ಸೋಮವಾರ, ಮೇ 17, 2021
31 °C
‘ಕೇಂದ್ರಾಡಳಿತ ಪ್ರದೇಶ ರದ್ದು ಪಡಿಸಿ’

ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ: ಆಜಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ರಾಜ್ಯ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದು ರಾಜ್ಯದ ಜನತೆಗೆ ಮಾಡಿದ ಅಪಮಾನ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಆರೋಪಿಸಿದರು.

ನಗರದಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಪರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ರದ್ದು
ಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಮತ್ತೆ ರಾಜ್ಯವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

‘ನೀವು ಯಾವ ಬಗೆಯ ತೊಂದರೆಯನ್ನು ಅನುಭವಿಸಿದ್ದೀರಿ ಎಂಬುದು ನನಗೆ ತಿಳಿದಿದೆ ಎಂದು ಅಬ್ದುಲ್ಲಾ ಅವರತ್ತ ನೋಡಿದ ಆಜಾದ್‌, ಅಬ್ದುಲ್ಲಾ ಅವರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಅವರನ್ನು ಸರ್ಕಾರ ಗೃಹಬಂಧನದಲ್ಲಿ ಇರಿಸಿದ್ದು ಅತಿ ಎನಿಸುವ ನಿರ್ಧಾರವಾಗಿತ್ತು’ ಎಂದು ಅವರು ಆರೋಪಿಸಿದರು.

‘ಫಾರೂಕ್‌ ಅವರನ್ನು ಗೃಹ ಬಂಧನದಲ್ಲಿ ಇರಿಸಿದ್ದು ಯಾಕೆಂಬುದು ಅವರ ಬಿಡುಗಡೆಯ ನಂತರವೂ ತಿಳಿದಿಲ್ಲ. ಕಾನೂನು ಉಲ್ಲಂಘಿಸುವ ಹಾಗೂ ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿರುವವರನ್ನು ಬಂಧನದಲ್ಲಿ ಇಡುವುದು ಸರಿ. ಆದರೆ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಪಕ್ಷಾತೀತವಾಗಿ ಎಲ್ಲ ನಾಯಕರನ್ನು ಬಂಧನದಲ್ಲಿ ಇಟ್ಟಿದ್ದು ಸರಿಯಲ್ಲ’ ಎಂದು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ ಪ್ರಗತಿ ಸಾಧಿಸಬೇಕಾದರೆ ಬಂಧನದಲ್ಲಿರುವ ಎಲ್ಲ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಬೇಕು.
ಕಣಿವೆ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸರಿಯಾದ ಕಾರ್ಯವಿಧಾನ ಅನುಸರಿಸಿಚುನಾವಣೆಗಳನ್ನು ನಡೆಸಬೇಕು’ ಎಂದು ಒತ್ತಾಯಿಸಿದರು.

ಮಗನ ಭೇಟಿ ಮಾಡಿದ ಫಾರೂಕ್‌:ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಗೃಹಬಂಧನದಿಂದ ಬಿಡುಗಡೆಯಾದ ನಂತರ ಶನಿವಾರ ಮೊದಲ ಬಾರಿಗೆ ತಮ್ಮ ಮಗ ಒಮರ್‌ ಅಬ್ದುಲ್ಲಾ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ತಮ್ಮ ನಿವಾಸದ ಬಳಿ ಜೈಲಿನಂತೆ ಮಾರ್ಪಡಿಸಲಾಗಿರುವ ಒಮರ್‌ ಅವರ ಹರಿನಿವಾಸಕ್ಕೆ ಭೇಟಿ ನೀಡಿದ ಫಾರೂಕ್‌ ಅಬ್ದುಲ್ಲಾ, ಒಂದು ಗಂಟೆಯವರೆಗೆ ಮಗನೊಂದಿಗೆ ಕಾಲ ಕಳೆದರು.

ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿ ಇರಿಸಲಾಗಿರುವ ಒಮರ್‌ ಅವರ ಭೇಟಿಗೆ ಅವಕಾಶ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಫಾರೂಕ್‌ ಅಬ್ದುಲ್ಲಾ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಆಡಳಿತವು ಭೇಟಿಗೆ ಅವಕಾಶ ಕಲ್ಪಿಸಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು