ಭಾನುವಾರ, ಜನವರಿ 19, 2020
27 °C
ರಾಜ್ಯದ ಹೊರಗಿನವರೂ ಅರ್ಜಿ ಸಲ್ಲಿಸಲು ಮೊದಲ ಬಾರಿಗೆ ಅವಕಾಶ

ಜಮ್ಮು ಕಾಶ್ಮೀರದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ವಿಶೇಷಾಧಿಕಾರ ರದ್ದತಿ ಬಳಿಕ ಜಮ್ಮು ಕಾಶ್ಮೀರ ಸರ್ಕಾರವು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದು, ಹೊರಗಿನವರಿಗೆ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. 

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಮ್ಮು ಮತ್ತು ಕಾಶ್ಮೀರ ವ್ಯಾಪಾರ ಉತ್ತೇಜಕ ಸಂಸ್ಥೆಯ (ಜೆಕೆಟಿಪಿಒ) ವ್ಯವಸ್ಥಾಪಕರ ನಿರ್ದೇಶಕರು ಡಿ.17ರಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಸಂಸ್ಥೆಯ ಏಳು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ. 

ನೇಮಕಗೊಂಡ ಏಳು ವೃತ್ತಿಪರ ರನ್ನು 2020ರಲ್ಲಿ ನಡೆಸಲು ಉದ್ದೇಶಿಸಿರುವ ಜಾಗತಿಕ ಬಂಡವಾಳ ಹೂಡಿಕೆ
ದಾರರ ಸಮಾವೇಶದಲ್ಲಿ ಆರು ತಿಂಗಳು ತರಬೇತಿಗೆ ನಿಯೋಜಿಸಲು ಉದ್ದೇಶಿಸಲಾಗಿದೆ. ತಿಂಗಳಿಗೆ ₹25 ಸಾವಿರ ಸಂಭಾವನೆ ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.

ಎಂಬಿಎ ಪದವಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ನೇಮಕಾತಿ ನಡೆಯಲಿದೆ. ಭಾರತೀಯ ನಾಗರಿಕರು ಮಾತ್ರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜಮ್ಮು ಕಾಶ್ಮೀರದ ನಿವಾಸಿಗಳಿಗೆ ಆದ್ಯತೆ ನೀಡಲಾಗುವುದು. 

‘ಜಮ್ಮು ಕಾಶ್ಮೀರದ ಹೊರಗಿನವರಿಗೆ ಅವಕಾಶ ನೀಡಿರುವುದರಿಂದ ಸ್ಪರ್ಧೆ ಕಷ್ಟವಾಗುತ್ತದೆ’ ಎಂದು ಎಂಬಿಎ ವಿದ್ಯಾರ್ಥಿ ಫಯಾಜ್ ಅಹ್ಮದ್ ಹೇಳಿದ್ದಾರೆ. ಉದ್ಯೋಗಗಳು ಕ್ರಮೇಣ ಹೊರಗಿನವರ ಪಾಲಾಗುವುದರಿಂದ, ಜಮ್ಮು ಕಾಶ್ಮೀರ ನಿವಾಸಿಗಳು ದ್ವಿತೀಯ ದರ್ಜೆ ನಾಗರಿಕರಂತೆ ಬದುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ನೆಲೆಸಲು ಹಾಗೂ ಉದ್ಯೋಗ ಮಾಡಲು ಹೊರಗಿನವರಿಗೆ ನಿರ್ಬಂಧ ಇತ್ತು. ವಿಶೇಷಾಧಿಕಾರ ರದ್ದತಿ ಬಳಿಕ ಜಮ್ಮು ಕಾಶ್ಮೀರವು ಇಂತಹ ವಿಶೇಷ ಅವಕಾಶಗಳನ್ನು ಕಳೆದುಕೊಂಡಿದೆ. 

ಹೊರಗಿನವರಿಗೆ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಅವಕಾಶ ನೀಡಿರುವುದು ಎಲ್ಲಕ್ಕಿಂತ ಕಳವಳಕಾರಿ ಅಂಶ. ಜಮೀನು ಹಾಗೂ ಉದ್ಯೋಗ ಕಳೆದುಕೊಳ್ಳುವ ಸ್ಥಳೀಯರ ಆತಂಕ ಸರಿಯಲ್ಲ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಕಾಶ್ಮೀರಿಗಳನ್ನು ಭಾರತದ ಜತೆ ಬೆಸೆಯುವುದು ವಿಶೇಷಾಧಿಕಾರ ರದ್ದತಿಯ ಉದ್ದೇಶ ಎಂದು ಸರ್ಕಾರ ಪ್ರತಿಪಾದಿಸಿದೆ. 

5 ತಿಂಗಳಲ್ಲಿ ₹18 ಸಾವಿರ ಕೋಟಿ ನಷ್ಟ

ವಿಶೇಷಾಧಿಕಾರ ರದ್ದುಗೊಂಡ ಬಳಿಕ (ಆ.5) ಜಮ್ಮು ಮತ್ತು ಕಾಶ್ಮೀರವು ₹18 ಸಾವಿರ ಕೋಟಿ ನಷ್ಟ ಅನುಭವಿಸಿದೆ ಎಂದು ಕಾಶ್ಮೀರ ವಾಣಿಜ್ಯೋದ್ಯಮ ಸಂಘ (ಕೆಸಿಸಿಐ) ತಿಳಿಸಿದೆ. 

‘ಲಕ್ಷಾಂತರ ಉದ್ಯೋಗ ಕಡಿತಗೊಂಡಿವೆ. ಹಣಕಾಸು ಸಂಸ್ಥೆಗಳು ನಷ್ಟ ಅನುಭವಿಸಿವೆ. ಸಾಕಷ್ಟು ಸಂಸ್ಥೆಗಳು ಬಾಗಿಲು ಮುಚ್ಚಿವೆ’ ಎಂದು ಕೆಸಿಸಿಐ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ. 

‘ಇಂಟರ್‌ನೆಟ್ ಮೇಲೆ ನಿರ್ಬಂಧ ಹೇರಿರುವುದರಿಂದ ಇ–ಕಾಮರ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಭಾರಿ ಹಿನ್ನಡೆ ಅನುಭವಿಸಿವೆ. ಪತ್ರಕರ್ತರ ಕರ್ತವ್ಯದ ಮೇಲೆ ಅಂತರ್ಜಾಲ ಸ್ಥಗಿತ ಗಂಭೀರ ಪರಿಣಾಮ ಬೀರಿದೆ. ಉದ್ದಿಮೆದಾರರು ಆನ್‌ಲೈನ್‌ನಲ್ಲಿ ತೆರಿಗೆ ಲೆಕ್ಕಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ಸ್ಥಗಿತಗೊಂಡಿದೆ’ ಎಂದು ವರದಿ ಹೇಳಿದೆ. 

‘ಕುಶಲಕರ್ಮಿಗಳು, ನೇಕಾರರು ಕೆಲಸ ಕಳೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ₹2,520 ಕೋಟಿ ನಷ್ಟವಾಗಿದೆ. ವಾಹನಗಳನ್ನು ಕೊಳ್ಳುವವರೇ ಇಲ್ಲ. ಹೊಸ ವಾಹನಗಳ ಮೇಲೆ ತೆರಿಗೆ ಹೇರಿರುವುದರಿಂದ ವಾಹನ ಉದ್ಯಮದ ಮೇಲೆ ಕಾರ್ಮೋಡ ಕವಿದಿದೆ. ಸಂವಹನ ಇಲ್ಲದ ಕಾರಣ ವೈದ್ಯರು ಕಷ್ಟ ಅನುಭವಿಸಿದ್ದರೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ದಾರಿ ತಪ್ಪಿದೆ’ ಎಂದು ಉಲ್ಲೇಖಿಸಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು