‘ಹಿಂದುಳಿದಿರುವಿಕೆಗೆ ಅಸ್ಪೃಶ್ಯತೆಯೇ ಕಾರಣ’

7
ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಪರ ವಾದ

‘ಹಿಂದುಳಿದಿರುವಿಕೆಗೆ ಅಸ್ಪೃಶ್ಯತೆಯೇ ಕಾರಣ’

Published:
Updated:

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಾಮಾಜಿಕವಾಗಿ ಬೇರೂರಿರುವ ಅಸ್ಪೃಶ್ಯತೆಯಿಂದ ನರಳುತ್ತಿವೆ. ಈ ಸಮುದಾಯದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದರು.

‘ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಪರ ಅವರು ವಾದ ಮಂಡಿಸಿದರು.

ಈ ಸಮುದಾಯಗಳು ಹಿಂದುಳಿಯಲು ಅಸ್ಪೃಶ್ಯತೆಯ ಆಚರಣೆಯೂ ಪ್ರಮುಖ ಕಾರಣವಾಗಿದೆ. ಆದರೆ, ಹಿಂದುಳಿದಿರುವಿಕೆ ಗುರುತಿಸುವ ತಾರ್ಕಿಕ ಪ್ರಯತ್ನಗಳು ನಡೆದಿಲ್ಲ. ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪುಗಳಲ್ಲಿ ಈ ಕುರಿತು ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.

ಈ ಸಮುದಾಯವನ್ನು ಹಿಂದುಳಿದ ಪಟ್ಟಿಯಲ್ಲಿ ಯಾವ ಕಾರಣಕ್ಕೆ ಸೇರಿಸಲಾಗಿದೆ ಎಂಬುದನ್ನು ಯಾರೂ ಮರೆಯಬಾರದು. ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೊಡೆದುಹಾಕಿದರೆ ಮಾತ್ರ ಕೆನೆಪದರದ ನಿಯಮವು ಅನ್ವಯವಾಗುತ್ತದೆ ಎಂದು ಅವರು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠದೆದುರು ವಿವರಿಸಿದರು.

ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ ಮತ್ತಿತರ ಅಂಶಗಳನ್ನು ಆಧರಿಸಿ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂದು ತೀರ್ಪುಗಳು ಹೇಳಿವೆ. ಆದರೆ, ಈಗಲೂ ದಲಿತರ ವಿರುದ್ಧ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಲೇ ಇವೆ ಎಂಬುದನ್ನು ಅವಲೋಕಿಸಿದಾಗ ಹಿಂದುಳಿದಿರುವಿಕೆ ನಿರಂತರವಾಗಿ ಮುಂದುವರಿದಿದೆ ಎಂಬುದು ಸ್ಪಷ್ಟ ಎಂದು ಅವರು ಒತ್ತಿಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ಮುಂದುವರಿದಾಗ ಮಾತ್ರ ಸಮಾನತೆ ಸಾಧ್ಯ. ಹಿಂದುಳಿದಿರುವಿಕೆಯನ್ನು ಗುರುತಿಸುವಿಕೆ ಹೇಗೆ ಎಂಬ ಬಗ್ಗೆ ತೀರ್ಪುಗಳಲ್ಲಿ ವಿವರಗಳಿಲ್ಲ. ಆದರೂ ರಾಜ್ಯ ಸರ್ಕಾರವು ಸೂಕ್ತ ವಿಧಾನವನ್ನು ಅನುಸರಿಸಿ ಪ್ರಾತಿನಿಧ್ಯದ ಕೊರತೆ ಹಾಗೂ ಹಿಂದುಳಿದಿರುವಿಕೆ ಕುರಿತ ಮಾಹಿತಿ ಸಂಗ್ರಹಿಸಿದೆ ಎಂದು ಅವರು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

ಸಾಂದರ್ಭಿಕ ಹಿರಿತನಕ್ಕೆ ಸಂಬಂಧಿಸಿದಂತೆ ಕೆನೆಪದರದ ನೀತಿಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಾತಿಯಡಿ ಅಡಿ ಬಡ್ತಿ ನೀಡಿದರೆ ಮಾತ್ರ ಅವರು ಕೆನೆಪದರದ ಅಡಿ ಬರಲು ಸಾಧ್ಯ ಎಂದು ರಾಜ್ಯ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ಹೇಳಿದರು.

ಅಂತಿಮ ಹಂತ ತಲುಪಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಮುಂದಿನ ಮಂಗಳವಾರಕ್ಕೆ ಮುಂದೂಡಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !