ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ–ಕೋರೆಗಾಂವ್‌: ಮಡಿದ ಯೋಧರಿಗೆ ದಲಿತರ ನಮನ

Last Updated 1 ಜನವರಿ 2019, 20:00 IST
ಅಕ್ಷರ ಗಾತ್ರ

ಪುಣೆ: ಭೀಮಾ ಕೋರೆಗಾಂವ್‌ ಯುದ್ಧದ 201ನೇ ವರ್ಷಾಚರಣೆ ಪ್ರಯುಕ್ತ ಸಾವಿರಾರು ಜನರು ಮಹಾರಾಷ್ಟ್ರದ ಪುಣೆಯ ಪೆರ್ನೆ ಗ್ರಾಮದಲ್ಲಿರುವ ‘ಜಯ ಸ್ತಂಭ’ ಸ್ಮಾರಕದಲ್ಲಿ ಜಮಾಯಿಸಿದ್ದರು. ಅವರಲ್ಲಿ ದಲಿತ ಸಮುದಾಯಕ್ಕೆ ಸೇರಿದವರೇ ಬಹುಸಂಖ್ಯೆಯಲ್ಲಿದ್ದರು.

1818ರ ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್‌ ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣೆಗಾಗಿ ಬ್ರಿಟಿಷರು ಈ ಜಯ ಸ್ತಂಭ ಸ್ಥಾಪಿಸಿದ್ದರು. ಈ ಯುದ್ಧದಲ್ಲಿ ಬ್ರಿಟಿಷ್‌ ಸೇನೆಯಲ್ಲಿ ದಲಿತ ಸಮುದಾಯದ ಸೈನಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಮೇಲ್ಜಾತಿಯ ಪೇಶ್ವೆಗಳ ವಿರುದ್ಧ ಈ ಯುದ್ಧ ನಡೆದಿತ್ತು. ಹಾಗಾಗಿ ಮೇಲ್ಜಾತಿಯ ವಿರುದ್ಧ ತಮ್ಮ ಗೆಲುವು ಇದು ಎಂದು ದಲಿತರು ಭಾವಿಸಿದ್ದಾರೆ.

ಕಳೆದ ವರ್ಷ ಜನವರಿ ಒಂದರಂದು ಇಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಸಂಘರ್ಷ ಉಂಟಾಗಿತ್ತು. ಒಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. ಹಾಗಾಗಿ, ಈ ಬಾರಿ ಕಟ್ಟೆಚ್ಚರ ವಹಿಸಲಾಗಿತ್ತು. ಸುಮಾರು 5,000 ಪೊಲೀಸರು ಮತ್ತು 1,200 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ಹಾಕಲಾಗಿತ್ತು. ಪೆರ್ನೆ ಗ್ರಾಮದಲ್ಲಿ ಸುಮಾರು 2,000 ಮಂದಿ ದಲಿತ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.‌

2017ರ ಡಿಸೆಂಬರ್‌ 31ರಂದು ಪುಣೆಯಲ್ಲಿ ಎಲ್ಗಾರ್‌ ಪರಿಷತ್‌ ಹೆಸರಿನಲ್ಲಿ ಭಾರಿ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಕೆಲವರು ಪ್ರಚೋದನಕಾರಿ ಭಾಷಣ ಮಾಡಿದ್ದೇ ಕಳೆದ ವರ್ಷದ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಜನವರಿ 1ರಂದು ನಡೆದ ಹಿಂಸಾಚಾರದ ಹಿಂದೆ ನಕ್ಸಲ್‌ ಕೈವಾಡ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT