ಬುಧವಾರ, ಸೆಪ್ಟೆಂಬರ್ 18, 2019
23 °C

ಆಪದ್ಬಾಂಧವ, ಸುಧಾರಕ ಹಣಕಾಸು ಸಚಿವ ಅರುಣ್ ಜೇಟ್ಲಿ

Published:
Updated:

ಸರ್ಕಾರ, ವಿರೋಧ ಪಕ್ಷ, ಮಾಧ್ಯಮ ಮತ್ತು ನ್ಯಾಯಾಂಗ ವಲಯಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ವ್ಯಕ್ತಿ ಅರುಣ್‌ ಜೇಟ್ಲಿ. ಈ ನಾಲ್ಕು ವಲಯಗಳಲ್ಲಿಯೂ ಒಂದೊಂದು ಕಾಲದಲ್ಲಿ ಜೇಟ್ಲಿ ಸಕ್ರಿಯರಾಗಿದ್ದರು. ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಯಾವುದೇ ಸಂಕಷ್ಟ ಬಂದಾಗಲೂ ‘ಆಪದ್ಬಾಂಧವ’ ಜೇಟ್ಲಿಯೇ ಆಗಿದ್ದರು. ಜತೆಗೆ ಕ್ಲಿಷ್ಟಕರ ಸಂದರ್ಭದಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನು ಅವರು ಕುಶಲವಾಗಿ ನಿಭಾಯಿಸಿದ್ದರು. 

ಸುಮಾರು 67 ವರ್ಷಗಳ ಜೀವನದಲ್ಲಿ ಜೇಟ್ಲಿ ಅವರು ಎಲ್ಲಕ್ಕಿಂತ ಮುಖ್ಯವಾಗಿ ಯಶಸ್ವೀ ರಾಜಕಾರಣಿ. ಆದರೆ, ಒಂದೂ ಬಾರಿ ಅವರು ಲೋಕಸಭಾ ಚುನಾವಣೆ ಗೆದ್ದವರಲ್ಲ. ಚತುರ ವಕೀಲರಾಗಿದ್ದ ಅವರು ತಮ್ಮದೇ ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಪರವಾಗಿ ಮಾತ್ರವಲ್ಲದೆ, ಕಾಂಗ್ರೆಸ್‌ ಮತ್ತು ಜನತಾ ದಳದ ಮುಖಂಡರ ಪರವಾಗಿಯೂ ವಿವಿಧ ಪ್ರಕರಣಗಳಲ್ಲಿ ವಾದಿಸಿದ್ದರು. ವಿಚಾರವಾದಿ ಎಂದೂ ಗುರುತಿಸಿಕೊಂಡಿದ್ದ ಅವರು 1975ರಲ್ಲಿ ತುರ್ತುಸ್ಥಿತಿಯ ವಿರುದ್ಧ ನಡೆಸಿದ ಹೋರಾಟಕ್ಕೆ ಜೈಲು ಸೇರಿದ್ದರು. ಒಂದೂವರೆ ವರ್ಷ ಜೈಲಿನಲ್ಲಿದ್ದರು. ತಮ್ಮದೇ ರೀತಿಯಲ್ಲಿ ಅವರು ಸಮಾಜಸೇವೆಯಲ್ಲಿಯೂ ತೊಡಗಿಕೊಂಡಿದ್ದರು. ತಮ್ಮ ಪರವಾಗಿ ನ್ಯಾಯಾಲಯದಲ್ಲಿ ಉಚಿತವಾಗಿ ವಾದಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳುವ ಮಂದಿ ಹಲವರಿದ್ದಾರೆ. 

ಇದನ್ನೂ ಓದಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ

2014ರಿಂದ 2019ರವರೆಗೆ ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯು ಅವರ ಸುಧಾರಣಾ ಕೌಶಲದ ಜತೆಗೆ ನಿರ್ವಹಣಾ ಚಾತುರ್ಯವನ್ನು ಒರೆಗೆ ಹಚ್ಚಿತು. ಈ ಅವಧಿಯಲ್ಲಿಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂತು. ರಾಜಕೀಯ ಒಮ್ಮತ ಸಾಧ್ಯವಾಗದ ಕಾರಣಕ್ಕೆ ಸುಮಾರು ಒಂದು ದಶಕದಿಂದ ನನೆಗುದಿಗೆ ಬಿದ್ದಿದ್ದ ಸುಧಾರಣೆಯು ಸಾಕಾರವಾಯಿತು. ವಿರೋಧ ಪಕ್ಷಗಳ ಆಳ್ವಿಕೆಯಿದ್ದ ರಾಜ್ಯಗಳು ಕೂಡ ಜಿಎಸ್‌ಟಿ ಜಾರಿಗೆ ಒಪ್ಪಲು ಜೇಟ್ಲಿ ಅವರ ಸಂಧಾನ ಕೌಶಲವೇ ಕಾರಣ ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. 

ಅದಕ್ಕೂ ಮೊದಲು ನೋಟು ರದ್ದತಿ ನಿರ್ಧಾರ ಕೈಗೊಳ್ಳಲಾಗಿತ್ತು. ಮೋದಿ ನೇತೃತ್ವದ ಸರ್ಕಾರದ ಅತ್ಯಂತ ಟೀಕೆಗೆ ಒಳಗಾದ ನಿರ್ಧಾರ ಇದು. ಈ ಟೀಕೆಗಳನ್ನು ಕೆಚ್ಚಿನಿಂದ ಎದುರಿಸಿದವರು ಜೇಟ್ಲಿ. ಜತೆಗೆ, ನೋಟು ರದ್ದತಿಯ ಬಳಿಕ ಹೆಚ್ಚು ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರಲು ಹಾಗೂ ನಗದು ಹರಿವು ಕಡಿತಗೊಳಿಸಿ ಡಿಜಿಟಲ್‌ ಅರ್ಥ ವ್ಯವಸ್ಥೆ ರೂಪಿಸುವುದಕ್ಕಾಗಿ ಹಗಲಿರುಳು ದುಡಿದರು. 

2016ರ ನವೆಂಬರ್‌ 8ರಂದು ನೋಟು ರದ್ದತಿ ನಿರ್ಧಾರ ಘೋಷಣೆಯಾದ ಬಳಿಕ ವಿರೋಧ ಪಕ್ಷಗಳು, ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರು ಮತ್ತು ಉದ್ಯಮ ನಾಯಕರು ಮೋದಿ ಅವರ ವಿರುದ್ಧ ಭಾರಿ ಟೀಕಾಪ್ರಹಾರ ನಡೆಸಿದರು. ನೋಟು ರದ್ದತಿಯ ನಿರ್ಧಾರ ಘೋಷಣೆಗೆ ಮೊದಲು ಈ ಮಾಹಿತಿ ಜೇಟ್ಲಿ ಅವರಿಗೂ ಇರಲಿಲ್ಲ ಎಂಬ ವರದಿಗಳು ಪ್ರಕಟವಾದವು. ಎಲ್ಲ ರೀತಿಯ ಟೀಕೆಗಳಿಗೂ ಜೇಟ್ಲಿ ಅವರೇ ಉತ್ತರ ಕೊಟ್ಟರು.  

ಇದನ್ನೂ ಓದಿ: ಕರ್ನಾಟಕದೊಂದಿಗೆ ಜೇಟ್ಲಿ ನಂಟು 

ನೋಟು ರದ್ದತಿಯ ನಿರ್ಧಾರವು ಜೇಟ್ಲಿ ಅವರಿಗೆ ಗೊತ್ತಾಗಿದ್ದು ಕೊನೆಯ ಹಂತದಲ್ಲಿ ಎಂದು ಜೆಡಿಯು ನಾಯಕರಾಗಿದ್ದ ಶರದ್‌ ಯಾದವ್‌ ಅವರು ರಾಜ್ಯಸಭೆಯಲ್ಲಿ ಹೇಳಿದ್ದರು. ಇದಕ್ಕೆ ಜೇಟ್ಲಿಯವರು ಆಕ್ಷೇಪವನ್ನೇನೂ ವ್ಯಕ್ತಪಡಿಸಿರಲಿಲ್ಲ. ‘ಈ ನಿರ್ಧಾರ ನಿಮಗೆ ಮೊದಲೇ ಗೊತ್ತಾಗಿದ್ದರೆ ಅದನ್ನು ನೀವು ತಡೆಯುತ್ತಿದ್ದಿರಿ’ ಎಂದು ಯಾದವ್‌ ಹೇಳಿದ್ದರು. ಮುಗುಳು ನಗೆಯೇ ಇದಕ್ಕೆ ಜೇಟ್ಲಿ ಅವರ ಪ್ರತಿಕ್ರಿಯೆಯಾಗಿತ್ತು.

ಹಲವಾರು ಆರ್ಥಿಕ ಸುಧಾರಣೆಗಳನ್ನು ಕೈಗೊಂಡ ಹೆಗ್ಗಳಿಕೆಯೂ ಅವರಿಗೆ ಇದೆ. ಕೈಮೀರಿ ಹೋಗಿದ್ದ ಹಣದುಬ್ಬರ ನಿಯಂತ್ರಣ ಅವರಿಗೆ ಸಾಧ್ಯವಾಗಿತ್ತು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎರಡಂಕಿ ಪ್ರಮಾಣಕ್ಕೇರಿದ್ದ ಹಣದುಬ್ಬರವನ್ನು ಶೇ 3ಕ್ಕೆ ಅವರು ನಿಯಂತ್ರಿಸಿದ್ದರು. ಆರ್ಥಿಕ ಶಿಸ್ತು ಸರ್ಕಾರದ ಕಾರ್ಯನಿರ್ವಹಣೆಯ ಹೆಗ್ಗುರುತಾಗುವಂತೆ ಅವರು ನೋಡಿಕೊಂಡಿದ್ದರು. ಹಾಗಿದ್ದಾಗಲೂ ಉತ್ಪಾದಕ ವಲಯಗಳಿಗೆ ಕೊರತೆಯಾಗದಂತೆ ಎಚ್ಚರ ವಹಿಸಿದ್ದರು.

ಬ್ಯಾಂಕುಗಳಿಗೆ ದೊಡ್ಡ ಹೊರೆಯಾಗಿದ್ದ ವಸೂಲಾಗದ ಸಾಲದ ಪ್ರಮಾಣವನ್ನು ಇಳಿಸುವ ಪ್ರಯತ್ನವೂ ಜೇಟ್ಲಿ ಅವರ ಅವಧಿಯಲ್ಲಿಯೇ ಆರಂಭವಾಯಿತು. 

ಭಾರತದ ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ಇರಬೇಕು ಎಂಬ ಉದ್ದೇಶದ ಜನಧನ ಯೋಜನೆ, ಆಧಾರ್‌ ಆಧಾರಿತ ನಗದು ವರ್ಗಾವಣೆಯಂತಹ ಯೋಜನೆಗಳೂ ಅವರ ಅವಧಿಯಲ್ಲಿ ಜಾರಿಯಾದವು.  

ಅರ್ಥ ವ್ಯವಸ್ಥೆಯಲ್ಲಿ ತಂದ ಸುಧಾರಣಾ ಕ್ರಮಗಳಿಂದಾಗಿ 2016ರ ಹೊತ್ತಿಗೆ ಆರ್ಥಿಕ ಪ್ರಗತಿ ಹೊಳಪು ಕಳೆದುಕೊಂಡಿತ್ತು. ಜೇಟ್ಲಿ ವಿರುದ್ಧ ಟೀಕೆಗಳ ಮಳೆ ಸುರಿಯಿತು. ಜೇಟ್ಲಿ ಅವರ ಬದಲಿಗೆ ಪೀಯೂಷ್‌ ಗೋಯಲ್‌ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಲಾಗುವುದು ಎಂಬ ವದಂತಿಯೂ ವ್ಯಾಪಕವಾಗಿತ್ತು. ಜೇಟ್ಲಿ ಅವರು ಅಧ್ಯಕ್ಷರಾಗಿದ್ದಾಗ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಹಣಕಾಸು ನಿರ್ವಹಣೆಯಲ್ಲಿ ಅವ್ಯವಹಾರವಾಗಿದೆ ಎಂಬುದೂ ಜೇಟ್ಲಿ ಅವರ ವರ್ಚಸ್ಸು ಮಂಕಾಗಲು ಕಾರಣವಾಗಿತ್ತು. 

ಅರ್ಥ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಕಷ್ಟಕರ ಕೆಲಸಕ್ಕೆ ಬೇರೆಯವರನ್ನು ಮೋದಿ ನೇಮಿಸುತ್ತಾರೆಯೇ ಎಂಬ ಪ್ರಶ್ನೆಯೂ ಆಗ ಹರಿದಾಡಿತ್ತು. ಮೋದಿ ದೆಹಲಿಗೆ ಹೊಸಬರಾಗಿದ್ದರು. ಎರಡು ವರ್ಷದ ಹಿಂದಷ್ಟೇ ಅವರು ದೆಹಲಿಗೆ ಹೋಗಿದ್ದರು. ದೆಹಲಿಯಲ್ಲಿ ಗಟ್ಟಿಯಾಗಿ ಬೇರುಬಿಟ್ಟ ಮಾರ್ಗದರ್ಶಕರೊಬ್ಬರು ಮೋದಿಗೆ ಬೇಕಿತ್ತು. ಜೇಟ್ಲಿ ಅದಕ್ಕೆ ತಕ್ಕವರಾಗಿದ್ದರು. 2002ರ ಗುಜರಾತ್‌ ಗಲಭೆಗಳ ಕಾಲದಿಂದಲೂ ಮೋದಿಗೆ ನಂಬಿಕಸ್ಥರಾಗಿದ್ದರು. 

‍ಇದನ್ನೂ ಓದಿ: ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

ಜೇಟ್ಲಿಯನ್ನು ಬದಲಿಸಬೇಕು ಎಂಬ ಕೂಗು ಮತ್ತೆ ಮತ್ತೆ ಕೇಳಿ ಬಂದಿತ್ತು. ಆದರೆ, ಅವರಾಗಿಯೇ ಅಧಿಕಾರ ರಾಜಕಾರಣದಿಂದ ಹೊರನಡೆಯುವವರೆಗೆ ಇದು ಕಾರ್ಯರೂಪಕ್ಕೆ ಬರಲಿಲ್ಲ. 

ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ, ಅದಕ್ಕೆ ತಮ್ಮ ಆರೋಗ್ಯ ಅವಕಾಶ ಕೊಡುವುದಿಲ್ಲ ಎಂದು ಜೇಟ್ಲಿ ಹಿಂದೆ ಸರಿದರು.  ಮೇ 29ರ ಪ್ರಮಾಣವಚನದ ಮುನ್ನಾ ದಿನ ಈ ಮಾತನ್ನು ಜೇಟ್ಲಿ ಹೇಳಿದ್ದರು. ತಕ್ಷಣವೇ ಮೋದಿ ಅವರು ಜೇಟ್ಲಿ ನಿವಾಸಕ್ಕೆ ಧಾವಿಸಿದ್ದರು. ನಿರ್ಧಾರ ಮರುಪರಿಶೀಲಿಸುವಂತೆ ಮನವೊಲಿಸುವುದಕ್ಕಾಗಿಯೇ ಮೋದಿ ಹೋಗಿದ್ದಾರೆ ಎಂಬ ಮಾತು ಆಗ ಕೇಳಿಬಂದಿತ್ತು. 

ರಕ್ಷಣಾ ಖಾತೆಯನ್ನೂ ಏಕಕಾಲದಲ್ಲಿ ಹೊಂದಿದ್ದ ಏಕೈಕ ಹಣಕಾಸು ಸಚಿವ ಜೇಟ್ಲಿ. ನಿರ್ಮಲಾ ಸೀತಾರಾಮನ್‌ ಅವರನ್ನು ರಕ್ಷಣಾ ಸಚಿವೆಯಾಗಿ ನೇಮಿಸುವವರೆಗೆ ಈ ಖಾತೆ ಜೇಟ್ಲಿ ಬಳಿಯಲ್ಲಿಯೇ ಇತ್ತು. ಮೋದಿ–ಜೇಟ್ಲಿ ನಡುವಣ ನಂಬಿಕೆ ಅಷ್ಟೊಂದು ಗಾಢವಾದುದಾಗಿತ್ತು. 

Post Comments (+)