ಸೋಮವಾರ, ಸೆಪ್ಟೆಂಬರ್ 27, 2021
21 °C
ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ

ಸ್ವಿಸ್‌ ಬ್ಯಾಂಕ್‌ ಠೇವಣಿ: ಎಲ್ಲ ಹಣ ಕಪ್ಪಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ವಿಸ್‌ ರಾಷ್ಟ್ರೀಯ ಬ್ಯಾಂಕ್‌ 

ನವದೆಹಲಿ: ಸ್ವಿಟ್ಜರ್‌ಲೆಂಡ್‌ನ(ಸ್ವಿಸ್‌) ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿದೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌, ಈ ಎಲ್ಲ ಮೊತ್ತವನ್ನು ಕಪ್ಪುಹಣ ಎಂದು ಕರೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಕಪ್ಪುಹಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ತಪ್ಪಿತಸ್ಥರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಯೂಷ್‌ ಹೇಳಿದ್ದಾರೆ. 

ಬ್ಯಾಂಕ್‌ ಖಾತೆಗಳ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ಸ್ವಿಟ್ಜರ್‌ಲೆಂಡ್‌ ಜತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಪ್ರಕಾರ ಅಲ್ಲಿ ಭಾರತೀಯರು ಇರಿಸಿರುವ ಠೇವಣಿಯ ಮಾಹಿತಿಯನ್ನು ಪಡೆಯಲಾಗುವುದು ಎಂದರು. 

ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಠೇವಣಿ 2017ರಲ್ಲಿ ಶೇ 50ರಷ್ಟು ಹೆಚ್ಚಳವಾಗಿ ₹7 ಸಾವಿರ ಕೋಟಿ ತಲುಪಿದೆ. ಸ್ವಿಸ್‌ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣದ ಮೇಲೆ ಸರ್ಕಾರ ಹದ್ದಿನ ಕಣ್ಣು ಇರಿಸಿದ ಪರಿಣಾಮ ಕಳೆದ ಮೂರು ವರ್ಷಗಳಲ್ಲಿ ಠೇವಣಿ ಪ್ರಮಾಣ ಇಳಿಕೆಯಾಗಿತ್ತು. ಆದರೆ 2017ರಲ್ಲಿ ಒಮ್ಮಿಂದೊಮ್ಮೆಲೆ ಇದು ಏರಿಕೆಯಾಗಿದೆ. 

2018ರ ಜನವರಿ 1ರಿಂದ ಡಿಸೆಂಬರ್‌ 31ರವರೆಗಿನ ಠೇವಣಿಯ ಮಾಹಿತಿಯನ್ನು ಸ್ವಿಟ್ಜರ್‌ಲೆಂಡ್‌ ಸರ್ಕಾರವು ಭಾರತಕ್ಕೆ ನೀಡಲಿದೆ ಎಂದರು.

ಮೋದಿ ವಿರುದ್ಧ ರಾಹುಲ್‌ ಟೀಕೆ

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಶೇ 50ರಷ್ಟು ಹೆಚ್ಚಳವಾಗಿರುವುದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ಮೊತ್ತ ‘ಸಕ್ರಮ ಹಣ’ವೇ ಹೊರತು ಕಪ್ಪುಹಣ ಅಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ.

‘ಸ್ವಿಸ್‌ ಬ್ಯಾಂಕ್‌ನಲ್ಲಿರುವ ಎಲ್ಲ ಕಪ್ಪುಹಣವನ್ನು ವಾಪಸ್‌ ತಂದು ಪ್ರತಿ ಭಾರತೀಯನ ಖಾತೆಗೆ ₹15 ಲಕ್ಷ ಜಮೆ ಮಾಡುತ್ತೇನೆ ಎಂದು 2014ರಲ್ಲಿ ಮೋದಿ ಹೇಳಿದ್ದರು.

‘ನೋಟು ರದ್ದತಿಯಿಂದಾಗಿ ಭಾರತದ ಕಪ್ಪುಹಣದ ಸಮಸ್ಯೆ ಪರಿಹಾರವಾಗಲಿದೆ ಎಂದು ಅವರು 2016ರಲ್ಲಿ ಹೇಳಿದ್ದರು.

‘ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿಯಲ್ಲಿ ಆಗಿರುವ ಶೇ 50ರಷ್ಟು ಹೆಚ್ಚಳ ಕಪ್ಪುಹಣ ಅಲ್ಲ ಎಂದು 2018ರಲ್ಲಿ ಹೇಳುತ್ತಿದ್ದಾರೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸ್ವಿಸ್‌ ಬ್ಯಾಂಕ್‌ನ ಠೇವಣಿ ಪ್ರಮಾಣ ಕುಸಿದಿತ್ತು. ಮೋದಿ ಅವರ ಆಡಳಿತದಲ್ಲಿ ಅದು ದಾಖಲೆ ಏರಿಕೆ ಕಂಡಿದೆ. 2004ರ ಬಳಿಕ ಠೇವಣಿ ಪ್ರಮಾಣದಲ್ಲಿ ಗರಿಷ್ಠ ಏರಿಕೆ ಆಗಿದೆ’ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

ಏರಿಕೆಗೆ ಕಾರಣ ಏನು

ಉದಾರೀಕೃತ ಹಣ ರವಾನೆ ಯೋಜನೆಯಿಂದಾಗಿ (ಎಲ್‌ಆರ್‌ಎಸ್‌) ಸ್ವಿಸ್‌ ಬ್ಯಾಂಕುಗಳಲ್ಲಿನ ಠೇವಣಿ ಶೇ 40ರಷ್ಟು ಏರಿಕೆಯಾಗಿದೆ. ಪಿ.ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಈ ಯೋಜನೆ ಜಾರಿಗೆ ತರಲಾಗಿದೆ. ಒಬ್ಬ ವ್ಯಕ್ತಿಗೆ 2.5 ಲಕ್ಷ ಡಾಲರ್‌ ವರೆಗೆ (ಸುಮಾರು ₹1.70 ಕೋಟಿ) ಒಂದು ವರ್ಷದಲ್ಲಿ ವಿದೇಶಕ್ಕೆ ರವಾನೆ ಮಾಡಲು ಇದು ಅವಕಾಶ ಕೊಟ್ಟಿದೆ ಎಂದು ಠೇವಣಿ ಹೆಚ್ಚಳಕ್ಕೆ ಪೀಯೂಷ್‌ ಕಾರಣ ಕೊಟ್ಟಿದ್ದಾರೆ.

**

ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕ‍ಪ್ಪುಹಣ ವಾಪಸ್‌ ತರುವುದಾಗಿ ಮೋದಿ ಅವರು ನೀಡಿದ ಭರವಸೆಯ ಗತಿ ಏನಾಗಿದೆ?
ಆರ್‌‍.ಪಿ.ನ್‌. ಸಿಂಗ್‌, ಕಾಂಗ್ರೆಸ್‌ ವಕ್ತಾರ 

**

ಮುಂದಿನ ಜನವರಿಯಿಂದ ಕಪ್ಪುಹಣ ಠೇವಣಿದಾರರ ಮಾಹಿತಿ ದೊರೆಯಲಿದೆ. ಕೆಲವೇ ತಿಂಗಳಲ್ಲಿ ಹೆಸರು ಬಹಿರಂಗವಾಗಲಿದೆ. ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ಕಾದಿದೆ
ಅರುಣ್‌ ಜೇಟ್ಲಿ, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು