಂದ್ರಚೂಡ್ ಹೇಳಿದರು.

ಆಧಾರ್ ಕಡ್ಡಾಯ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಪ್ಯಾನ್‌ ಕಾರ್ಡ್‌, ಆದಾಯ ತೆರಿಗೆ ಪಾವತಿ, 

ಆಧಾರ್ ಕಡ್ಡಾಯವಲ್ಲ

ಬ್ಯಾಂಕ್ ಖಾತೆ, ಮೊಬೈಲ್‌ ನಂಬರ್‌, ಶಾಲಾ–ಕಾಲೇಜು ದಾಖಲಾತಿ, ಯುಜಿಸಿ, ನೀಟ್ ಮತ್ತು ಸಿಬಿಎಸ್‌ಸಿ ಪರೀಕ್ಷೆಗಳು.

ಮ್ಯಾರಥಾನ್ ವಿಚಾರಣೆ

ಜನವರಿ 17ರಿಂದ ಈವರೆಗೆ ಒಟ್ಟು 38 ದಿನಗಳ ಕಾಲ, 30ಕ್ಕೂ ಹೆಚ್ಚು ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ಮಾಡಿದೆ. ಆಧಾರ್ ಕಾಯ್ದೆ ಮತ್ತು ಆಧಾರ್ ಸಂಖ್ಯೆಯನ್ನು ಬ್ಯಾಂಕ್‌ಖಾತೆ, ಮೊಬೈಲ್‌ ಸಂಖ್ಯೆ, ಪ್ಯಾನ್ ಕಾರ್ಡ್‌, ಆದಾಯ ತೆರಿಗೆಗೆ ಸಂಪರ್ಕಿಸುವ ಸರ್ಕಾರದ ನಿರ್ಧಾರಗಳನ್ನು ಹಲವರು ಪ್ರಶ್ನಿಸಿದ್ದರು. ಸರ್ಕಾರದ ಸೂಚನೆಯಿಂದ ಜನರ ಖಾಸಗಿ ಹಕ್ಕು ಉಲ್ಲಂಘನೆಯಾಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಆಧಾರ್ ಪ್ರಶ್ನಿಸಿದ್ದವರು

ಹಿರಿಯ ವಕೀಲರಾದ ಶ್ಯಾಮ್ ದಿವಾನ್, ಗೋಪಾಲ್ ಸುಬ್ರಹ್ಮಣ್ಯಂ, ಕಪಿಲ್ ಸಿಬಲ್, ಪಿ.ಚಿದಂಬರಂ, ಅರವಿಂದ್ ದಾತಾರ್, ಕೆ.ವಿ.ವಿಶ್ವನಾಥ್, ಆನಂದ್ ಗ್ರೋವರ್, ಸಜನ್ ಪೂವಯ್ಯ ಮತ್ತು ಇತರರು ಅರ್ಜಿದಾರರ ಪರವಾಗಿ ವಾದಿಸಿದ್‌ದರು. ಮ್ಯಾಗ್ಸಸೆ ಪುರಸ್ಕೃತ ವಕೀಲ ಶಾಂತ ಸಿನ್ಹಾ, ಸ್ತ್ರೀವಾದಿ ಸಂಶೋಧಕಿ ಕಲ್ಯಾಣಿ ಸೇನ್ ಮೆನನ್, ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್, ನಿಖಿಲ್ ಡೇ, ನಚಿಕೇತ್ ಉಡುಪ ಮತ್ತು ಸಿಪಿಐ ನಾಯಕ ಬಿನಯ್ ವಿಶ್ವಮನ್ ಸಹ ಅರ್ಜಿದಾರರ ಪರ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !