ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಚುನಾವಣೆ: ಮಹಾರಾಷ್ಟ್ರ, ಹರಿಯಾಣದಲ್ಲಿ ರೂಪುಗೊಂಡಿದೆ ಕಾರ್ಯತಂತ್ರ

Last Updated 21 ಸೆಪ್ಟೆಂಬರ್ 2019, 8:46 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಸುವುದಾಗಿ ಆಯೋಗ ಘೋಷಿಸಿದ ಬೆನ್ನಿಗೇ ಎರಡೂ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಹರಿಯಾಣದಲ್ಲಿ ಪೌರತ್ವ ಚರ್ಚೆ

ಹರಿಯಾಣದಲ್ಲಿ ಬಿಜೆಪಿ ಈವರೆಗೆ ಏಳು ರ್‍ಯಾಲಿಗಳನ್ನು ನಡೆಸಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿಲ್ಲ ಎನ್ನುವುದೇ ಬಿಜೆಪಿಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಅಸ್ಸಾಂನಂತೆ ಹರಿಯಾಣದಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ (National Register of Citizens – NRC) ಮೂಲಕ ಅಕ್ರಮ ವಲಸಿಗರನ್ನು ಹೊರಹಾಕುವ ವಿಚಾರದ ಚರ್ಚೆಯೂ ಅಲ್ಲೀಗ ಗರಿಗೆದರಿದೆ.

ಹಿಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಇದೀಗ ತನ್ನ ಸಂಘಟನೆ ಬಲಪಡಿಸಿಕೊಳ್ಳುವ ಮೂಲಕ ಬಿಜೆಪಿಯನ್ನು ಎದುರಿಸಲು ಸಜ್ಜಾಗುತ್ತಿದೆ.

2014ರಲ್ಲಿ ನಡೆದಿದ್ದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಮತ್ತು ಕಾಂಗ್ರೆಸ್ 15 ಸ್ಥಾನಗಳಲ್ಲಿ ಪಡೆದುಕೊಂಡಿದ್ದವು. ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) 19 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಇತರ ಸ್ಥಾನಗಳು ಪಕ್ಷೇತರರು ಮತ್ತು ಸ್ಥಳೀಯ ರಾಜಕೀಯ ಪಕ್ಷಗಳ ಪಾಲಾಗಿದ್ದವು.

ಮನೋಹರ್ ಲಾಲ್ ಖಟ್ಟರ್ 2014ರಲ್ಲಿ ಹರಿಯಾಣ ಮತದಾರರಿಗೆ ಹೊಸಮುಖ. ಆದರೂ ಬಿಜೆಪಿ ಪ್ರಚಂಡ ವಿಜಯ ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಳಜಗಳದ ಲಾಭ ಬಿಜೆಪಿಗೆ ಸಂಪೂರ್ಣವಾಗಿ ಲಾಭ ತಂದುಕೊಟ್ಟಿತು. ಪ್ರಾದೇಶಿಕ ಪಕ್ಷ ಐಎನ್‌ಎಲ್‌ಡಿಗೆ ಕುಟುಂಬ ರಾಜಕಾರಣದ ಒಳಸುಳಿಗಳು ಮುನ್ನಡೆಗೆ ತೊಡಕಾಗಿವೆ.

ಮಹಾರಾಷ್ಟ್ರದಲ್ಲಿ ಯಾರು?

288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಇದೀಗ ಸ್ಥಾನ ಹಂಚಿಕೆ ಚರ್ಚೆಯ ಅಂತಿಮ ಹಂತ ಮುಟ್ಟಿವೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಈಚೆಗೆ ರ್‍ಯಾಲಿಗಳನ್ನು ನಡೆಸಿದ್ದರು.

2014ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನಾ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಬಿಜೆಪಿ 122, ಶಿವಸೇನಾ 63 ಸ್ಥಾನಗಳಲ್ಲಿ ಜಯಗಳಿಸಿತ್ತು. ಮಹಾರಾಷ್ಟ್ರದ ಇನ್ನೆರೆಡು ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ (ನ್ಯಾಶನಲ್ ಕಾಂಗ್ರೆಸ್ ಪಾರ್ಟಿ) ಸಹ ಕಳೆದ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 42 ಮತ್ತು ಎನ್‌ಸಿಪಿ 41 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT