ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ಸೇತು’ ಅತ್ಯಂತ ಸುರಕ್ಷಿತ ಆ್ಯಪ್‌: ಸಚಿವ ರವಿಶಂಕರ್‌ ಪ್ರಸಾದ್

‘ಖಾಸಗಿತನ, ಮಾಹಿತಿ ರಕ್ಷಣೆಗೆ ಧಕ್ಕೆ ಇಲ್ಲ’
Last Updated 6 ಮೇ 2020, 18:50 IST
ಅಕ್ಷರ ಗಾತ್ರ

ನವದೆಹಲಿ: ‘ಆರೋಗ್ಯ ಸೇತು’ ಆ್ಯಪ್‌ ಸುರಕ್ಷಿತವಲ್ಲ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌, ‘ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಂತ ಸುರಕ್ಷಿತ ಆ್ಯಪ್‌ ಇದು’ ಎಂದು ಹೇಳಿದ್ದಾರೆ.

‘ಇದು ಭಾರತದಲ್ಲಿಯೇ ಅಭಿವೃದ್ಧಿಪಡಿಸಿರುವ ಆ್ಯಪ್‌. ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಎನ್‌ಐಸಿಯ ವಿಜ್ಞಾನಿಗಳು, ನೀತಿ ಆಯೋಗ ಹಾಗೂ ಕೆಲವು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್‌ನ ಸುರಕ್ಷತೆ ಬಗ್ಗೆ ಯಾವುದೇ ಅನುಮಾನ ಬೇಡ. ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ಅವರು ಪಿಟಿಐ ಸುದ್ಧಿಸಂಸ್ಥೆಗ ಬುಧವಾರ ತಿಳಿಸಿದ್ದಾರೆ.

‘ಆ್ಯಪ್‌ನಲ್ಲಿ ಅಳವಡಿಸುವ ಮಾಹಿತಿ 30 ದಿನಗಳ ನಂತರ ಅಳಿಸಿ ಹೋಗುತ್ತದೆ. ಒಂದು ವೇಳೆ ಈ ಆ್ಯಪ್‌ನಲ್ಲಿ ಸೋಂಕಿತ ವ್ಯಕ್ತಿಯ ಮಾಹಿತಿ ಇದ್ದರೆ, ಅದು ಸಹ 45 ರಿಂದ 60 ದಿನಗಳ ವರೆಗೆ ಮಾತ್ರ ಇರುತ್ತದೆ’ ಎಂದು ಹೇಳಿದರು.

‘ಜನರ ಮೇಲೆ ನಿಗಾ ಇಡುವ ದೃಷ್ಟಿಯಿಂದ ಈ ಆ್ಯಪ್ ‌ಅನ್ನು ಅಭಿವೃದ್ಧಿಪಡಿಸಲಾಗಿದೆ. ಜನರ ಅನುಮತಿ ಇಲ್ಲದೆಯೇ ಅವರ ಚಲನವಲನಗಳ ಮೇಲೆ ಕಣ್ಣಿಟ್ಟು, ಆ ಮೂಲಕ ಅವರಲ್ಲಿ ಭಯ ಮೂಡಿಸಲು ಈ ರೀತಿ ತಂತ್ರಜ್ಞಾನ ಬಳಕೆಯಾಗಬಾರದು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದರು.

9 ಕೋಟಿ ಜನರಿಂದ ಆ್ಯಪ್‌ ಬಳಕೆ: ‘ಆರೋಗ್ಯ ಸೇತು’ ಆ್ಯಪ್‌ಅನ್ನು 9 ಕೋಟಿ ಜನರು ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌–19ಗೆ ಸಂಬಂಧಿತ ಸಚಿವರ ಗುಂಪಿನ ಸಭೆಯಲ್ಲಿ (ಜಿಒಎಂ) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರು ಈ ಆ್ಯಪ್‌ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡCOvidಲಾಗಿದೆ.

‘ಸ್ಥಿರ ದೂರವಾಣಿ ಅಥವಾ ಫೀಚರ್‌ ಫೋನ್‌ ಹೊಂದಿರುವವರಿಗಾಗಿ ಐವಿಆರ್‌ಎಸ್‌ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯು ಕಾರ್ಯ ನಿರ್ವಹಿಸುತ್ತದೆ’ ಎಂದೂ ಸಚಿವರ ಗುಂಪಿಗೆ ಮಾಹಿತಿ ನೀಡಲಾಯಿತು.

2.5 ಲಕ್ಷ ಪಿಪಿಇ, 2 ಲಕ್ಷ ಮಾಸ್ಕ್ ತಯಾರಿಕೆ
ಸ್ಥಳೀಯ ಉತ್ಪಾದಕರು ನಿತ್ಯ 2.5 ಲಕ್ಷ ವೈಯಕ್ತಿಕ ಸುರಕ್ಷತಾ ಸಾಮಗ್ರಿಗಳನ್ನು (ಪಿಪಿಇ) ಮತ್ತು ಎರಡು ಲಕ್ಷ ಎನ್‌–95 ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.ಕೊರೊನಾ ಸೋಂಕು ವಿರುದ್ಧದ ಹೋರಾಟಕ್ಕೆ ಈ ಪ್ರಮಾಣದಸಾಮಗ್ರಿಗಳು ಸಾಕಾಗಲಿವೆ ಎಂದು ಜಿಒಎಂ ಸಭೆಯಲ್ಲಿ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT