ಭಾನುವಾರ, ಫೆಬ್ರವರಿ 23, 2020
19 °C
ತಾರತಮ್ಯದ ಪ್ರಶ್ನೆ | ಸಶಸ್ತ್ರ ಪಡೆಗಳಲ್ಲಿ ಸಮಾನತೆಯ ವಿಚಾರ

ಪುರುಷ ಸೈನಿಕರು ಮಹಿಳಾ ಅಧಿಕಾರಿಗಳನ್ನು ಒಪ್ಪಲಾರರು: ‘ಸುಪ್ರೀಂ’ಗೆ ರಕ್ಷಣಾ ಇಲಾಖೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Captain Tania Shergill

ನವದೆಹಲಿ: ‘ಆಳುವವರ ಇಚ್ಛಾಶಕ್ತಿ ಮತ್ತು ಮನಸ್ಥಿತಿಯಲ್ಲಿ ಪೂರಕ ಬದಲಾವಣೆಯಾದರೆ ಮಾತ್ರ ಮಹಿಳೆಯರಿಗೆ ಅವಕಾಶ ಸಮಾನ ಅವಕಾಶ ಸಿಗಲು ಸಾಧ್ಯ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿತು.

‘ಅರ್ಹತೆಗೆ ತಕ್ಕ ಹುದ್ದೆ ನೀಡಬೇಕು. ತಾರತಮ್ಯ ನಿವಾರಣೆಗೆ ಕ್ರಮವಹಿಸಬೇಕು’ ಎಂದು ವಿನಂತಿಸಿ, ಕೆಲ ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಅವರಿದ್ದ ನ್ಯಾಯಪೀಠವು, ‘ಕಾಲಕ್ಕೆ ತಕ್ಕಂತೆ (ಸೈನಿಕರ) ಮನಸ್ಥಿತಿ ಬದಲಿಸಿ, ಮಹಿಳೆಯರಿಗೆ ಅವಕಾಶಕೊಡಿ’ ಎಂದು ಸೂಚಿಸಿತು.

‘ದೈಹಿಕವಾಗಿ ಮಹಿಳೆಯರು ದುರ್ಬಲರು. ಹೀಗಾಗಿ ಅವರಿಗೆ ಮುಂಚೂಣಿ ತುಕಡಿಗಳ ನಾಯಕತ್ವ ನೀಡಲು ಅಸಾಧ್ಯ. ಪುರುಷ ಸೈನಿಕರು ಮಹಿಳಾ ನಾಯಕತ್ವವನ್ನು ಒಪ್ಪುವುದಿಲ್ಲ’ ಎಂದು ರಕ್ಷಣಾ ಇಲಾಖೆ ಪರ ವಕೀಲ ಆರ್.ಬಾಲಸುಬ್ರಹ್ಮಣ್ಯಂ ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸಂಘರ್ಷ ಹೊರತುಪಡಿಸಿಯೂ ಸೇನೆಯಲ್ಲಿ ನಾಯಕತ್ವ ಗುಣ ಹೊಂದಿರುವವರು ನಿರ್ವಹಿಸಬಹುದಾದ ಸಾಕಷ್ಟು ಕೆಲಸಗಳಿವೆಯಲ್ಲವೇ?’ ಎಂದು ಪ್ರಶ್ನಿಸಿತು.

ರಕ್ಷಣಾ ಇಲಾಖೆಯ ವಾದವನ್ನು ಸ್ವತಃ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿರಾಕರಿಸಿದರು.

‘ಪುರುಷರಿಗಿಂತ ಮಹಿಳೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಪುರುಷರು ಮಹಿಳೆಯರಿಂದ ಆದೇಶ ಸ್ವೀಕರಿಸುವುದಿಲ್ಲ ಎನ್ನುವ ವಾದವನ್ನು ನಾನು ಪುಷ್ಟೀಕರಿಸುವುದಿಲ್ಲ’ ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್‌ನಲ್ಲಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ತೀರ್ಪು ಕಾದಿರಿಸಿದ ನ್ಯಾಯಾಲಯ ಶುಕ್ರವಾರದ ಒಳಗೆ ಎಲ್ಲ ವಾದಿಗಳೂ ತಮ್ಮ ವಿಚಾರ ಸ್ಪಷ್ಟಪಡಿಸಬೇಕು ಎಂದು ಸೂಚಿಸಿತು. ವಾಯುಪಡೆ ಮತ್ತು ನೌಕಾಪಡೆಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಯಿತು.

ತಾರತಮ್ಯದ ಪ್ರಶ್ನೆ

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳಾ ಅರ್ಜಿದಾರರು, ‘ಆರಂಭದಿಂದಲೂ ತಾರತಮ್ಯ ಅನುಭವಿಸುತ್ತಿದ್ದೇವೆ. ತಾರತಮ್ಯದ ಕಾರಣದಿಂದಲೇ ನಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವುದು ಸಿಗುತ್ತಿಲ್ಲ’ ಎಂದು ಹೇಳಿದ್ದರು.

ರಕ್ಷಣಾ ಸಚಿವಾಲಯದ ಪರವಾಗಿ ವಾದ ಮಂಡಿಸಿದ ಆರ್.ಬಾಲಸುಬ್ರಹ್ಮಣ್ಯಂ, ‘ಸೇನೆಯ ನೇಮಕಾತಿ ಮತ್ತು ಬಡ್ತಿ ನಿಯಮಗಳಲ್ಲಿ ತಾರತಮ್ಯ ಉತ್ತೇಜಿಸುವ ಯಾವುದೇ ಅಂಶಗಳಿಲ್ಲ. ಮಹಿಳೆ ಮತ್ತು ಪುರುಷರಿಗೆ ಎಲ್ಲ ನಿಯಮಗಳೂ ಸಮಾನವಾಗಿ ಅನ್ವಯವಾಗುತ್ತವೆ’ ಎಂದು ಸ್ಪಷ್ಟಪಡಿಸಿದರು.

‘ಹುದ್ದೆಗಳಿಗೆ ನಿಯೋಜನೆ ವಿಚಾರದಲ್ಲಿ ಮಹಿಳೆ ಮತ್ತು ಪುರುಷರನ್ನು ಒಂದೇ ರೀತಿ ಪರಿಗಣಿಸಲು ಆಗುವುದಿಲ್ಲ. ಅವರಿಬ್ಬರ ದೇಹದಾರ್ಢ್ಯತೆ ಒಂದೇ ರೀತಿ ಇರುವುದಿಲ್ಲ. ಯುದ್ಧ ಮತ್ತು ಇತರ ಸಂಘರ್ಷ ಸಂದರ್ಭಗಳಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆಯ ವಿಚಾರವನ್ನು ಪ್ರತ್ಯೇಕವಾಗಿಯೇ ಯೋಚಿಸಬೇಕಾಗುತ್ತಿದೆ’ ಎಂದು ತಿಳಿಸಿದರು.

‘ಮಹಿಳೆಯರು ದುರ್ಬಲರು’

‘ಸೇನಾ ತುಕಡಿಗಳಲ್ಲಿ ಗ್ರಾಮೀಣ ಪ್ರದೇಶಗಳ ಹಿನ್ನೆಲೆ ಹೊಂದಿರುವ ಪುರುಷರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ. ಅವರು ಬೆಳೆದ ಸಾಮಾಜಿಕ ಕಟ್ಟುಪಾಡುಗಳಲ್ಲಿ ಮಹಿಳೆಯರನ್ನು ಕಮಾಂಡ್ ಅಧಿಕಾರಿಯಾಗಿ ಒಪ್ಪಿಕೊಳ್ಳುವ ಮನಸ್ಥಿತಿ ರೂಢಿಯಾಗಿರುವುದಿಲ್ಲ. ಹೀಗಾಗಿ ಸೈನಿಕರಿಗೆ ವಿಶೇಷ ಶಿಕ್ಷಣ ನೀಡಿ, ಮಾನಸಿಕವಾಗಿ ಅವರು ಸಿದ್ಧರಾದ ನಂತರವೇ ಮಹಿಳೆಯರನ್ನು ಕಮಾಂಡರ್ ಹುದ್ದೆಗಳಿಗೆ ನಿಯೋಜಿಸಬಹುದು’ ಎಂದು ರಕ್ಷಣಾ ಇಲಾಖೆಯ ವಕೀಲರು ಹೇಳಿದರು.

‘ದೈಹಿಕವಾಗಿ ಮಹಿಳೆಯರು ಪುರುಷರಿಗಿಂತ ದುರ್ಬಲರು. ಸಂಘರ್ಷ ಸಂದರ್ಭಗಳಲ್ಲಿ ಕಮಾಂಡ್ ಆಫೀಸರ್ ಆದವರು ಸೈನಿಕನೊಬ್ಬ ನಿರ್ವಹಿಸಬೇಕಾದ ಎಲ್ಲಾ ಕೆಲಸಗಳ ಜೊತೆಗೆ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಮಹಿಳೆಯರಿಗೆ ಇದು ಸಾಧ್ಯವಿಲ್ಲ’ ಎಂಬುದು ರಕ್ಷಣಾ ಇಲಾಖೆ ಪ್ರಸ್ತಾಪಿಸಿದ ಮತ್ತೊಂದು ಅಂಶ.

‘ಮಹಿಳೆಯರಿಗೆ ಕುಟುಂಬ ನಿರ್ವಹಣೆಯ ಒತ್ತಡ ಹೆಚ್ಚು. ಗರ್ಭಧಾರಣೆ, ಹೆರಿಗೆ, ಮಕ್ಕಳ ಪೋಷಣೆ, ಕುಟುಂಬ ನಿರ್ವಹಣೆಯ ಹೊಣೆಯನ್ನು ಅವರು ನಿಭಾಯಿಸಬೇಕು. ಇಂಥ ಸಂದರ್ಭ ತುಕಡಿಗಳಿಂದ ಬಹುಕಾಲ ದೂರ ಇರುವ ಸಂದರ್ಭ ಎದುರಾಗಬಹುದು. ಇದರಿಂದ ದೈನಂದಿನ ಕರ್ತವ್ಯ ನಿರ್ವಹಣೆಗೆ ತೊಡಕಾಗಬಹುದು’ ಎಂಬ ಆಂಶವನ್ನೂ ರಕ್ಷಣಾ ಇಲಾಖೆ ಪ್ರಸ್ತಾಪಿಸಿತು.

‘ಮಹಿಳಾ ಅಧಿಕಾರಿಯೊಬ್ಬರನ್ನು ಶತ್ರುಸೇನೆ ಯುದ್ಧ ಕೈದಿಯಾಗಿ ಬಂಧಿಸಿದರೆ ಅದು ಸಂಬಂಧಿಸಿದ ತುಕಡಿಗೆ, ಸೇನೆಗೆ ಮತ್ತು ಸರ್ಕಾರಕ್ಕೆ ದೊಡ್ಡ ಮಾನಸಿಕ ಹಿಂಸೆ. ಅದರ ಬದಲು ಸಂಘರ್ಷ ವಲಯಗಳಿಂದ ಮಹಿಳೆಯರನ್ನು ದೂರ ಇರಿಸುವುದು ಒಳ್ಳೆಯದು’ ಎಂದು ರಕ್ಷಣಾ ಇಲಾಖೆಯ ವಕೀಲರು ತಮ್ಮ ನಿಲುವು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು