ಭಾನುವಾರ ಗಂಗೆಯಲ್ಲಿ ಅಟಲ್‌ ಅಸ್ಥಿ ವಿಸರ್ಜನೆ

7
ರಾಜ್ಯದ ಎಂಟು ನದಿಗಳು ಸೇರಿ ದೇಶದ 100 ಪವಿತ್ರ ನದಿಗಳಲ್ಲಿ ಅಸ್ಥಿ ವಿಸರ್ಜನೆ ನಿರ್ಧಾರ

ಭಾನುವಾರ ಗಂಗೆಯಲ್ಲಿ ಅಟಲ್‌ ಅಸ್ಥಿ ವಿಸರ್ಜನೆ

Published:
Updated:

ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಭಾನುವಾರ ಉತ್ತರಾಖಂಡದ ಪವಿತ್ರ ನದಿ ಗಂಗೆಯಲ್ಲಿ ವಿಸರ್ಜಿಸಲಾಗುತ್ತಿದೆ. ಅಲ್ಲದೆ, ಚಿತಾಭಸ್ಮವನ್ನು ಮುಂದಿನ ದಿನಗಳಲ್ಲಿ ದೇಶದ 100 ಪವಿತ್ರ ನದಿಗಳಿಗೂ ಬಿಡಲು ತೀರ್ಮಾನಿಸಲಾಗಿದೆ.

ಕರ್ನಾಟಕದ ವೃಷಭಾವತಿ (ಬೆಂಗಳೂರು), ನೇತ್ರಾವತಿ ಮತ್ತು ಗುರುಪುರ (ಮಂಗಳೂರು), ತುಂಗಾ (ಶಿವಮೊಗ್ಗ), ಭದ್ರಾ (ಭದ್ರಾವತಿ), ತುಂಗಾಭದ್ರಾ (ಹೊಸಪೇಟೆ), ಕಾಳಿ (ಕಾರವಾರ) ಹಾಗೂ ಘಟಪ್ರಭಾ (ಬಾಗಲಕೋಟೆ) ನದಿಗಳಿಗೂ ಅಟಲ್‌ ಅವರ ಅಸ್ತಿ ಬಿಡಲು ನಿರ್ಧರಿಸಲಾಗಿದೆ.

ಭಾನುವಾರ ಮಧ್ಯಾಹ್ನ ಹರಿದ್ವಾರದಲ್ಲಿ ನಡೆಯುವ ಅಸ್ತಿ ವಿಸರ್ಜನೆಯಲ್ಲಿ ವಾಜಪೇಯಿ ಕುಟುಂಬದ ಸದಸ್ಯರು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್‌, ತ್ರಿವೇಂದ್ರ ಸಿಂಗ್‌ ರಾವತ್‌ ಪಾಲ್ಗೊಳ್ಳಲಿದ್ದಾರೆ. ನಂತರ ಹೃಷಿಕೇಶ (ಗಂಗಾ) ಮತ್ತು ಬದಿನಾಥದಲ್ಲೂ (ಅಲಕಾನಂದ ನದಿ) ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ.

ವಾಜಪೇಯಿ ಅವರ ಸ್ಮರಣಾರ್ಥ ಬಿಜೆಪಿ ಮುಂದಿನ ವಾರದಲ್ಲಿ ಹಲವು ಸರಣಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದೆ. ದೆಹಲಿಯಲ್ಲಿ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಪ್ರಾರ್ಥನಾ ಸಭೆ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಭೂಪೇಂದರ್‌ ಯಾದವ್‌ ಮಾಹಿತಿ ನೀಡಿದರು.

ವಾಜಪೇಯಿ ಅವರು ಲಖನೌ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಗಸ್ಟ್‌ 23ರಂದು ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಗೋಮತಿ ನದಿಯಲ್ಲೂ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಅಲ್ಲದೆ, ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ, ಪಕ್ಷದ ಜಿಲ್ಲಾ ಕಚೇರಿ ಹಾಗೂ ಪಂಚಾಯಿತಿ ಕಚೇರಿಗಳಲ್ಲೂ ಪ್ರಾರ್ಥನಾ ಸಭೆ ನಡೆಸಲು ಪಕ್ಷ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

**

ವಾಜಪೇಯಿ ಅವರನ್ನು ಟೀಕಿಸಿದ್ದ ಪ್ರಾಧ್ಯಾಪಕರ ಮೇಲೆ ಹಲ್ಲೆ

ಮೋತಿಹಾರಿ (ಬಿಹಾರ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಟೀಕಿಸಿದ್ದ ಬರಹವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಮಹಾತ್ಮಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಂಜಯ್‌ ಕುಮಾರ್‌ ಅವರನ್ನು ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದೆ.

ತೀವ್ರ ಗಾಯಗೊಂಡಿರುವ ಅವರು ಪಟ್ನಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಜಯ್‌ ಕುಮಾರ್‌ ಅವರನ್ನು ಅವರ ಮನೆಯಿಂದ ಹೊರಗೆಳೆದುಕೊಂಡು ಬಂದ ಯುವಕರ ಗುಂಪು, ನಡು ರಸ್ತೆಯಲ್ಲಿ ನಿಲ್ಲಿಸಿ ಬಟ್ಟೆ ಕಳಚಿ ದಾಳಿ ನಡೆಸಿದೆ. ದಾಳಿಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪೂರ್ವ ಚಂಪಾರಣ್‌ನ ಪೊಲೀಸ್‌ ವರಿಷ್ಠಾಧಿಕಾರಿ ಉಪೇಂದ್ರ ಕುಮಾರ್‌ ಶರ್ಮಾ, ‘ಟೀಕಾತ್ಮಕ ಬರಹ ಹಂಚಿಕೊಂಡಿದ್ದಕ್ಕೇ ಹಲ್ಲೆ ನಡೆಸಲಾಗಿದೆ ಎಂದು ದೂರುದಾರರು ಶಂಕೆ ವ್ಯಕ್ತಪಡಿಸಿಲ್ಲ. ‘ಕ್ಯಾಂಪಸ್‌ ವಿರೋಧಿಗಳ’ ಕೈವಾಡವಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆಯ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅವರು ತಿಳಿಸಿದ್ದಾರೆ.

**

ಕಾರ್ಪೊರೇಟರ್‌ ಮೇಲೆ ಹಲ್ಲೆ; ಬಂಧನ

ಔರಂಗಾಬಾದ್‌ (ಮಹಾರಾಷ್ಟ್ರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯ ವಿರೋಧಿಸಿದ್ದ ಮಹಾನಗರ ಪಾಲಿಕೆಯ ಆಲ್‌ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮುಸ್ಲಿಮೀನ್ (ಎಐಎಂಐಎಂ) ಕಾರ್ಪೊರೇಟರ್‌ ಸೈಯದ್‌ ಮತೀನ್‌ ರಶೀದ್‌ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಔರಂಗಾಬಾದ್‌ ಮಹಾನಗರ ಪಾಲಿಕೆಯ ಭದ್ರತಾ ಅಧಿಕಾರಿ ನೀಡಿದ ದೂರು ಆಧರಿಸಿ, ದ್ವೇಷ ಮತ್ತು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ..

ಶುಕ್ರವಾರ ಪಾಲಿಕೆಯಲ್ಲಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಸಭೆ ಕರೆಯಲಾಗಿತ್ತು. ಬಿಜೆಪಿ ಕಾರ್ಪೊರೇಟರ್‌ ರಾಜು ವೈದ್ಯ ಸಂತಾಪ ಸೂಚನಾ ನಿಲುವಳಿ ಮಂಡಿಸಿದರು. ಆದರೆ, ಇದಕ್ಕೆ ಎಐಎಂಐಎಂ ಕಾರ್ಪೊರೇಟರ್‌ಗಳು ವಿರೋಧ ವ್ಯಕ್ತಪಡಿಸಿದರು. ಇದರಿಂದ ಎರಡೂ ಪಕ್ಷಗಳ ಕಾರ್ಪೊರೇಟರ್‌ಗಳ ನಡುವೆ ಜಟಾಪಟಿ ನಡೆದು, ಕೈಕೈ ಮಿಲಾಯಿಸಿದ್ದಾರೆ.

ರಶೀದ್ ಅವರಿಗೆ ಬಿಜೆಪಿ ಕಾರ್ಪೊರೇಟರ್‌ಗಳು ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ರಶೀದ್‌ ನೀಡಿದ ದೂರು ಆಧರಿಸಿ, ಉಪ ಮೇಯರ್‌ ವಿಜಯ್ ಸಾಯಿನಾಥ್ ಆಟಡೆ ಸೇರಿ ಐವರು ಬಿಜೆಪಿ ಕಾರ್ಪೊರೇಟರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಆಡಳಿತವಿದ್ದು, ರಶೀದ್‌ ಸದಸ್ಯತ್ವ ರದ್ದುಪಡಿಸುವ ನಿರ್ಣಯವನ್ನು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !