ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಾನಾ ರಕ್ಷಣೆಗೆ ನಿಂತ ಡೊಭಾಲ್‌: ಆರೋಪ

Last Updated 20 ನವೆಂಬರ್ 2018, 6:25 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧದ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹಸ್ತಕ್ಷೇಪ ಮಾಡಿರುವ ಬಗ್ಗೆ ಡಿಐಜಿ ಮನೀಶ್‌ ಕುಮಾರ್‌ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದನ್ನು ಪ್ರಶ್ನಿಸಿ ‌ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಮೊದಲಿಗೆ ಅರ್ಜಿ ಸಲ್ಲಿಸಿದ್ದರು. ನಂತರ, ಈ ಪ್ರಕರಣಕ್ಕೆ ಸಂಬಂಧಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ಪೈಕಿ ಸಿನ್ಹಾ ಅವರ ಅರ್ಜಿ ತೀರಾ ಇತ್ತೀಚಿನದು.

ಸಿನ್ಹಾ ಅವರು ವರ್ಮಾ ಅವರ ಆಪ್ತ ಎಂದು ಹೇಳಲಾಗುತ್ತಿದೆ. ವರ್ಮಾ ಅವರನ್ನು ರಜೆಯಲ್ಲಿ ಕಳುಹಿಸಿದ ಬಳಿಕ ನಾಗೇಶ್ವರ ರಾವ್‌ ಅವರನ್ನು ಮಧ್ಯಂತರ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ರಾವ್‌ ಅವರು ಸಿನ್ಹಾ ಅವರನ್ನು ನಾಗಪುರಕ್ಕೆ ವರ್ಗಾಯಿಸಿದ್ದಾರೆ.

ಅಸ್ತಾನಾ ವಿರುದ್ಧದ ಪ್ರಕರಣದಲ್ಲಿ ಬಂಧನದಲ್ಲಿರುವ ದಲ್ಲಾಳಿ ಮನೋಜ್‌ ಪ್ರಸಾದ್‌ ಅವರ ವಿಚಾರಣೆಯಿಂದ ತಿಳಿದು ಬಂದ ಅಂಶಗಳ ಆಧಾರದಲ್ಲಿ ಡೊಭಾಲ್‌ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ.

ಅಸ್ತಾನಾ ವಿರುದ್ಧ ಎಫ್‌ಐಆರ್‌ ದಾಖಲಿಸುವ ಬಗ್ಗೆವರ್ಮಾ ಅವರು ಡೊಭಾಲ್‌ ಅವರಿಗೆ ಅಕ್ಟೋಬರ್‌ 17ರಂದು ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಡೊಭಾಲ್‌ ಅವರು ಅಸ್ತಾನಾಗೆ ತಿಳಿಸಿದ್ದಾರೆ. ಹಾಗಾಗಿಯೇ ಅಸ್ತಾನಾ ಅವರು ಬಂಧನದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು. ಕೆಲವು ಕಡೆ ಶೋಧ ನಡೆಸುವುದಕ್ಕೆ ತನಿಖಾ ತಂಡವು ವರ್ಮಾ ಅವರ ಅನುಮತಿ ಕೇಳಿತ್ತು.

ಆದರೆ, ಶೋಧಕ್ಕೆ ಡೊಭಾಲ್‌ ಅವರಿಂದ ಒಪ್ಪಿಗೆ ಸಿಗುತ್ತಿಲ್ಲ ಎಂದು ವರ್ಮಾ ಹೇಳಿದ್ದರು. ಬಂಧನದಲ್ಲಿರುವ ಸಿಬಿಐ ಡಿವೈಎಸ್‌ಪಿ ದೇವೇಂದರ್‌ ಕುಮಾರ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾಗ ಶೋಧ ನಿಲ್ಲಿಸುವಂತೆ ವರ್ಮಾ ಸೂಚಿಸಿದ್ದರು ಎಂದೂ ಸಿನ್ಹಾ ಆರೋಪಿಸಿದ್ದಾರೆ. ಶೋಧ ನಿಲ್ಲಿಸಲು ಕಾರಣವೇನು ಎಂದು ಕೇಳಿದ್ದಕ್ಕೆ ವರ್ಮಾ ಅವರು, ‘ಇದು ಡೊಭಾಲ್‌ ಸೂಚನೆ’ ಎಂದು ತಿಳಿಸಿದ್ದರು ಎಂದಿದ್ದಾರೆ.

ಇಂಟರ್‌ಪೋಲ್‌ನ ಒಂದು ಹುದ್ದೆಗೆ ಭಾರತವು ಉಮೇದುವಾರಿಕೆ ಕೈಬಿಡಲು ಡೊಭಾಲ್‌ ಅವರು ಕಾರಣ ಎಂದು ಪ್ರಸಾದ್‌ ಹೇಳಿದ್ದಾರೆ. ವರ್ಮಾ ಅವರ ಆಪ್ತ, ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರು ಈ ಹುದ್ದೆಯ ಆಕಾಂಕ್ಷಿಯಾಗಿದ್ದರು.

ಕೇಂದ್ರ ಕಲ್ಲಿದ್ದಲು ಖಾತೆಯ ರಾಜ್ಯ ಸಚಿವ ಹರಿಭಾಯಿಪಾರ್ಥಿಭಾಯಿ ಚೌಧರಿ ಅವರು ಜೂನ್‌ನಲ್ಲಿ ಕೆಲವು ಕೋಟಿ ರೂಪಾಯಿಯಷ್ಟು ಲಂಚ ಪಡೆದುಕೊಂಡಿದ್ದಾರೆ. ಅಹ್ಮದಾಬಾದ್‌ನ ವಿಪುಲ್‌ ಎಂಬವರ ಮೂಲಕ ಈ ಹಣ ನೀಡಲಾಗಿದೆ ಎಂದು ಹೈದರಾಬಾದ್‌ನ ಉದ್ಯಮಿ ಸತೀಶ್‌ ಸನ ಹೇಳಿದ್ದಾರೆ. ಸನ ದೂರಿನ ಆಧಾರದಲ್ಲಿಯೇ ಅಸ್ತಾನಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಚಿವರಿಗೆ ಹಣ ಕೊಟ್ಟಿರುವುದಷ್ಟೇ ತಮಗೆ ಗೊತ್ತಿದೆ. ಇದರ ಯಾವುದಾದರೂ ಭಾಗ ಸಿಬಿಐನ ಹಿರಿಯ ಅಧಿಕಾರಿಗಳಿಗೆ ಹೋಗಿದೆಯೇ ಎಂಬುದು ಗೊತ್ತಿಲ್ಲ ಎಂದು ಸಿನ್ಹಾ ತಿಳಿಸಿದ್ದಾರೆ.

ಪ್ರತಿಕ್ರಿಯೆ ಸಲ್ಲಿಸಿದ ಅಲೋಕ್‌ ವರ್ಮಾ

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ನಡೆಸಿದ ತನಿಖಾ ವರದಿಗೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಎಲ್ಲ ಆರೋಪಗಳಿಂದ ವರ್ಮಾ ಅವರನ್ನು ಸಿವಿಸಿ ಮುಕ್ತಗೊಳಿಸಿಲ್ಲ.

ಮುಚ್ಚಿದ ಲಕೋಟೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಲು ವರ್ಮಾ ಅವರು ಸೋಮವಾರ ಸಂಜೆ ನಾಲ್ಕು ಗಂಟೆ ವರೆಗೆ ಸಮಯ ಕೇಳಿದ್ದರು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಸೂಚಿಸಿದರು.

ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ವರ್ಮಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರವೇ ನಡೆಯಲಿದೆ.

ದೊಡ್ಡವರ ಮೇಲೆಯೇ ಆಪಾದನೆಯೇ?

ಮೊಯಿನ್‌ ಖುರೇಷಿ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಜಾಗೃತಿ ಆಯುಕ್ತ ಕೆ.ವಿ. ಚೌಧರಿ ಅವರು ಒಂದು ಬಾರಿ ಸನ ಮತ್ತು ಗೋರಂಟ್ಲ ರಮೇಶ್‌ (ಚೌಧರಿ ಅವರ ಸಂಬಂಧಿ ಎನ್ನಲಾಗಿದೆ) ಅವರನ್ನು ಭೇಟಿಯಾಗಿದ್ದರು. ಆಗ, ಅಸ್ತಾನಾ ಅವರ ಮನೆಗೆ ಕರೆ ಮಾಡಿ ಮಾತನಾಡಿದ್ದ ಚೌಧರಿ ಅವರು, ಸನ ಮತ್ತು ರಮೇಶ್‌ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ಪುರಾವೆಗಳಿಲ್ಲ ಎಂದು ಅಸ್ತಾನಾ ಹೇಳಿದ್ದಾಗಿ ತಿಳಿಸಿದ್ದರು.

ವರ್ಮಾ ವಿರುದ್ಧ ಸಿವಿಸಿ ತನಿಖೆ ನಡೆಯುತ್ತಿರುವಾಗಲೇ ಕಾನೂನು ಕಾರ್ಯದರ್ಶಿ ಸುರೇಶ್‌ಚಂದ್ರ ಅವರು ಸನಾ ಅವರನ್ನು ಸಂಪರ್ಕಿಸಿದ್ದಾರೆ. ನವೆಂಬರ್‌ 8ರಂದು ಮೊದಲಿಗೆ ಐಐಎಸ್‌ ಅಧಿಕಾರಿ ರೇಖಾ ರಾಣಿ ಅವರು ಸನ ಅವರನ್ನು ಸಂಪರ್ಕಿಸಿ ಲಂಡನ್‌ನಲ್ಲಿರುವ ಸುರೇಶ್‌ಚಂದ್ರ ಅವರು ಮಾತನಾಡಲು ಬಯಸಿದ್ದಾರೆ ಎಂದು ತಿಳಿಸಿದ್ದರು.

ಸನ ಅವರಿಗೆ ಕೇಂದ್ರವು ಸಂಪೂರ್ಣ ರಕ್ಷಣೆ ನೀಡಲಿದೆ ಎಂದು ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ತಿಳಿಸಿದ್ದಾರೆ. ಈ ಸಂದೇಶ ನೀಡುವುದಕ್ಕಾಗಿ ಕರೆ ಮಾಡಲಾಗಿದೆ ಎಂದು ಆ ಸಂದರ್ಭದಲ್ಲಿ ಸುರೇಶ್‌ಚಂದ್ರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT