ಶುಕ್ರವಾರ, ಫೆಬ್ರವರಿ 26, 2021
31 °C

ಕಾಶ್ಮೀರ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಆಹಾರ ಖರೀದಿಗೆ ಮುಗಿಬೀಳುತ್ತಿರುವ ಜನ

ಝುಲ್ಫೀಕರ್ ಮಜೀದ್ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರ ಕಣಿವೆಗೆ ಹೆಚ್ಚುವರಿಯಾಗಿ 28 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ರವಾನಿಸಿದ ನಂತರ ಕೇಂದ್ರ ಸರ್ಕಾರವು ಇದೀಗ ಭೂಸೇನೆ ಮತ್ತು ವಾಯುಪಡೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಆದೇಶಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಸಿಬ್ಬಂದಿ ಸಂಖ್ಯೆ ಜನರಲ್ಲಿ ಹಲವು ಊಹಾಪೋಹಗಳಿಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.

‘ಕಾಶ್ಮೀರದಲ್ಲಿ ಸದ್ಯದಲ್ಲಿಯೇ ಏನೋ ಮಹತ್ತರವಾದುದು ನಡೆಯಲಿದೆ’ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಗಾಬರಿಯಿಂದ ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಖರೀದಿಸಲು ಅಂಗಡಿಗಳತ್ತ ಧಾವಿಸುತ್ತಿದ್ದಾರೆ.

ವಾಯುಸೇನೆಯ ಫೈಟರ್‌ ವಿಮಾನಗಳು ಗುರುವಾರ ಸಂಜೆಯಿಂದೀಚೆಗೆ ರಾಜ್ಯದ ವಿವಿಧೆಡೆ ಗಸ್ತು ಹಾರಾಟ ನಡೆಸುತ್ತಿವೆ. ಭದ್ರತಾ ಸಿಬ್ಬಂದಿ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣ ಸುರಕ್ಷೆಗಾಗಿ ವಾಯುಪಡೆ ವಿಮಾನಗಳ ಗಸ್ತು ಹಾರಾಟ ನಡೆಸಿವೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಗೃಹ ಇಲಾಖೆಯು ಹೆಚ್ಚುವರಿಯಾಗಿ 28 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಿರುವ ವರದಿಗಳನ್ನು ತಳ್ಳಿಹಾಕಿದೆ. ಆದರೆ ಮೂಲಗಳ ಪ್ರಕಾರ, ವಾಯುಪಡೆಯ ಸಿ–17 ವಿಮಾನಗಳು ಪ್ಯಾರಾಮಿಲಿಟರಿ ಪಡೆಗಳ ಕ್ಷಿಪ್ರ ನಿಯೋಜನೆಗೆ ಬಳಕೆಯಾಗಿವೆ. ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಿ’ ಎಂದು ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವ ರಾಷ್ಟ್ರೀಯ ರೈಫಲ್ಸ್‌ ಮತ್ತು ಇತರ ಸೇನಾ ತುಕಡಿಗಳಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕಾಶ್ಮೀರದ ರಾಜಧಾನಿ ಶ್ರೀನಗರದ ಎಲ್ಲ ಪ್ರಮುಖ ವೃತ್ತಗಳು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ನಗಣ್ಯ ಎನಿಸುವಷ್ಟು ಸ್ಥಳೀಯ ಪೊಲೀಸರು ಕಾಣಿಸುತ್ತಿದ್ದಾರೆ’ ಎಂದು ಪಿಟಿಐ ವರದಿ ಮಾಡಿದೆ.

ವಾಯುಪಡೆ ಮತ್ತು ಭೂಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿರುವ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ‘ಕಾಶ್ಮೀರದಲ್ಲಿ ಏನಾಗ್ತಿದೆ? ಭೂಸೇನೆ ಮತ್ತು ವಾಯುಪಡೆಯನ್ನು ಏಕೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಸಂವಿಧಾನದ 35ಎ ವಿಧಿ ಅಥವಾ ಕ್ಷೇತ್ರಗಳ ಪುನರ್‌ ವಿಂಗಡನೆ ಕೆಲಸ ಶೀಘ್ರ ಆರಂಭವಾಗಲಿದೆಯೇ? ಇಂಥ ಸನ್ನದ್ಧತೆ ಅಪರೂಪದ ವಿದ್ಯಮಾನ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು