ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಬಹುಮತವಿಲ್ಲದೆ ಸರ್ಕಾರ ರಚಿಸಿದ್ದ ಬಿಜೆಪಿ

ಕರ್ನಾಟಕ ಸನ್ನಿವೇಶವನ್ನೇ 2000 ರಲ್ಲಿ ಎದುರಿಸಿದ್ದ ಆರ್‌ಜೆಡಿ
Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಪಟ್ನಾ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಗಿರುವಂತಹುದೇ ಪರಿಸ್ಥಿತಿ 2000ನೇ ಇಸವಿಯಲ್ಲಿ ಬಿಹಾರದಲ್ಲಿ ಉಂಟಾಗಿತ್ತು. ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ 121 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮಿತ್ತು. ಆಗ ಆರ್‌ಜೆಡಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕಾಗಿ ನಿತೀಶ್‌ ಕುಮಾರ್‌ ನೇತೃತ್ವದ ಸಮತಾ ಪಕ್ಷಕ್ಕೆ ಬಿಜೆಪಿ ಬೆಂಬಲ ನೀಡಿತ್ತು.

ಆ ಚುನಾವಣೆಯಲ್ಲಿ ಸಮತಾ ಪಕ್ಷಕ್ಕೆ 34 ಸ್ಥಾನಗಳು ಮಾತ್ರ ಬಂದಿದ್ದವು. ಬಿಜೆಪಿ 67 ಸ್ಥಾನಗಳನ್ನು ಗೆದ್ದಿತ್ತು. ಬಿಹಾರ ವಿಧಾನಸಭೆಯ ಸದಸ್ಯ ಬಲ ಆಗ 324 ಇತ್ತು (2000ನೇ ನವೆಂಬರ್‌ನಲ್ಲಿ ಜಾರ್ಖಂಡ್‌ ಪ್ರತ್ಯೇಕ ರಾಜ್ಯವಾಗುವುದರೊಂದಿಗೆ ಬಿಹಾರ ವಿಧಾನಸಭೆಯ ಸಂಖ್ಯಾಬಲ 243ಕ್ಕೆ ಇಳಿದಿದೆ). ಸರ್ಕಾರ ರಚನೆಗೆ 162 ಸದಸ್ಯರ ಬೆಂಬಲ ಬೇಕಿತ್ತು.

ತಮಗೆ 146 ಶಾಸಕರ ಬೆಂಬಲ ಇದೆ ಎಂಬ ಪಟ್ಟಿಯನ್ನು ನಿತೀಶ್‌ ಅವರು ಆಗಿನ ರಾಜ್ಯಪಾಲ ವಿನೋದ್‌ ಚಂದ್ರ ಪಾಂಡೆ ಅವರಿಗೆ ನೀಡಿದ್ದರು. ಅವರು ನೀಡಿದ ಪಟ್ಟಿಯ ಪ್ರಕಾರವೇ ಬಹುಮತಕ್ಕೆ 16 ಶಾಸಕರ ಬೆಂಬಲದ ಕೊರತೆ ಇತ್ತು. 

ಅತ್ಯಂತ ದೊಡ್ಡ ಪಕ್ಷವಾಗಿದ್ದ ಆರ್‌ಜೆಡಿಯ ಬದಲಿಗೆ ಸಮತಾ ಪಕ್ಷವನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಪಾಂಡೆ ಅವರ ನೇಮಕ ಆಗಿತ್ತು.

ಸರ್ಕಾರ ರಚಿಸಲು ನಿತೀಶ್‌ ಅವರಿಗೆ ಅವಕಾಶ ಕೊಟ್ಟ ಪಾಂಡೆ, ಸದನದಲ್ಲಿ ಬಹುಮತ ಸಾಬೀತು ಮಾಡುವಂತೆ ಸೂಚಿಸಿದ್ದರು.

ತಮಗೆ 162 ಶಾಸಕರ ಬೆಂಬಲ ಇದೆ ಎಂದು ಆರ್‌ಜೆಡಿಯ ರಾಬ್ಡಿ ದೇವಿ ಹೇಳಿಕೊಂಡಿದ್ದರು. ಆರ್‌ಜೆಡಿಯ 121 ಶಾಸಕರ ಜತೆಗೆ, ಕಾಂಗ್ರೆಸ್‌ನ 23 ಸದಸ್ಯರ ಬೆಂಬಲ ಇದೆ. ಜತೆಗೆ ಸಿಪಿಎಂ, ಸಿಪಿಐ–ಎಂಎಲ್‌ ಹಾಗೂ ಇತರ ಸಣ್ಣ ಪಕ್ಷಗಳ ಬೆಂಬಲ ಇದೆ ಎಂದಿದ್ದರು.

ಒಂದು ವಾರ ನಡೆದ ರಾಜಕೀಯ ಹಗ್ಗಜಗ್ಗಾಟದ ಬಳಿಕ ವಿಶ್ವಾಸಮತ ಕೋರುವ ಮೊದಲೇ ನಿತೀಶ್‌, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿಶ್ವಾಸಮತ ಕೋರಿದ್ದರೂ ಅವರು ಗೆಲ್ಲುವ ಸಾಧ್ಯತೆ ಇರಲಿಲ್ಲ. ಬಳಿಕ 2000ನೇ ಮಾರ್ಚ್‌ 11ರಂದು ರಾಬ್ಡಿ ದೇವಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈಗಲೂ, ಬಿಹಾರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಆರ್‌ಜೆಡಿ ವಿರೋಧ ಪಕ್ಷದಲ್ಲಿ ಇದೆ. ಅದು 80 ಶಾಸಕರನ್ನು ಹೊಂದಿದೆ. 71 ಸ್ಥಾನಗಳನ್ನು ಹೊಂದಿರುವ ನಿತೀಶ್‌ ಅವರ ಜೆಡಿಯು ಮತ್ತು 53 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಅಧಿಕಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT