ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸಿಆರ್‌ ಒಕ್ಕೂಟಕ್ಕೆ ಸಮಾಜವಾದಿ ಪಕ್ಷ?

ಮಾತುಕತೆಗಾಗಿ ಹೈದರಾಬಾದ್‌ಗೆ ಹೊರಟುನಿಂತ ಅಖಿಲೇಶ್‌ ಯಾದವ್‌
Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಒಕ್ಕೂಟರಂಗ ರಚಿಸುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಜತೆ ಕೈಜೋಡಿಸುವ ಸುಳಿವು ನೀಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಏಕೈಕ ಶಾಸಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದ ಕಾಂಗ್ರೆಸ್‌ ವರ್ತನೆಯಿಂದ ಮುನಿಸಿಕೊಂಡಿರುವ ಅಖಿಲೇಶ್‌ ಯಾದವ್‌ ಈ ನಿರ್ಧಾರ ತೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಧ್ಯ ಪ್ರದೇಶದಲ್ಲಿ ಸರ್ಕಾರ ರಚನೆಗೆ ಸರಳ ಬಹುಮತದ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್‌ಗೆ ಸಮಾಜವಾದಿ ಪಕ್ಷ ಬೆಷರತ್‌ ಬೆಂಬಲ ನೀಡಿತ್ತು. ಇಲ್ಲಿ ಸಮಾಜವಾದಿ ಪಕ್ಷದ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಹೊರಗಿಟ್ಟು ರಾಷ್ಟ್ರೀಯ ಮಟ್ಟದಲ್ಲಿ ಒಕ್ಕೂಟರಂಗ ರಚಿಸುವ ಪ್ರಯತ್ನದಲ್ಲಿ ತೊಡಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಜತೆ ಮೈತ್ರಿ ಮಾತುಕತೆ ನಡೆಸಲು ಜನವರಿ 6ರ ನಂತರ ಹೈದರಾಬಾದ್‌ಗೆ ತೆರಳುವುದಾಗಿ ಅಖಿಲೇಶ್‌ ತಿಳಿಸಿದ್ದಾರೆ.

ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಅವರನ್ನು ಕೆಸಿಆರ್‌ ಬುಧವಾರ ಭೇಟಿಯಾಗುವ ಕಾರ್ಯಕ್ರಮವಿತ್ತು. ಆದರೆ, ಅದು ರದ್ದಾಗಿದೆ.

ಅಜಿತ್‌ ಸಿಂಗ್‌ ನೇತೃತ್ವದ ರಾಷ್ಟ್ರೀಯ ಲೋಕದಳವು (ಆರ್‌ಎಲ್‌ಡಿ) ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ನೇತೃತ್ವದ ಮೈತ್ರಿಕೂಟ ಸೇರುವ ಸುಳಿವು ನೀಡಿದ್ದಾರೆ.

ಈಗಾಗಲೇ ಸ್ಥಾನ ಹೊಂದಾಣಿಕೆ ಅಂತಿಮಗೊಂಡಿದ್ದು ಎಸ್‌ಪಿ 37 ಮತ್ತು ಬಿಎಸ್‌ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಮೂರು ಕ್ಷೇತ್ರಗಳನ್ನು ಆರ್‌ಎಲ್‌ಡಿಗೆ ಬಿಟ್ಟು ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

ಕಾಂಗ್ರೆಸ್‌ನತ್ತ ಶಿವಪಾಲ್‌ ಸಿಂಗ್‌

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಜತೆ ಕೈಜೋಡಿಸಲು ಸಿದ್ಧ ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಮುಖಂಡ ಶಿವಪಾಲ್‌ ಸಿಂಗ್‌ ಯಾದವ್‌ ಬುಧವಾರ ಪ್ರಕಟಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಸಹೋದರರಾದ ಶಿವಪಾಲ್‌ ಸಿಂಗ್‌ ಅವರು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಹುಟ್ಟು ಹಾಕಿದ್ದಾರೆ.

ಪ್ರಧಾನಿ ಭೇಟಿಯಾದ ಕೆಸಿಆರ್‌

ಟಿಆರ್‌ಎಸ್‌ ಮುಖಂಡ ಕೆ. ಚಂದ್ರಶೇಖರ್‌ ರಾವ್‌ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪ್ರಧಾನಿ ಜತೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಸಿದ ಮಾತುಕತೆ ವೇಳೆ ತೆಲಂಗಾಣ ಅಭಿವೃದ್ಧಿ ಯೋಜನೆ ಮತ್ತು ನೀರಾವರಿ ಯೋಜನೆಗಳ ಕುರಿತು ಚರ್ಚಿಸಲಾಯಿತು ಎಂದು ಕೆಸಿಆರ್‌ ಹೇಳಿದ್ದಾರೆ.

**
ಮುಖ್ಯಾಂಶಗಳು
ಕಾಂಗ್ರೆಸ್ ಜತೆ ಮುನಿಸಿಕೊಂಡ ಅಖಿಲೇಶ್‌ ಯಾದವ್‌

ಮಧ್ಯಪ್ರದೇಶ ಸಂಪುಟದಲ್ಲಿ ಎಸ್‌.ಪಿ ಶಾಸಕನಿಗೆ ಸಿಗದ ಸಚಿವ ಸ್ಥಾನ

ಎಸ್‌.ಪಿ ಬಿಎಸ್‌ಪಿ ಮೈತ್ರಿಕೂಟಕ್ಕೆ ಅಜಿತ್‌ಸಿಂಗ್

**

2019ರಲ್ಲಿ ಬಿಜೆಪಿಯನ್ನು ಎದುರಿಸಲು ಒಂದಿಲ್ಲ ಒಂದು ಮಹಾ ಮೈತ್ರಿಕೂಟ ನಿಶ್ಚಿತವಾಗಿ ಅಸ್ತಿತ್ವಕ್ಕೆ ಬರಲಿದೆ
– ಅಖಿಲೇಶ್‌ ಯಾದವ್‌, ಎಸ್‌ಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT