ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ರಕ್ಷಣೆ ನೀಡಲು ಪೊಲೀಸರ ನಕಾರ

ಶಬರಿಮಲೆ: ಕಾರ್ಯಕರ್ತೆ ಬಿಂದು ಅಮ್ಮಿಣಿ ಮೇಲೆ ಪೆಪ್ಪರ್‌ ಸ್ಪ್ರೇ ಪ್ರಯೋಗ
Last Updated 26 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಚ್ಚಿ : ತೀವ್ರ ವಿರೋಧದ ನಡುವೆಯೂ ಇಲ್ಲಿನ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡಲು ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ನೇತೃತ್ವದ ತಂಡಕ್ಕೆ ಅಗತ್ಯ ರಕ್ಷಣೆ ನೀಡಲು ಪೊಲೀಸರು ನಿರಾಕರಿಸಿದರು.

ಮತ್ತೊಂದೆಡೆ, ದೇಗುಲಕ್ಕೆ ತೃಪ್ತಿ ದೇಸಾಯಿ ಮತ್ತು ಇನ್ನಿತರರ ಭೇಟಿ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದ ಬಲಪಂಥೀಯ ಸಂಘಟನೆಗಳ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತೃಪ್ತಿ ದೇಸಾಯಿ ಅವರ ದೇಗುಲ ಭೇಟಿ ಯತ್ನವನ್ನು ‘ಸಂಚು’ ಎಂದು ಕೇರಳ ಸರ್ಕಾರ ಬಣ್ಣಿಸಿದೆ. ‘ಆರ್‌ಎಸ್‌ಎಸ್‌, ಬಿಜೆಪಿ ಬಲವಾಗಿರುವ ಪುಣೆಯಿಂದಲೇ ಇವರು ಬಂದಿದ್ದಾರೆ’ ಎಂದು ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಶಂಕಿಸಿದರು.

ಬೆಳಿಗ್ಗೆ ನಗರದ ವಿಮಾನನಿಲ್ದಾಣಕ್ಕೆ ಬಂದಿಳಿದ ತೃಪ್ತಿದೇಸಾಯಿ ನೇರವಾಗಿ ಪೊಲೀಸ್‌ ಕಮಿಷನರ್‌ ಕಚೇರಿಗೆ ತೆರಳಿ ದೇಗುಲಕ್ಕೆ ಭೇಟಿ ನೀಡಲು ರಕ್ಷಣೆ ಒದಗಿಸಲು ಕೋರಿದರು. ಆದರೆ, ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ನೀಡಿದ್ದ ಆದೇಶ ಮರು ಪರಿಶೀಲಿಸುವ ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಉಲ್ಲೇಖಿಸಿ ಪೊಲೀಸರು ರಕ್ಷಣೆ ನೀಡಲು ನಿರಾಕರಿಸಿದರು.

ಪೊಲೀಸ್ ಕಮಿಷನರ್ ಕಚೇರಿ ಎದುರು ಶಬರಿಮಲೆ ಭಕ್ತರು, ಬಿಜೆಪಿ ಕಾರ್ಯಕರ್ತರು, ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತರು ಗುಂಪುಗೂಡಿದ್ದು, ದೇಸಾಯಿ ಅವರ ಭೇಟಿ ಯತ್ನ ಖಂಡಿಸಿ ‘ಶರಣಂ ಅಯ್ಯಪ್ಪ‘ ಮಂತ್ರ ಜಪಿಸಿದರು.

ವಿಮಾನನಿಲ್ದಾಣದಲ್ಲಿ ದೇಸಾಯಿ ಅವರನ್ನು ಕೇರಳದ ಕಾರ್ಯಕರ್ತೆ ಬಿಂದು ಅಮ್ಮಿಣಿ ಜೊತೆಗೂಡಿದರು. ಅಮ್ಮಿಣಿ ಪೊಲೀಸ್‌ ಕಮಿಷನರ್‌ ಕಚೇರಿಯಿಂದ ಹೊರಬಂದಾಗ ಕಾರ್ಯಕರ್ತರು ಪೆಪ್ಪರ್‌ ಸ್ಪ್ರೇ ಬಳಸಿ ದಾಳಿ ನಡೆಸಿದರು. ಹಲ್ಲೆ ಸಂಬಂಧ ಶ್ರೀನಾಥ್‌ ಪದ್ಮನಾಭನ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಅಮ್ಮಿಣಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆ ಮಾಡಿದ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ ಎಂದು ಪ್ರತಿಭಟನಾ
ಕಾರರು ತಿಳಿಸಿದರು.

ಈ ನಡುವೆ, ಅಮ್ಮಿಣಿ ಅವರ ಮೇಲಿನ ಹಲ್ಲೆಯನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಖಂಡಿಸಿದೆ. ‘ಶಬರಿಮಲೆಗೆ ತೆರಳಲು ಪೊಲೀಸ್‌ ಭದ್ರತೆ ನೀಡಲಾಗುವುದಿಲ್ಲ’ ಎಂದು ಸಚಿವಸುರೇಂದ್ರನ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT