ಶುಕ್ರವಾರ, ಫೆಬ್ರವರಿ 26, 2021
28 °C

'ಭಾರತ ರತ್ನ' ನಿರಾಕರಿಸಿದ ಭೂಪೇನ್ ಹಜಾರಿಕಾ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಮರಣೋತ್ತರವಾಗಿ ಗಾಯಕ ಭೂಪೇನ್​ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ನೀಡಿದ್ದ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಹಜಾರಿಕಾ ಕುಟುಂಬ ನಿರಾಕರಿಸಿದೆ. ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಭೂಪೇನ್ ಹಜಾರಿಕಾ ಅವರಿಗೆ ನೀಡಿದ್ದ ಭಾರತ ರತ್ನ ನಿರಾಕರಿಸಿರುವುದಾಗಿ ಹಜಾರಿಕಾ ಪುತ್ರ ತೇಜ್ ಹಜಾರಿಕಾ ಹೇಳಿದ್ದಾರೆ.

ತನ್ನ ಅಪ್ಪನ  ನಂಬಿಕೆಗೆ ವಿರುದ್ಧವಾಗಿರುವ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲು ಸಿದ್ದತೆ ನಡೆಸಿರುವುದು ನನಗೆ ಅಸಮಧಾನವನ್ನುಂಟು ಮಾಡಿದೆ ಎಂದು ಅಮೆರಿಕದಲ್ಲಿ ನೆಲೆಸಿರುವ ತೇಜ್ ಹಜಾರಿಕಾ ಹೇಳಿದ್ದಾರೆ.

ಜನವರಿ 26 ಗಣರಾಜ್ಯೋತ್ಸವದಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಸಾಮಾಜಿಕ ಕಾರ್ಯಕರ್ತ ದಿ.ನಾನಾಜಿ ದೇಶಮುಖ ಅವರೊಂದಿಗೆ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನ ಘೋಷಿಸಲಾಗಿತ್ತು.

ಪ್ರಶಸ್ತಿ ಸ್ವೀಕಾರಕ್ಕೆ ನನಗೆ ಯಾವುದೇ ಆಮಂತ್ರಣ ಸಿಗಲಿಲ್ಲ ಎಂದು ಹೇಳಿದ ತೇಜ್ ಹಜಾರಿಕಾ, ಇದೊಂದು ಪ್ರಚಾರ ತಂತ್ರ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಆದರೆ ಪ್ರಶಸ್ತಿಯನ್ನು ತಿರಸ್ಕರಿಸುವ ವಿಷಯದಲ್ಲಿ ಹಜಾರಿಕಾ ಕುಟುಂಬ ಸದಸ್ಯರ ನಡುವೆ ಒಮ್ಮತದ ಕೊರತೆಯಿದೆ.  

 ತೇಜ್ ಈ ವಿಷಯದ ಬಗ್ಗೆ ನಮ್ಮಲ್ಲಿ  ಚರ್ಚೆ ಮಾಡಿಲ್ಲ ಎಂದು ಭೂಪೇನ್ ಹಜಾರಿಕಾ ಅವರ  ಸಹೋದರ ಸಮರ್ ಹಜಾರಿಕಾ ಹೇಳಿದ್ದಾರೆ.

ತೇಜ್ ಅವರ ಹೇಳಿಕೆಯನ್ನು ಕೇಳಿದೆ. ಅವರು ನಮ್ಮ ಜತೆ ಈ ವಿಷಯದ ಬಗ್ಗೆ ಚರ್ಚೆಯನ್ನು ಮಾಡಿಲ್ಲ, ಈ ವಿಷಯವನ್ನು ರಾಜಕೀಯ ಮಾಡಬಾರದು. ಪ್ರಶಸ್ತಿಯನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದು ಪ್ರಶಸ್ತಿ ಲಭಿಸಿದವರಿಗೆ ಬಿಟ್ಟ ವಿಚಾರ. ಅದನ್ನು ಇನ್ನೊಬ್ಬರು ಹೇಳುವುದು ಸರಿಯಲ್ಲ. ಒಂದು ವೇಳೆ ಭೂಪೇನ್ ದಾ  ಇದ್ದಿದ್ದರೆ ಅದನ್ನು ಸ್ವೀಕರಿಸುತ್ತಿದ್ದರೋ, ನಿರಾಕರಿಸುತ್ತಿದ್ದರೋ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಸಮರ್ ಹಜಾರಿಕಾ.

ಭೂಪೇನ್ ಅವರಿಗೆ ತುಂಬಾ ತಡವಾಗಿಯೇ ಈ ಪ್ರಶಸ್ತಿ ಸಿಕ್ಕಿದೆ. ಅವರು ರಾಜಕೀಯದಿಂದ ದೂರವಿದ್ದವರು. ಈ ಪ್ರಶಸ್ತಿ  ನಮ್ಮ ಕುಟುಂಬಕ್ಕೆ ಮಾತ್ರ ಸಿಕ್ಕಿದ್ದಲ್ಲ. ಇದು ಇಡೀ ಈಶಾನ್ಯ ರಾಜ್ಯ ಗಳಿಗೆ ಮತ್ತು ದೇಶಕ್ಕೆ ಸಿಕ್ಕಿದ್ದು ಎಂದು ಭೂಪೇನ್ ಹಜಾರಿಕಾ ಅವರ ಸಹೋದರ  ದಿವಂಗತ  ಜಯಂತ್ ಹಜಾರಿಕಾ ಅವರ  ಪತ್ನಿ ಮನೀಷಾ ಹಜಾರಿಕಾ ಹೇಳಿದ್ದಾರೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು