ಗುರುವಾರ , ನವೆಂಬರ್ 14, 2019
19 °C

ಟಾಯ್ಲೆಟ್ ಸೀಟ್‌ ಕವರ್‌ಗೆ ಹಿಂದೂ ದೇವತೆಗಳ ಚಿತ್ರ: ಅಮೆಜಾನ್ ವಿರುದ್ಧ ಆಕ್ರೋಶ

Published:
Updated:

ಮುಂಬೈ: ಟಾಯ್ಲೆಟ್ ಸೀಟ್ ಕವರ್‌, ಡೋರ್‌ಮ್ಯಾಟ್‌ಗಳ ಮೇಲೆ ಶಿವ, ಗಣಪತಿ ಸೇರಿದಂತೆ ಹಲವು ಹಿಂದೂ ದೇವತೆಗಳ ಚಿತ್ರವಿರುವ ಉತ್ಪನ್ನಗಳು ಆನ್‌ಲೈನ್ ಮಾರಾಟ ತಾಣ ಅಮೆಜಾನ್‌ನ ಅಮೆರಿಕದ ವೆಬ್‌ಸೈಟ್‌ನಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ದೇಶದಾದ್ಯಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

#BoycottAmazon ಹ್ಯಾಷ್‌ಟ್ಯಾಗ್‌ನಡಿ ಆಕ್ರೋಶ ಹೊರಹಾಕಿದ ನೆಟ್ಟಿಗರು ಮೊಬೈಲ್‌ಗಳಿಂದ ಅಮೇಜಾನ್ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡುತ್ತಿರುವ ಸ್ಕ್ರೀನ್‌ಶಾಟ್‌ಗಳೊಂದಿಗೆ ಅಮೇಜಾನ್ ಬಹಿಷ್ಕರಿಸಿ ಎಂದು ಕರೆ ನೀಡಿದರು. #BoycottAmazon ಹ್ಯಾಷ್‌ಟ್ಯಾಗ್‌ ಗುರುವಾರ ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್ ಆಗಿತ್ತು. ಶುಕ್ರವಾರವೂ ಅದರ ಕಾವು ಇಳಿದಿಲ್ಲ.

ತಮ್ಮ ಟ್ವೀಟ್‌ಗಳನ್ನು ವಿದೇಶಾಂಗ ವ್ಯವಹಾರ ಸಚಿವ ಸುಷ್ಮಾ ಸ್ವರಾಜ್‌ ಟ್ಯಾಗ್ ಮಾಡಿದ ಹಲವರು ಕಂಪನಿಯ ಹಿಂದೂ ವಿರೋಧಿ ನಿಲುವನ್ನು ಗಮನಿಸಿ, ತಕ್ಷಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು. ಜನರ ಆಕ್ರೋಶಕ್ಕೆ ಬೆಲೆಕೊಟ್ಟ ಅಮೇಜಾನ್ ‘ಯಾರಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಅಂಥ ಉತ್ಪನ್ನಗಳನ್ನು ಆನ್‌ಲೈನ್ ಸ್ಟೋರ್‌ನಿಂದ ತೆಗೆದುಹಾಕುತ್ತಿದ್ದೇವೆ’ ಎಂದು ಸಮಜಾಯಿಷಿ ನೀಡಿತು.

‘ಅಮೆಜಾನ್‌ನಲ್ಲಿ ಉತ್ಪನ್ನಗಳನ್ನು ಮಾರುವ ಎಲ್ಲ ವ್ಯಾಪಾರಿಗಳೂ ನಮ್ಮ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು. ನಮ್ಮ ಸೂಚನೆ ಉಲ್ಲಂಘಿಸುವವರ ಅಕೌಂಟ್‌ಗಳನ್ನೂ ತೆಗೆದುಹಾಕಬೇಕಾಗುತ್ತದೆ’ ಎಂದು ಅಮೆಜಾನ್ ತನ್ನ ಸ್ಪಷ್ಟನೆಯಲ್ಲಿ ತಿಳಿಸಿತ್ತು. ಬಳಕೆದಾರರು ದೂರಿದ ನಂತರ ಈ ಉತ್ಪನ್ನಗಳನ್ನು ಅಮೆಜಾನ್ ತೆಗೆದುಹಾಕಿದೆ.

2017ರಲ್ಲಿ ಅಮೆಜಾನ್‌ನ ಕೆನಡಾ ವೆಬ್‌ಸೈಟ್‌ನಲ್ಲಿ ಭಾರತದ ರಾಷ್ಟ್ರಧ್ವಜಗಳಿರುವ ಡೋರ್‌ಮ್ಯಾಟ್‌ಗಳು ಮಾರಾಟಕ್ಕೆ ಬಂದಿದ್ದವು. ಆಗ ಭಾರತ ಸರ್ಕಾರ ಮಧ್ಯಪ್ರವೇಶಿಸಿ, ಅಮೆಜಾನ್‌ಗೆ ಕಠಿಣ ಎಚ್ಚರಿಕೆ ನೀಡಿತ್ತು. ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ‘ರಾಷ್ಟ್ರಧ್ವಜವಿರುವ ಡೋರ್‌ಮ್ಯಾಟ್‌ಗಳನ್ನು ತೆಗೆದು ಹಾಕದಿದ್ದರೆ ಭಾರತದಲ್ಲಿರುವ ಅಮೇಜಾನ್ ನೌಕರರ ವೀಸಾ ರದ್ದುಪಡಿಸುವ ಎಚ್ಚರಿಕೆ ನೀಡಿದ್ದರು. ಈ ಪ್ರಸಂಗವನ್ನು ಹಲವರು ಈಗ ನೆನಪಿಸಿಕೊಳ್ಳುತ್ತಿದ್ದಾರೆ.

ಭಾರತೀಯ ದೇವತೆಗಳ ಚಿತ್ರ ಇರುವ ಟಾಯ್ಲೆಟ್‌ ಸೀಟ್‌ ಕವರ್‌, ಯೋಗಾ ಮ್ಯಾಟ್, ಸ್ನೀಕರ್‌ (ಶೂ), ರಗ್ ಮತ್ತು ಇತರ ಉತ್ಪನ್ನಗಳು  ಅಮೆಜಾನ್‌ನ ಅಮೆರಿಕ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದುದನ್ನು ರಾಯಿಟರ್ಸ್‌ ದೃಢಪಡಿಸಿದೆ. ಈ ಪೈಕಿ ಹಲವು ಉತ್ಪನ್ನಗಳು ಪ್ರಸ್ತುತ ಮಾರಾಟಕ್ಕೆ ಲಭ್ಯವಿಲ್ಲ ಎಂದೂ ರಾಯಿಟರ್ಸ್‌ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)