ಸೋಮವಾರ, ಅಕ್ಟೋಬರ್ 21, 2019
22 °C

ಪಾಕ್‌ ‘ಹೊಡೆದುರುಳಿಸಿದ್ದ’ ಸುಖೋಯ್‌ ಗಗನದಲ್ಲಿ

Published:
Updated:

ಹಿಂಡನ್: ಬಾಲಾಕೋಟ್‌ ದಾಳಿ ವೇಳೆ ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದ್ದ ಸುಖೋಯ್–30ಎಂಕೆಐ ಯುದ್ಧವಿಮಾನವು ಮಂಗಳವಾರ ನಡೆದ ವಾಯುಪಡೆಯ 87ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ. 

ಫ್ರಾನ್ಸ್ ನಿರ್ಮಿತ ಮೂರು ಮಿರಾಜ್–2000 ಯುದ್ಧವಿಮಾನಗಳು, ಎರಡು ಸುಖೋಯ್–30 ಎಂಕೆಐ ಯುದ್ಧವಿಮಾನಗಳು ದೆಹಲಿ ಸಮೀಪದ ಹಿಂಡನ್ ವಾಯುನೆಲೆಯ ಆಗಸದಲ್ಲಿ ಹಾರಾಟ ನಡೆಸಿದವು. ಫೆಬ್ರುವರಿ 27ರಂದು ಪಾಕಿಸ್ತಾನ ನಾಶಪಡಿಸಿದೆ ಎಂದು ಹೇಳಿಕೊಂಡಿದ್ದ ಅದೇ ಸುಖೋಯ್ ವಿಮಾನ ನೀಲಾಗಸದಲ್ಲಿ ಕಾಣಿಸಿಕೊಂಡು, ಪಾಕಿಸ್ತಾನಕ್ಕೆ ಮುಖಭಂಗ ಉಂಟುಮಾಡಿತು ಎಂದು ವರದಿ ಹೇಳಿದೆ. 

ಅವೆಂಜರ್ ಫಾರ್ಮೇಷನ್‌ನಲ್ಲಿ (ನಿರ್ದಿಷ್ಟ ವಿನ್ಯಾಸದಲ್ಲಿ ವಿಮಾನಗಳು ಹಾರಾಟ ನಡೆಸುವ ವಿಧಾನ) ಬಲತುದಿಯಲ್ಲಿ ಕಾಣಿಸಿಕೊಂಡ ಸುಖೋಯ್ ವಿಮಾನ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅವೆಂಜರ್ ಫಾರ್ಮೇಷನ್‌ನಲ್ಲಿ ಮಂಗಳವಾರ ಎರಡು ಸುಖೋಯ್ ವಿಮಾನಗಳನ್ನು ಮುನ್ನಡೆಸಿದ ಪೈಲಟ್‌ಗಳೇ ಅಂದು ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದರು ಎಂಬುದು ವಿಶೇಷ.   

ಭಾರತದ ವಾಯುಪಡೆಯ ಯುದ್ಧವಿಮಾನಗಳು ಬಾಲಾಕೋಟ್‌ನ ಜೈಷ್ ಉಗ್ರರ ಶಿಬಿರಗಳ ಮೇಲೆ ಇಸ್ರೇಲ್ ನಿರ್ಮಿತ ಕ್ಷಿಪಣಿಯನ್ನು ಹಾಕಿದ್ದವು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಪಾಕಿಸ್ತಾನ, ಭಾರತದ ವಿಮಾನ ಹೊಡೆದಿದ್ದಾಗಿ ಹೇಳಿಕೊಂಡಿತ್ತು. ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಎಫ್16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಮುಚ್ಚಿಹಾಕುವ ಸಲುವಾಗಿ ಆ ದೇಶ ಸುಳ್ಳು ಕತೆ ಕಟ್ಟಿತ್ತು ಎಂದು ವಾಯುಪಡೆ ತಿಳಿಸಿದೆ. 

ವಾಯುಪಡೆ ದಿನಾಚರಣೆಯಲ್ಲಿ ಅಭಿನಂದನ್ ಅವರು ಮಿಗ್–21 ಬೈಸನ್ ಯುದ್ಧ ವಿಮಾನ ಚಲಾಯಿಸಿದರು.

ಹೊಸ ಆಯಾಮ ನೀಡಿದ ಬಾಲಾಕೋಟ್ ದಾಳಿ: ಭದೌರಿಯಾ 

ಭಯೋತ್ಪಾದಕ ದಾಳಿಗಳನ್ನು ನಿಗ್ರಹಿಸುವಲ್ಲಿ ಬಾಲಾಕೋಟ್ ದಾಳಿಯು ಭಾರತಕ್ಕೆ ಹೊಸ ಆಯಾಮ ನೀಡಿದೆ ಎಂದು ವಾಯುಪಡೆ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಹೇಳಿದ್ದಾರೆ. 

ಮುಂಬರುವ ಕಾರ್ಯಾಚರಣೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ, ಯುದ್ಧ ಸಲಕರಣೆಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಹಾಗೂ ಅಸಾಧಾರಣ ತರಬೇತಿ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

‘ಕೆಲ ವರ್ಷಗಳಿಂದ ಭೌಗೋಳಿಕ–ರಾಜಕೀಯ ವಾತಾವರಣ ತ್ವರಿತಗತಿಯಲ್ಲಿ ಬದಲಾಗುತ್ತಿದ್ದು, ಅನಿಶ್ಚಿತತೆ ತಲೆದೋರಿದೆ. ಈ ಸ್ಥಿತಿಯು ರಾಷ್ಟ್ರೀಯ ಭದ್ರತೆಗೆ ಸವಾಲು. ನಾವು ಸದಾ ಜಾಗೃತರಾಗಿ ಇರಬೇಕಾದುದು ಅಗತ್ಯ. ಭಯೋತ್ಪಾದನೆ ವಿರುದ್ಧದ ಹೋರಾಟಗಳಲ್ಲಿ ವಾಯುಪಡೆಯು ಗಮನಾರ್ಹ ಕೆಲಸ ಮಾಡಿದೆ. ದೇಶದ ರಕ್ಷಣೆಗೆ ಬೆದರಿಕೆ ಒಡ್ಡಬಲ್ಲ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಇನ್ನಷ್ಟು ಸನ್ನದ್ಧರಾಗಬೇಕಿದೆ’ ಎಂದು ಅವರು ಹೇಳಿದರು. 

ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು, ‘ನೆರೆಯ ದೇಶದ ರಕ್ಷಣಾ ಚಟುವಟಿಕೆಗಳು ಅಪಾಯಕಾರಿ ಬೆಳವಣಿಗೆ. ಪುಲ್ವಾಮಾ ಘಟನೆಯು ನಮ್ಮ ಭದ್ರತಾಪಡೆಗಳಿಗೆ ಇರುವ ಗಂಭೀರ ಬೆದರಿಕೆಗಳನ್ನು ಜ್ಞಾಪಿಸುತ್ತದೆ’ ಎಂದಿದ್ದಾರೆ.  

‘ನಮ್ಮಲ್ಲಿರುವ ಭದ್ರತಾ ಸೌಲಭ್ಯಗಳು ಅತ್ಯುತ್ತಮ ದರ್ಜೆಯಿಂದ ಕೂಡಿವೆ. ಮಾಹಿತಿ ಮತ್ತು ಸೈಬರ್ ಜಾಲದ ರಕ್ಷಣೆ ಬಗ್ಗೆ ನಮ್ಮ ವಾಯುಪಡೆ ಇನ್ನಷ್ಟು ಗಮನ ನೀಡಬೇಕು’ ಎಂದು ಅವರು ಕರೆ ನೀಡಿದ ಅವರು, ಎಂತಹುದೇ ಆಕಸ್ಮಿಕ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಸನ್ನದ್ಧತೆ ಅತ್ಯಗತ್ಯ ಎಂದರು. 

ಬಾಲಾಕೋಟ್‌ ದಾಳಿ: ತುಕಡಿಗಳಿಗೆ ಗೌರವ

ಬಾಲಾಕೋಟ್‌ ದಾಳಿಯಲ್ಲಿ ಭಾಗಿಯಾದ ವಾಯುಪಡೆ ತುಕಡಿಗಳನ್ನು ಮಂಗಳವಾರ ಗೌರವಿಸಲಾಯಿತು. 51ನೇ ತುಕಡಿ ಹಾಗೂ 9ನೇ ತುಕಡಿ, 601ನೇ ಪಡೆಗಳ ಕಾರ್ಯಾಚರಣೆಯನ್ನು ಸ್ಮರಿಸಲಾಯಿತು. 

1971ರಿಂದ 51ನೇ ತುಕಡಿಯು 71 ಕಾರ್ಯಾಚರಣೆಗಳನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಶ್ಮೀರದಲ್ಲಿ ನೆಲೆಯಾಗಿರುವ 51ನೇ ತುಕಡಿಯ ಭಾಗವಾಗಿದ್ದ ಅಭಿನಂದನ್, ಪಾಕ್ ಪಡೆಯ ಎಫ್–16 ವಿಮಾನವನ್ನು ಹೊಡೆದುರುಳಿಸಿ, ಅಲ್ಲಿ ಸೆರೆಸಿಕ್ಕಿದ್ದರು. ಮೂರು ದಿನಗಳ ಬಳಿಕ ಬಿಡುಗಡೆಯಾಗಿದ್ದರು. 

ಗ್ವಾಲಿಯರ್‌ನಲ್ಲಿ ನೆಲೆಯಾಗಿರುವ 9ನೇ ತುಕಡಿಗೆ ಪುಲ್ವಾಮಾ ದಾಳಿಯ ಬಳಿಕ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ನಾಶಪಡಿಸುವ ಹೊಣೆ ವಹಿಸಲಾಗಿತ್ತು. ರಾತ್ರಿ ವೇಳೆ ಸಮಾನಾಂತರ ರನ್‌ವೇಗಳನ್ನು ಏಕಕಾಲಕ್ಕೆ ಬಳಸಿ ಕಾರ್ಯಾಚರಣೆ ನಡೆಸಿದ್ದು ವಾಯುಪಡೆ ಇತಿಹಾಸದಲ್ಲಿ ಹೊಸತು. 

601 ಪಡೆಗೆ ಜಮ್ಮು ಕಾಶ್ಮೀರ, ಲಡಾಖ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ಜವಾಬ್ದಾರಿ ಇದೆ. ಬಾಲಾಕೋಟ್ ದಾಳಿ ಬಳಿಕ ಪಾಕ್‌ನಿಂದ ಎದುರಾದ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಭಾಯಿಸಿದ್ದು ಈ ಪಡೆಯೇ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)