ಗುರುವಾರ , ಏಪ್ರಿಲ್ 22, 2021
22 °C
ಗ್ರಾಮೀಣ ರಸ್ತೆಗಳ ಹರಿಕಾರ.. ಹೆಸರಿರಿಸಲು ನಕಾರ...

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಜನಕ ಅಟಲ್‌ಜೀ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮೂರನೇ ಬಾರಿಗೆ ಮತ್ತು ಪೂರ್ಣಪ್ರಮಾಣದ ಅವಧಿಗೆ ಮೊದಲ ಬಾರಿಗೆ (ಐದು ವರ್ಷಗಳ ಅವಧಿಗೆ) ಅಧಿಕಾರಕ್ಕೆ ಬಂದಿದ್ದು 1999ರಲ್ಲಿ. ಅದರ ಚುಕ್ಕಾಣಿ ಮತ್ತೆ ದೊರೆತಿದ್ದು ‘ಅಜಾತಶತ್ರು’ ಅಟಲ್‌ ಬಿಹಾರಿ ವಾಜಪೇಯಿ ಅವರ ಕೈಗೆ.

ಈ ಅಧಿಕಾರಾವಧಿಯಲ್ಲಿ ದೇಶದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಅನೇಕ ಯೋಜನೆಗಳನ್ನು ಆರಂಭಿಸಿ ಹೆಸರಾದವರು ವಾಜಪೇಯಿ.

ಗ್ರಾಮಗಳೇ ಪ್ರಧಾನವಾಗಿರುವ ಈ ದೇಶದಲ್ಲಿನ ಕುಗ್ರಾಮಗಳು ಸಂಪರ್ಕ ರಸ್ತೆಯೇ ಇಲ್ಲದೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ದಿನಗಳವು. ಈ ಗ್ರಾಮೀಣ ಪ್ರದೇಶಗಳ ಬೆಳವಣಿಗೆಗೆ, ಗ್ರಾಮೀಣರ ಜೀವನಶೈಲಿಯ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರದಲ್ಲಿದ್ದ ಮುತ್ಸದ್ಧಿಗಳೊಂದಿಗೆ ಚರ್ಚಿಸಿದ್ದ ವಾಜಪೇಯಿ ಅವರಿಗೆ ಹೊಳೆದಿದ್ದು, ‘ಗ್ರಾಮಗಳ ಅಭ್ಯುದಯಕ್ಕೆ ಅಗತ್ಯವಾದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂಬ ಆಲೋಚನೆ.

ಈ ಆಲೋಚನೆ ಹೊಳೆದದ್ದೇ ತಡ. ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಮೀಸಲಿರಿಸಿ, ‘ಗ್ರಾಮೀಣ ಸಡಕ್‌ ಯೋಜನೆ’ಯನ್ನು ಫೋಷಿಸಿದರು. ‘ಇದು ಅತ್ಯುತ್ತಮವಾದ ಯೋಜನೆ. ಇದಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಗ್ರಾಮೀಣ ಸಡಕ್‌ ಯೋಜನೆ ಎಂಬ ಹೆಸರನ್ನೇ ಇರಿಸೋಣ’ ಎಂದು ಬಿಜೆಪಿಯ ಹಲವಾರು ಮುಖಂಡರು ವಾಜಪೇಯಿ ಅವರ ಕಿವಿಯಲ್ಲಿ ಉಸುರಿದರು.

ಈ ಪ್ರಸ್ತಾವಕ್ಕೆ ವಾಜಪೇಯಿ ಸುತಾರಾಂ ಒಪ್ಪದೆ, ನಯವಾಗಿ ನಿರಾಕರಿಸಿದ್ದರು. ‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ದೇಶದಾದ್ಯಂತ ಅನೇಕ ಯೋಜನೆಗಳಿಗೆ ಪ್ರಧಾನಿಗಳಾಗಿದ್ದ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಹೆಸರನ್ನು ಇರಿಸಲಾಗಿದೆ. ಅಜರಾಮರ ಆಗುವ ನಿಟ್ಟಿನಲ್ಲಿ ನಿಮ್ಮ ಹೆಸರು ಇರಿಸಲು ಅನುಮತಿ ನೀಡಿ’ ಎಂದು ಆ ಮುಖಂಡರು ಒತ್ತಾಯಿಸಿದರು.

ಅದಕ್ಕೂ ಜಗ್ಗದ ವಾಜಪೇಯಿ, ‘ನಿಮ್ಮ ಮನಸ್ಸು ನೋಯಿಸುವುದಕ್ಕೆ ನನಗೆ ಇಷ್ಟವಿಲ್ಲ. ಈ ಯೋಜನೆಗೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಎಂದು ನಾಮಕರಣ ಮಾಡಿ’ ಎಂದು ತಮಗೆ ‘ಸೂಕ್ತ’ ಎನ್ನಿಸುವ ಸಲಹೆ ನೀಡಿದರು.

ನಂತರ ‘ಪಿಎಂಜಿಎಸ್‌ವೈ’ ಎಂಬ ಹೆಸರಿನಲ್ಲೇ ಆಯಾ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಆಡಳಿತಗಳ ಉಸ್ತುವಾರಿಯಲ್ಲಿ ದೇಶದ ಲಕ್ಷಾಂತರ ಹಳ್ಳಿಗಳಿಗೆ ರಸ್ತೆ ಸೌಲಭ್ಯ ದೊರೆಯುವಂತಾಯಿತು.

**

ಹೆದ್ದಾರಿಗಳ ಅಭಿವೃದ್ಧಿ:
ಗ್ರಾಮೀಣ ರಸ್ತೆಗಳ ನಂತರ ವಾಜಪೇಯಿ ಅವರ ದೃಷ್ಟಿ ಹೊರಳಿದ್ದು ದೇಶದ ರಾಷ್ಟ್ರೀಯ ಹೆದ್ದಾರಿಗಳತ್ತ. ಅಲ್ಲಿಯವರೆಗೆ ಎದುರು– ಬದುರು ಎರಡು ಹಾಗೂ ನಾಲ್ಕು ವಾಹನಗಳ ಸಂಚಾರಕ್ಕೆ ಅವಕಾಶವಿದ್ದ ಬಹುತೇಕ ಹೆದ್ದಾರಿಗಳನ್ನು ನಾಲ್ಕು ಪಥ (ಚತುಷ್ಪಥ) ಮತ್ತು ಆರು ಒಥ (ಷಟ್ಪಥ)ಕ್ಕೆ ಅಭಿವೃದ್ಧಿ ಪಡಿಸುವ ಯೋಜನೆಗೆ ಚಾಲನೆ ದೊರೆಯಿತು.

2001–02ನೇ ಸಾಲಿನಲ್ಲಿ ಈ ಯೋಜನೆಗೆ ಚಾಲನೆ ದೊರೆತ ನಂತರದ ಐದಾರು ವರ್ಷಗಳಲ್ಲಿ ದೇಶದ ಬಹುತೇಕ ಹೆದ್ದಾರಿಗಳು ಅಭಿವೃದ್ಧಿ ಕಂಡವು. ಯಾವುದೇ ಅಭಿವೃದ್ಧಿ ಯೋಜನೆಗೆ ತಮ್ಮ ಹೆಸರನ್ನು ಇರಿಸುವುದಕ್ಕೆ ವಾಜಪೇಯಿ ವಿರೋಧ ವ್ಯಕ್ತಪಡಿಸಿದ್ದರೂ, ಜನಸಾಮಾನ್ಯರು ಆ ಹೆದ್ದಾರಿಗಳನ್ನು ‘ವಾಜಪೇಯಿ ಹೆದ್ದಾರಿಗಳು ಅಥವಾ ರಸ್ತೆಗಳು’ ಎಂದೇ ಕರೆದರು.

ನಿತ್ಯವೂ ನೂರಾರು ಅಪಘಾತಗಳು, ಸಾವು– ನೋವುಗಳ ಸುದ್ದಿಗೆ ಕಾರಣವಾಗುತ್ತಿದ್ದ, ಭಾರಿ ಟೀಕೆಗೆ ಕಾರಣವಾಗಿದ್ದ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು.

ಪುಣೆಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ– 4ರಲ್ಲಿರುವ ತುಮಕೂರು, ಚಿತ್ರದುರ್ಗ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿಗಳ ಬಳಿ ಜನರು ನಿತ್ಯ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಈ ಹೆದ್ದಾರಿಯ ಪಕ್ಕದ ‘ಸೇವಾ ರಸ್ತೆ’ (ಸರ್ವೀಸ್‌ ರೋಡ್‌)ಗಳಲ್ಲಿ ವಾಯುವಿಹಾರವನ್ನೂ ಮಾಡುತ್ತಿದ್ದುದು ಕಂಡುಬರುತ್ತಿತ್ತು.

**

ಗ್ಯಾಸ್‌, ಫೋನ್‌ ಕನೆಕ್ಷನ್‌:
ಅಟಲ್‌ ಬಿಹಾರಿ ವಾಜಪೇಯಿ ಅವರು ಅಧಿಕಾರದ ಗದ್ದುಗೆ ಏರುವ ಮುನ್ನ ಜನಸಾಮಾನ್ಯರು ಅಡುಗೆ ಅನಿಲ ಮತ್ತು ಸ್ಥಿರ ದೂರವಾಣಿಯ ಸಂಪರ್ಕಕ್ಕೆ ವರ್ಷಗಟ್ಟಲೇ ಕಾಯುವ ಸ್ಥಿತಿ ಇತ್ತು.

ಅದರಲ್ಲೂ ಗ್ರಾಮೀಣ ಪ್ರದೇಶಗಳ ಜನ ಅಡುಗೆ ಅನಿಲ ಮತ್ತು ಸ್ಥಿರ ದೂವಾಣಿಗೆ ಠೇವಣಿ ಹಣ ಸಂದಾಯ ಮಾಡಿ, ನೋಂದಣಿ ಮಾಡಿ ಐದಾರು ವರ್ಷಗಳ ಕಾಲ ಕಾಯುತ್ತಿದ್ದ ದಿನಗಳವು.

1998ರಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ಸರ್ಕಾರ ಈ ಎರಡೂ ಸಂಪರ್ಕಗಳು ತ್ವರಿತವಾಗಿ ದೊರೆಯುವಂತೆ ಕ್ರಮ ಕೈಗೊಂಡಿದ್ದು ಮಹತ್ವದ ಬೆಳವಣಿಗೆಯಾಗಿ ದಾಖಲಾಯಿತು.

ರಾಜೀವ್‌ ಗಾಂಧಿ ಅವರು ಸ್ಯಾಂ ಪಿತ್ರೋಡಾ ಅವರೊಂದಿಗೆ ಈ ಬಗ್ಗೆ ಆಲೋಚಿಸಿ ‘ಸಂಪರ್ಕ ಕ್ರಾಂತಿಯ ಹರಿಕಾರ’ ಎಂದು ಕರೆಸಿಕೊಂಡಿದ್ದರೂ, ಸ್ಥಿರ ದೂರವಾಣಿಯ ಸಂಪರ್ಕಗಳು ಮತ್ತೂ ಅವುಗಳನ್ನು ಬದಿಗೊತ್ತಿ ಬಂದ ಮೊಬೈಲ್‌ ದೂರವಾಣಿಯ ಬಳಕೆ ಜನಜನಿತವಾದದ್ದೂ ವಾಜಪೇಯಿ ಅಧಿಕಾರದ ಅವಧಿಯಲ್ಲೇ ಎಂಬುದು ಸ್ಮರಣೀಯ.

***
ಹದಿಮೂರು ಮತ್ತು ವಾಜಪೇಯಿ!

ನವದೆಹಲಿ: ವಾಜಪೇಯಿ ಈ ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಆಡಳಿತ ನಡೆಸಿದ್ದು ಕೇವಲ 13 ದಿನ. 1996ರಲ್ಲಿ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸದೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1998ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ಆಡಳಿತ ನಡೆಸಿದ್ದು 13 ತಿಂಗಳು. ಮತ್ತೆ 13ರ ಸಂಖ್ಯೆಯೇ ಅವರಿಗೆ ಕೈಕೊಟ್ಟಿತ್ತು.

1999ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ವಾಜಪೇಯಿ ಐದು ವರ್ಷಗಳ ಅವಧಿಯ ಆಡಳಿತ ನಡೆಸಿದರೂ ಮತ್ತೆ ಅವರಿಗೆ ಅದೇ 13ರ ಸಂಖ್ಯೆಯೇ ಅಡ್ಡಿಯಾಯಿತು.

2004ರ ಏಪ್ರಿಲ್‌ 20 ಮತ್ತೆ ಮೇ 10ರಂದು ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ವಾಜಪೇಯಿ ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಈ ಚುನಾವಣೆಯ ಮತಗಳ ಎಣಿಕೆ ನಡೆದಿದ್ದು 2004ರ ಮೇ 13. ವಾಜಪೇಯಿ ಅವರಿಗೆ 13 ಮತ್ತೆ ದುರದೃಷ್ಟವಾಗಿ ಹೊರಹೊಮ್ಮಿತು.

ಇನ್ನಷ್ಟು: 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು