ಏರ್‌ಸೆಲ್-ಮ್ಯಾಕ್ಸಿಸ್ ಹಗರಣ: ಪಿ. ಚಿದಂಬರಂ, ಕಾರ್ತಿಗೆ ಸದ್ಯ ನಿರಾಳ

7
ಬಂಧನಕ್ಕಿರುವ ಮಧ್ಯಂತರ ರಕ್ಷಣೆ ನವೆಂಬರ್ 26ಕ್ಕೆ ವಿಸ್ತರಣೆ

ಏರ್‌ಸೆಲ್-ಮ್ಯಾಕ್ಸಿಸ್ ಹಗರಣ: ಪಿ. ಚಿದಂಬರಂ, ಕಾರ್ತಿಗೆ ಸದ್ಯ ನಿರಾಳ

Published:
Updated:

ನವದೆಹಲಿ: ಏರ್‌ಸೆಲ್-ಮ್ಯಾಕ್ಸಿಸ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಬಂಧನಕ್ಕೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇದೇ ತಿಂಗಳ 26ರ ವರೆಗೆ ವಿಸ್ತರಣೆ ಮಾಡಿದೆ.

‘ಅವರು (ಚಿದಂಬರಂ) ತನಿಖೆಗೆ ಸಹಕರಿಸುತ್ತಿಲ್ಲ. ನಾವು ಗಡುವಿನ ಒಳಗೆ ತನಿಖೆ ಪೂರ್ಣಗೊಳಿಸಬೇಕಿದೆ’ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಧೀಶ ಒ.ಪಿ. ಸೈನಿ ಅವರ ಬಳಿ ವಾದ ಮಂಡಿಸಿದರು. ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ಸಿಬಿಐ ಗುರುವಾರ ಪ್ರತಿಕ್ರಿಯೆ ಸಲ್ಲಿಸಲಿದೆ ಎಂದೂ ಮೆಹ್ತಾ ತಿಳಿಸಿದರು.

ಏರ್‌ಸೆಲ್-ಮ್ಯಾಕ್ಸಿಸ್ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡಬೇಕು ಎಂದು ಜಾರಿ ನಿರ್ದೇಶನಾಲಯ ಬುಧವಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

₹3500 ಕೋಟಿ ಮೊತ್ತದ ಹಗರಣ ಇದಾಗಿದ್ದು, ಚಿದಂಬರಂ ಅವರನ್ನು ಮೊದಲನೇ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿವೆ. 

2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ವೇಳೆ ಚಿದಂಬರಂ ಅವರು ವಿದೇಶಿ ಕಂಪನಿಗೆ 'ವಿದೇಶಿ ಹೂಡಿಕೆ ಪ್ರಚಾರ ಮಂಡಳಿ'ಯ (ಎಫ್‌ಐಪಿಬಿ) ಮಂಜೂರಾತಿ ನೀಡಿದ್ದು ಹೇಗೆ ಎಂಬ ಕುರಿತು ಸಿಬಿಐ ತನಿಖೆ ನಡೆಸಿತ್ತು. ಮ್ಯಾಕ್ಸಿಸ್‌ನ ಅಂಗಸಂಸ್ಥೆ ಮಾರಿಷಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್‌ಗೆ ಮಂಜೂರಾತಿ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !