ಗುರುವಾರ , ಜೂನ್ 24, 2021
22 °C
ಹೊಸ ಕಾನೂನು ಜಾರಿಗೆ ಆಂಧ್ರ ಸಚಿವ ಸಂಪುಟ ಒಪ್ಪಿಗೆ 

ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ: ವಿಶೇಷ ಕಾಯ್ದೆ ಜಾರಿಗೆ ಆಂಧ್ರ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು 21 ದಿನಗಳ ಒಳಗಾಗಿ ಕಡ್ಡಾಯವಾಗಿ ವಿಲೇವಾರಿ ಮಾಡಲು ಹಾಗೂ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕರಡು ಮಸೂದೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ. 

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕೂಡಲೇ ವಿಚಾರಣೆ ನಡೆಸಲು ಹಾಗೂ  ಕೂಡಲೇ ಆರೋಪಿಗೆ ಶಿಕ್ಷೆ ವಿಧಿಸಲು ‘ಎಪಿ ದಿಶಾ ಆಕ್ಟ್‌’ ಎಂಬ ಹೊಸ ಕಾಯ್ದೆ, ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ‘ಎಪಿ ವಿಶೇಷ ನ್ಯಾಯಾಲಯ 2019’ ಎಂಬ ಮತ್ತೊಂದು ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

‘ಎಪಿ ದಿಶಾ ಆಕ್ಟ್‌’ನ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರು ದಾಖಲಾದ ಏಳು ದಿನಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ಒಟ್ಟು 21 ದಿನಗಳ ಒಳಗೆ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಈ ಕರಡಿನ ಮುಖ್ಯಾಂಶವಾಗಿದೆ.

ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ದೌರ್ಜನ್ಯ ಪ್ರಕರಣಗಳ ಕುರಿತು ನಾಲ್ಕು ತಿಂಗಳಲ್ಲಿ ವಿಚಾರಣೆ ಅನುಮತಿ ನೀಡಲಾಗಿತ್ತು. ಈ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ... ಹೈದರಾಬಾದ್ ಎನ್‌ಕೌಂಟರ್ | ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ

‘ಎಪಿ ವಿಶೇಷ ನ್ಯಾಯಾಲಯ 2019’ ಕರಡು

ಮಹಿಳೆಯರು ಮತ್ತು ಮಕ್ಕಳ ಮೇಲಿನ ನಿರ್ದಿಷ್ಟ ಅಪರಾಧಗಳಿಗಾಗಿ ‘ಎಪಿ ವಿಶೇಷ ನ್ಯಾಯಾಲಯ 2019’ರ ಹೊಸ ಕರಡನ್ನು ಸಿದ್ಧಪಡಿಸಿದೆ. ಈ ಕಾಯ್ದೆಯಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ಆಸಿಡ್‌ ದಾಳಿಯಂತಹ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸಲು ಆಂಧ್ರ ಪ್ರದೇಶದ 13 ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇತ್ತೀಚಿಗೆ ನೆರೆ ರಾಜ್ಯ ತೆಲಂಗಾಣದಲ್ಲಿ 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ದೇಹವನ್ನು ಸುಟ್ಟುಹಾಕಲಾಗಿತ್ತು. ಘಟನೆ ಬಗ್ಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದರು. ಹೈದರಾಬಾದ್‌ ಎನ್‌ಕೌಂಟರ್‌ ಪ್ರಕರಣ ಸಂಬಂಧ ಪೊಲೀಸರ ಕ್ರಮಕ್ಕೆ ಜಗನ್‌ ಬೆಂಬಲ ವ್ಯಕ್ತಪಡಿಸಿದ್ದರು.

‘ಶಿಕ್ಷೆ ಪ್ರಮಾಣ ಹೆಚ್ಚಳ’

ಸದ್ಯ ಜಾರಿಯಲ್ಲಿರುವ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮಸೂದೆ–2019'ರ ಪ್ರಕಾರ, ಅಪರಾಧಿಗೆ 3ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಈ ಕಾಯ್ದೆಗೆ ತಿದ್ದುಪಡಿ ತರಲು ಮೂಲಕ ಆರೋಪಿಗಳ ಜೈಲು ಶಿಕ್ಷೆ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ.  ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು... 

 ಪಶು ವೈದ್ಯೆ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ: ವ್ಯಾಪಕ ಆಕ್ರೋಶ

ರಾಕ್ಷಸರ ವಿರುದ್ಧ ಹೋರಾಡುವವರೇ ರಾಕ್ಷಸರಾಗುವ ಅಪಾಯ

ಎನ್‌ಕೌಂಟರ್‌ ವಿವರ ಬಿಚ್ಚಿಟ್ಟ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ್‌ 

ಎನ್‌ಕೌಂಟರ್‌: ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ತಡೆ 

ಎನ್‌ಕೌಂಟರ್: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ 

ತಕ್ಷಣ ತನಿಖೆಗೆ ಮಾನವ ಹಕ್ಕು ಆಯೋಗ ಆದೇಶ

ನನ್ನ ಮಗನನ್ನು ಸುಟ್ಟು ಬಿಡಿ: ಪಶುವೈದ್ಯೆ ಅತ್ಯಾಚಾರ ಆರೋಪಿ ತಾಯಿ ಆಕ್ರೋಶ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು