ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮಳೆ: ಪ್ರವಾಹದಲ್ಲಿ ಸಿಲುಕಿದ್ದ ರೈಲಿನಿಂದ 1,050 ಪ್ರಯಾಣಿಕರ ರಕ್ಷಣೆ

ಮುಂಬೈ, ಠಾಣೆ, ರತ್ನಗಿರಿಯಲ್ಲಿ ಭರಪೂರ ಮಳೆ
Last Updated 27 ಜುಲೈ 2019, 13:12 IST
ಅಕ್ಷರ ಗಾತ್ರ

ಮುಂಬೈ: ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಮುಂಬೈ ನಗರಿ ತತ್ತರಿಸಿದೆ. ಮುಂಬೈನಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು, ಶುಕ್ರವಾರ ರಾತ್ರಿಯಿಂದ ಠಾಣೆಯ ಬದಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ರೈಲಿನಲ್ಲಿದ್ದ 1,050 ಪ್ರಯಾಣಿಕರನ್ನು ಶನಿವಾರ ಮಧ್ಯಾಹ್ನದ ವೇಳೆಗೆ ರಕ್ಷಿಸಲಾಯಿತು.

ಶುಕ್ರವಾರ ರಾತ್ರಿಯೇ ರೈಲು ಮುಂಬೈನಿಂದ ಹೊರಟಿತ್ತು. ಠಾಣೆ ಜಿಲ್ಲೆಯ ವಂಗಾನಿ ಪಟ್ಟಣದ ಹೊರವಲಯದಲ್ಲಿ ಪ್ರವಾಹದ ನೀರಿನಿಂದ ಹಳಿಗಳು ಜಲಾವೃತವಾಗಿತ್ತು. ರೈಲು ಆ ಸ್ಥಳದಿಂದ ಮುಂದೆ ಸಾಗುವುದು ಅಸಾಧ್ಯವಾಗಿತ್ತು. ಹೀಗಾಗಿ ರೈಲು ಅಲ್ಲೇ ನಿಂತಿತ್ತು ಎಂದು ರೈಲ್ವೆ ಮೂಲಗಳು ಹೇಳಿವೆ.

ಎನ್‌ಡಿಆರ್‌ಎಫ್‌ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ
ಎನ್‌ಡಿಆರ್‌ಎಫ್‌ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ

ತಡರಾತ್ರಿಯಲ್ಲಿ ರೈಲಿನ ಸಂಚಾರ ಸ್ಥಗಿತವಾಗಿದ್ದರೂ, ರೈಲ್ವೆಗೆ ಮಾಹಿತಿ ಲಭ್ಯವಾಗುವಾಗ ಬೆಳಗಿನ ಜಾವವಾಗಿತ್ತು. ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್‌ಡಿಆರ್‌ಎಫ್‌) ಮಾಹಿತಿ ರವಾನೆಯಾಗಿ, ಅವರು ರಕ್ಷಣೆಗೆ ಧಾವಿಸುವಾಗ ಶನಿವಾರ ಬೆಳಿಗ್ಗೆ 9.15 ಕಳೆದಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ರೈಲು ಮಾರ್ಗದಿಂದ ಎರಡೂ ಬದಿಯಲ್ಲಿ ಸುಮಾರು 2 ಕಿ.ಮೀ.ನಷ್ಟು ದೂರದವರೆಗೂ ಪ್ರವಾಹದ ನೀರು ನಿಂತಿತ್ತು. ಹೀಗಾಗಿ ಎನ್‌ಡಿಆರ್‌ಎಫ್‌ ಒಂದರಿಂದಲೇ ರಕ್ಷಣಾ ಕಾರ್ಯ ಸಾಧ್ಯವಿರಲಿಲ್ಲ. ಹೀಗಾಗಿ ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ನೆರವನ್ನು ಎನ್‌ಡಿಆರ್‌ಎಫ್‌ ಕೋರಿತು. ಈ ಎಲ್ಲಾ ಪಡೆಗಳ ಸಂಯೋಜಿತ ಕಾರ್ಯಾಚರಣೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯತು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ನ ದೋಣಿಗಳು, ನೌಕಾಪಡೆಯ ದೋಣಿಗಳು ಮತ್ತು ಮುಳುಗುತಜ್ಞರು, ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಭೂಸೇನೆಯ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.

ರಕ್ಷಣಾ ಕಾರ್ಯಾಚರಣೆ ದೃಶ್ಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT