ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀ–ಟೂ’ ಚಾಟಿಗೆ ಅಕ್ಬರ್‌ ತಿರುಗೇಟು

12 ಪತ್ರಕರ್ತೆಯರು ಮಾಡಿದ ಲೈಂಗಿಕ ಕಿರುಕುಳ ಆಪಾದನೆಗಳು ಸುಳ್ಳು: ಸ್ಪಷ್ಟನೆ ನೀಡಿದ ಕೇಂದ್ರ ಸಚಿವ
Last Updated 14 ಅಕ್ಟೋಬರ್ 2018, 19:55 IST
ಅಕ್ಷರ ಗಾತ್ರ

ನವದೆಹಲಿ: ‘ಮೀ–ಟೂ’ ಅಭಿಯಾನದ ಭಾಗವಾಗಿ ತಮ್ಮ ವಿರುದ್ಧ 12 ಪತ್ರಕರ್ತೆಯರು ಮಾಡಿರುವ ಲೈಂಗಿಕ ಕಿರುಕುಳದ ಆರೋಪ ಸುಳ್ಳು ಎಂದು ಮಾಜಿ ಸಂಪಾದಕ ಮತ್ತು ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ಹೇಳಿದ್ದಾರೆ.

ಅಕ್ಬರ್‌ ಜತೆ ಕೆಲಸ ಮಾಡುತ್ತಿದ್ದಾಗ ಅಥವಾ ಕೆಲಸದ ಸಂದರ್ಶನಕ್ಕೆ ಹಾಜರಾಗಿದ್ದಾಗ ಅವರು ಅಸಭ್ಯವಾಗಿ ವರ್ತಿಸಿದ್ದರು ಎಂದು ಈ ಪತ್ರಕರ್ತೆಯರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಪತ್ರಕರ್ತೆ ಪ್ರಿಯಾ ರಮಣಿ ಅವರು ಇದೇ 8ರಂದು ಟ್ವೀಟ್‌ ಮೂಲಕ ಮೊದಲ ಆರೋಪ ಮಾಡಿದ್ದರು. ವರ್ಷದ ಹಿಂದೆ ಪ್ರಿಯಾ ಅವರು ಲೇಖನವೊಂದನ್ನು ಪ್ರಕಟಿಸಿ ಅದರಲ್ಲಿ ಲೈಂಗಿಕ ಕಿರುಕುಳದ ಪ್ರಸ್ತಾಪ ಮಾಡಿದ್ದರು. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಅವರು ಹೇಳಿರಲಿಲ್ಲ. ಆ ವ್ಯಕ್ತಿ ಎಂ.ಜೆ. ಅಕ್ಬರ್‌ ಎಂದು ಟ್ವೀಟ್‌ನಲ್ಲಿ ಪ್ರಿಯಾ ಹೇಳಿದ್ದಾರೆ.

ಅದಾದ ಬಳಿಕ, ಪ್ರೇರಣಾ ಸಿಂಗ್‌ ಬಿಂದ್ರಾ, ಘಜಾಲಾ ವಹಾಬ್‌, ಶುತಾಪಾ ಪಾಲ್‌, ಅಂಜು ಭಾರ್ತಿ, ಸುಪರ್ಣಾ ಶರ್ಮಾ, ಶುಮಾ ರಾಹಾ, ಮಾಲಿನಿ ಭೂಪ್ತಾ, ಕನಿಕಾ ಗೆಹ್ಲೋಟ್‌, ಕಾದಂಬರಿ ಎಂ. ವಾಡೆ, ಮಜಿಲಿ ಡೆ ಪ್ಯು ಕಾಂಪ್‌ ಮತ್ತು ರೂಥ್‌ ಡೇವಿಡ್‌ ಅವರು ಅಕ್ಬರ್‌ ವಿರುದ್ಧ ಆರೋಪ ಮಾಡಿದ್ದಾರೆ.

ಪ್ರಿಯಾ ರಮಣಿ, ಪಾಲ್‌, ರಾಹಾ ಮತ್ತು ವಹಾಬ್‌ ಅವರ ಆರೋಪಗಳಿಗೆ ಅಕ್ಬರ್‌ ಈಗ ಉತ್ತರ ಕೊಟ್ಟಿದ್ದಾರೆ.

‘ಪ್ರಿಯಾ ಅವರು ಒಂದು ವರ್ಷದ ಹಿಂದೆ ಲೇಖನ ಬರೆಯುವ ಮೂಲಕ ತಮ್ಮ ವಿರುದ್ಧದ ಅಭಿಯಾನ ಆರಂಭಿಸಿದ್ದರು. ಆದರೆ ಈ ಕತೆ ಸುಳ್ಳು ಎಂದು ಗೊತ್ತಿದ್ದುದರಿಂದಲೇ ಅವರು ಆಗ ನನ್ನ ಹೆಸರು ಉಲ್ಲೇಖಿಸಿರಲಿಲ್ಲ. ಯಾಕೆ ಹೆಸರು ಉಲ್ಲೇಖಿಸಿಲ್ಲ ಎಂದು ಕೇಳಿದ್ದಕ್ಕೆ ‘ಅವರು ಏನೂ ಮಾಡಿರಲಿಲ್ಲ, ಹಾಗಾಗಿ ಹೆಸರಿಸಿಲ್ಲ’ ಎಂದಿದ್ದರು. ನಾನು ಏನೂ ಮಾಡಿಲ್ಲ ಎಂದಾದರೆ ನನ್ನ ವಿರುದ್ಧದ ಆರೋಪ ಏನು’ ಎಂದು ಅಕ್ಬರ್ ಪ್ರಶ್ನಿಸಿದ್ದಾರೆ.

‘ಶುತಾಪಾ ಪಾಲ್‌ ಅವರು ‘ಈ ಮನುಷ್ಯ ನನ್ನ ಮೇಲೆ ಕೈ ಇರಿಸಿಲ್ಲ’ ಎಂದಿದ್ದಾರೆ. ‘ನನಗೆ ಅವರು ಏನೂ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಲೇಬೇಕು’ ಎಂದು ಶುಮಾ ರಾಹಾ ಹೇಳಿದ್ದಾರೆ. ನಾನು ಈಜುಕೊಳದಲ್ಲಿ ಪಾರ್ಟಿ ಮಾಡುತ್ತಿದ್ದೆ ಎಂದು ಅಂಜು ಭಾರ್ತಿ ಎಂಬವರು ಹೇಳಿದ್ದಾರೆ. ಆದರೆ ನನಗೆ ಈಜುವುದಕ್ಕೇ ಬರುವುದಿಲ್ಲ’ ಎಂದು ಅಕ್ಬರ್‌ ತಿಳಿಸಿದ್ದಾರೆ.

‘ಪ್ರಿಯಾ ಮತ್ತು ವಹಾಬ್‌ ಅವರು ಹೇಳಿರುವ ಘಟನೆಗಳ ನಂತರ ಕೂಡ ಅವರಿಬ್ಬರು ನನ್ನ ಜತೆ ಕೆಲಸ ಮಾಡಿದ್ದಾರೆ. ಅವರಿಗೆ ಯಾವುದೇ ಆತಂಕ ಮತ್ತು ಅನನುಕೂಲ ಇರಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಏನೂ ನಡೆದಿಲ್ಲ ಎಂಬುದೇ ಇಷ್ಟು ಕಾಲ ಅವರು ಸುಮ್ಮನಿರಲು ಕಾರಣ’ ಎಂದುಪ್ರತಿಪಾದಿಸಿದ್ದಾರೆ.

ಆರೋಪಗಳು ಕೇಳಿ ಬಂದ ಸಂದರ್ಭದಲ್ಲಿ ಅಕ್ಬರ್‌ ಅವರು ವಿದೇಶ ಪ್ರವಾಸದಲ್ಲಿದ್ದರು. ಆಫ್ರಿಕಾದ ದೇಶಗಳಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದ ಅವರು ಭಾನುವಾರ ದೆಹಲಿಗೆ ಮರಳಿದ್ದಾರೆ.

ಆರೋಪ ವ್ಯಕ್ತವಾದ ಸಂದರ್ಭವನ್ನೂ ಅಕ್ಬರ್‌ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದಲೇ ಈ ಆರೋಪ ಕೇಳಿ ಬಂದಿದೆ ಎಂದು ಹೇಳಿದ್ದಾರೆ.

‘ಪ್ರಕರಣ ಯಾವುದೇ ಇರಲಿ, ನನ್ನ ವಕೀಲರು ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಮುಂದೆ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸಲಿದ್ದಾರೆ’ ಎಂದು ಅಕ್ಬರ್‌ ಹೇಳಿದ್ದಾರೆ.

**

ನಿರ್ದೇಶಕಿಯರ ಬೆಂಬಲ

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲಲು ಭಾರತೀಯ ಚಿತ್ರರಂಗದ ನಿರ್ದೇಶಕಿಯರು ಮುಂದಾಗಿದ್ದಾರೆ. ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಸಾಬೀತಾದ ಜನರ ಜತೆಗೆ ಕೆಲಸ ಮಾಡದಿರಲು ಹಲವು ನಿರ್ದೇಶಕಿಯರು ನಿರ್ಧರಿಸಿದ್ದಾರೆ.‌

ಪ್ರಸಿದ್ಧ ನಿರ್ದೇಶಕಿಯರಾದ ಕೊಂಕಣಾ ಸೇನ್‌ ಶರ್ಮಾ, ನಂದಿತಾ ದಾಸ್‌, ಮೇಘನಾ ಗುಲ್ಜಾರ್‌, ಗೌರಿ ಶಿಂಧೆ, ಕಿರಣ್‌ ರಾವ್‌, ರೇಮಾ ಕಾಗ್ಟಿ, ಜೋಯಾ ಅಖ್ತರ್‌ ‘ಮೀ–ಟೂ’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

**

ಘಾಯ್‌ ವಿರುದ್ಧ ದೂರು ದಾಖಲು

ಬಾಲಿವುಡ್‌ ನಿರ್ದೇಶಕ ಸುಭಾಷ್‌ ಘಾಯ್‌ ವಿರುದ್ಧ ನಟಿ ಮತ್ತು ರೂಪದರ್ಶಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ‘ನಟಿಯೊಬ್ಬರು ಲಿಖಿತ ದೂರು ನೀಡಿದ್ದಾರೆ. ತನಿಖೆ ಆರಂಭವಾಗಿದೆ’ ಎಂದು ಮುಂಬಯಿ 9ನೇ ವಲಯದ ಡಿಸಿಪಿ ಪರಮ್‌ಜಿತ್‌ ಸಿಂಗ್‌ ದಹಿಯಾ ತಿಳಿಸಿದ್ದಾರೆ.

**‌

ವಿಶೇಷ ಇ–ಮೇಲ್‌

‘ಮೀ–ಟೂ’ ಅಭಿಯಾನದ ಅಡಿಯಲ್ಲಿ ವ್ಯಕ್ತವಾಗುತ್ತಿರುವ ಲೈಂಗಿಕ ಕಿರುಕುಳ ದೂರುಗಳನ್ನು ದಾಖಲಿಸಲು ಪ್ರತ್ಯೇಕ ಇ–ಮೇಲ್‌ ವಿಳಾಸವನ್ನು ದೆಹಲಿ ಮಹಿಳಾ ಆಯೋಗ ಆರಂಭಿಸಿದೆ. ಈ ವಿಚಾರದಲ್ಲಿ ನೆರವು ಬೇಕಿರುವವರು 181 ಸಂಖ್ಯೆಗೆ ಕರೆ ಕೂಡ ಮಾಡಬಹುದು.

ಅಭಿಯಾನದ ಅಡಿಯಲ್ಲಿ ಆರೋಪ ಮಾಡುತ್ತಿರುವ ಮಹಿಳೆಯರು ಈ ಬಗ್ಗೆ ಪೊಲೀಸ್‌ ಮತ್ತು ಆಯೋಗಕ್ಕೆ ದೂರು ಸಲ್ಲಿಸಬೇಕು ಎಂದೂ ಆಯೋಗ ಕೋರಿದೆ.

**

ಸುಳ್ಳಿಗೆ ಕಾಲುಗಳಿಲ್ಲ, ಆದರೆ ಅವು ವಿಷಪೂರಿತ. ಇದು ಉನ್ಮಾದಕ್ಕೆ ಕಾರಣವಾಗಬಹುದು. ಇದು ವೇದನಾದಾಯಕ. ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ.

ಎಂ.ಜೆ. ಅಕ್ಬರ್‌, ಕೇಂದ್ರ ಸಚಿವ

**

ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ದೂರು ಕೊಡುವುದರಿಂದ ಇಂಥವರನ್ನು ಜೈಲಿಗೆ ತಳ್ಳಬಹುದು. ಇದನ್ನು ಬಹಳ ಹಿಂದೆಯೇ ಮಾಡಬೇಕಿತ್ತು

-ದೆಹಲಿ ಮಹಿಳಾ ಆಯೋಗ

**

ಒಂದೆಡೆ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವ ಪ್ರಧಾನಿ ಮತ್ತೊಂದೆಡೆ ತಮ್ಮ ಸಂಪುಟದ ಸಚಿವರ ವಿರುದ್ಧದ ಆರೋಪದ ಬಗ್ಗೆ ಮೌನ ತಾಳಿದ್ದಾರೆ.

-ಆನಂದ್‌ ಶರ್ಮಾ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT