ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಪಥದಲ್ಲಿ ಈ ಬಾರಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಸ್ತಬ್ಧಚಿತ್ರ

ಗಣರಾಜ್ಯೋತ್ಸವ ಪರೇಡ್‌: ಮಹಾತ್ಮಗಾಂಧಿ ಜೀವನಾಧರಿತ ಸ್ತಬ್ಧಚಿತ್ರ ಈ ವರ್ಷದ ಥೀಮ್‌
Last Updated 26 ಜನವರಿ 2019, 2:46 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ನವದೆಹಲಿಯ ಗಣರಾಜ್ಯೋತ್ಸವದ ರಾಜ್‌ಪಥ್‍ನ ಪೆರೇಡ್‍ನಲ್ಲಿ ಕರ್ನಾಟಕದ ‘ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ’ ವಿಷಯಾಧಾರಿತ ಸ್ತಬ್ದಚಿತ್ರ ಸಾಗಲಿದೆ.

ರಕ್ಷಣಾ ಸಚಿವಾಲಯವೇ ಮಹಾತ್ಮಗಾಂಧಿಯವರ 150ನೇ ಜನ್ಮದಿನಚರಣೆ ಅಂಗವಾಗಿ ಈ ಬಾರಿ ಎಲ್ಲಾ ರಾಜ್ಯಗಳಿಗೂ ಮಹಾತ್ಮಗಾಂಧಿಯವರ ಜೀವನಾಧರಿತ ಸ್ತಬ್ಧಚಿತ್ರದ ಪರಿಕಲ್ಪನೆ ಕಳುಹಿಸುವಂತೆ ಸೂಚಿಸಿತ್ತು. ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶಕರನ್ನೊಳಗೊಂಡ ಸಮಿತಿ ವಿವಿಧ ನಾಲ್ಕು ವಿಷಯಗಳನ್ನು ಒಳಗೊಂಡ ಸ್ತಬ್ಧಚಿತ್ರದ ಮಾದರಿಗಳನ್ನು ರಕ್ಷಣಾಮಂತ್ರಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಅಂತಿಮವಾಗಿ ರಕ್ಷಣಾಮಂತ್ರಾಲಯ ನೇಮಿಸಿದ್ದ ತಜ್ಞರ ಸಮಿತಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ದಚಿತ್ರವನ್ನು ಆಯ್ಕೆ ಮಾಡಿತು ಎಂದುವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಬಸವರಾಜ್ ಕಂಬಿ ಮಾಹಿತಿ ನೀಡಿದರು.

1924ರ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲಿ ನಡೆದ ಕಾಂಗ್ರೆಸ್ ಅಧಿವೇಶನ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ. ಏಕೆಂದರೆ ಇದು ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಮಹಾ ಅಧಿವೇಶನವಾಗಿದೆ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ 39 ನೇ ಮಹಾಧಿವೇಶನಕ್ಕೆ ಕನ್ನಡ ಜನತೆ ಅತ್ಯುತ್ಸಾಹದ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿತ್ತು. ಕಲಾವಿದ ಶಶಿಧರ ಅಡಪ ಅವರು ಸ್ತಬ್ಧಚಿತ್ರದ ವಿನ್ಯಾಸ ಮಾಡಿದ್ದು, ಪ್ರವೀಣ್ ಡಿ.ರಾವ್ ಅವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಗೀತೆಯನ್ನು ಸಂಗೀತ ರಚನೆ ಮಾಡಿದ್ದಾರೆ. ಸ್ತಬ್ಧಚಿತ್ರದ ನಿರ್ಮಾಣ ಕಾರ್ಯಕ್ಕೆ ಜನವರಿ 5 ರಂದು ಚಾಲನೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.

ಸ್ತಬ್ಧಚಿತ್ರದ ನಿರ್ಮಾಣದ ಸ್ಥಳೀಯ ಉಸ್ತುವಾರಿ ವಹಿಸಿರುವ ವಾರ್ತಾಧಿಕಾರಿ ಡಾ.ಮೈಸೂರು ಗಿರೀಶ್ ಮಾತನಾಡಿ, ಗಣರಾಜ್ಯೋತ್ಸವ ಪೆರೇಡ್‍ನಲ್ಲಿ 13 ರಿಂದ 14 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಬಾರಿ 30 ರಾಜ್ಯಗಳಲ್ಲಿ 14 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರ ಅಂತಿಮವಾಗಿ ಆಯ್ಕೆಗೊಂಡಿದ್ದವು. ವೈಲ್ದ್ ಕಾರ್ಡ್‌ ಮೂಲಕ ಈಶಾನ್ಯ ರಾಜ್ಯದ ಮೂರು ರಾಜ್ಯಗಳಿಗೆ ಅವಕಾಶ ಕಲ್ಪಿಸಲಾಗಿ, ಒಟ್ಟು 17 ರಾಜ್ಯಗಳ ಸ್ತಬ್ಧಚಿತ್ರಗಳು ಈ ಸಾಲಿನ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸುತ್ತಿವೆ.

ಕರ್ನಾಟಕ ಸತತ 10 ವರ್ಷಗಳಿಂದ ಆಯ್ಕೆಯಾಗುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ. ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಇಲಾಖೆ ಸಿದ್ದಪಡಿಸಿದ್ದ ಸ್ತಬ್ದಚಿತ್ರಗಳ ಪೈಕಿ ಈವರಿಗೆ 5 ಬಾರಿ ಪ್ರಶಸ್ತಿ ಸಂದಿದೆ. ಈ ಬಾರಿಯೂ ಸ್ತಬ್ಧಚಿತ್ರದ ವಸ್ತುವಿಷಯ ವಿಶೇಷತೆಯಿಂದ ಕೂಡಿದ್ದು, ಸ್ತಬ್ಧಚಿತ್ರದ ನಿರ್ಮಾಣ ಸುಂದರವಾಗಿ ಮೂಡಿಬಂದಿದ್ದು ಈ ಸಾಲಿನಲ್ಲೂ ಪ್ರಶಸ್ತಿ ಲಭಿಸಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಸ್ತಬ್ಧಚಿತ್ರದ ವಿವರಣೆ: ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಐತಿಹಾಸಿಕ ಅಧಿವೇಶನ ನಡೆದ ಆವರಣಕ್ಕೆ ‘ವಿಜಯನಗರ’ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲದೆ ಅಧಿವೇಶನ ನಡೆದ ಸ್ಥಳದ ಪ್ರವೇಶ ದ್ವಾರವನ್ನು ಹಂಪಿಯ ವಿರೂಪಾಕ್ಷ ದೇಗುಲದ ಗೋಪುರದ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರತಿನಿಧಿಗಳು ಮತ್ತು ಆಹ್ವಾನಿತರು ತಂಗಲು ಕುಟೀರಗಳನ್ನು ಬಿದಿರು ಮತ್ತು ಖಾದಿ ವಸ್ತ್ರಗಳಿಂದ ರೂಪಿಸಲಾಗಿತ್ತು. ಕುಡಿಯುವ ನೀರು ಸರಬರಾಜಿಗಾಗಿ ಹೊಸ ಬಾವಿಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಪಂಪಾ ಸರೋವರ ಎಂದು ಹೆಸರಿಡಲಾಗಿತ್ತು. ಪ್ರತಿನಿಧಿಗಳ ಊಟೋಪಚಾರದ ವ್ಯವಸ್ಥೆಗೆ ಬೃಹತ್ ಪಾಕಶಾಲೆ ನಿರ್ಮಿಸಲಾಗಿತ್ತು. ಸಮಾವೇಶದ ಇಡೀ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಮುಂಬೈನಿಂದ ಸಾವಿರಾರು ಸಂಖ್ಯೆಯಲ್ಲಿ ಲಾಟೀನ್‍ಗಳು ಮತ್ತು ಪೆಟ್ರೋಮ್ಯಾಕ್ಸ್ ದೀಪಗಳನ್ನು ತರಿಸಲಾಗಿತ್ತು. ನಾ.ಸೂ.ಹರ್ಡಿಕರ್ ಅವರು ತರಬೇತಿಗೊಳಿಸಿದ್ದ ಹಿಂದೂಸ್ತಾನ್ ಸೇವಾದಳದ ಸ್ವಯಂ ಸೇವಕರು, ಪ್ರತಿನಿಧಿಗಳು ಮತ್ತು ಆಹ್ವಾನಿತರ ಸೇವೆಯ ಮೇಲುಸ್ತುವಾರಿ ವಹಿಸಿದ್ದರು.

ಶಶಿಧರ ಅಡಪ
ಶಶಿಧರ ಅಡಪ

ವೇದಿಕೆಯನ್ನೇ ರೂಪಿಸಲಾಗಿದೆ:‘ಮಹಾತ್ಮ ಗಾಂಧಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ’ ವಿಷಯಾಧಾರಿತ ಸ್ತಬ್ಧಚಿತ್ರದಲ್ಲಿ 1924ರಲ್ಲಿ ನಡೆದ ಬೆಳಗಾವಿ ಅಧಿವೇಶನದ ಅಕ್ಷರಶಃ ವೇದಿಕೆಯನ್ನೆ ಸ್ತಬ್ಧಚಿತ್ರದಲ್ಲಿ ಮೂಡಿಸಲಾಗಿದೆ. ಸಂಶೋಧನ ವಿದ್ಯಾರ್ಥಿಯಂತೆ ಪ್ರತಿಯೊಂದು ವಿಷಯಗಳಿಗೂ ಇತಿಹಾಸದ ದಾಖಲೆಗಳನ್ನು ಸಂಗ್ರಹಿಸಿ ರಕ್ಷಣಾ ಇಲಾಖೆಯ ಸ್ತಬ್ಧಚಿತ್ರದ ಆಯ್ಕೆ ಸಮಿತಿಯ ಮುಂದೆ ಪ್ರದರ್ಶಿಸಲಾಯಿತು. ನಮ್ಮ ರಾಷ್ಟ್ರಧ್ವಜದ ನಿರ್ಮಾಣವೇ ರೋಚಕತೆಯಿಂದ ಕೂಡಿದೆ. ರಾಷ್ಟ್ರಧ್ವಜದ ಪರಿಕಲ್ಪನೆ ಮೊದಲ ಬಾರಿಗೆ ಬೆಳಗಾವಿ ಅಧಿವೇಶನದಲ್ಲಿ ರೂಪಗೊಂಡಿತು, ನಮ್ಮ ಪ್ರಸ್ತುತ ರಾಷ್ಟ್ರಧ್ವಜ ಸತತ 16 ವರ್ಷಗಳ ಬಳಿಕ ನಿರಂತರ ಬದಲಾವಣೆ ಬಳಿಕ ಅಂತಿಮವಾಗಿ ಕೇಸರಿ-ಬಿಳಿ-ಹಸಿರು ಬಣ್ಣದ ತ್ರಿರಂಗ ರಾಷ್ಟ್ರಧ್ವಜ ಸಿದ್ದಗೊಂಡಿತು. ಇದನ್ನು ಸಹ ನಮ್ಮ ಸ್ತಬ್ಧಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ಕಲಾವಿದ ಶಶಿಧರ ಅಡಪ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT