ಮಂಗಳವಾರ, ಮೇ 18, 2021
24 °C

ರಫೇಲ್‌ ಡೀಲ್: ಯುಪಿಎ, ಎನ್‌ಡಿಎ ಶಿಫಾರಸು ಮಾಡಿರುವ ರಿಲಯನ್ಸ್‌ಗಳು ಯಾವುವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಹೇಳಿಕೆಯಿಂದ ಉಂಟಾಗಿರುವ ವಿವಾದವನ್ನು ತಣ್ಣಗಾಗಿಸುವ ಯತ್ನದಲ್ಲಿ ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸಿ ಬಿಜೆಪಿ ಮಾಡಿರುವ ಟ್ವೀಟ್ ಪೂರ್ತಿ ನಿಜವಲ್ಲ ಎಂದು ಆಲ್ಟ್‌ನ್ಯೂಸ್ ಸುದ್ದಿತಾಣ ವರದಿ ಮಾಡಿದೆ.

ಇದನ್ನೂ ಓದಿ: ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್

‘ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪೆನಿ ಜತೆಗೆ ರಿಲಯನ್ಸ್‌ ಇಂಡಸ್ಟ್ರೀಸ್ 2013ರ ಫೆಬ್ರುವರಿ 13ರಂದೇ ಒಪ್ಪಂದ ಮಾಡಿಕೊಂಡಿತ್ತು. ನಾವು ಅಧಿಕಾರಕ್ಕೆ ಬರುವುದಕ್ಕೂ ಒಂದು ವರ್ಷ ನಾಲ್ಕು ತಿಂಗಳು ಮೊದಲೇ ಈ ಒಪ್ಪಂದ ಏರ್ಪಟ್ಟಿತ್ತು’ ಎಂದು ಬಿಜೆಪಿ ಶನಿವಾರ ಟ್ವೀಟ್ ಮಾಡಿತ್ತು.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ, ‘2012ರ ಫೆಬ್ರುವರಿ 13ರಂದು ಟೈಮ್ಸ್ ಆಫ್‌ ಇಂಡಿಯಾದಲ್ಲಿ ಪ್ರಕಟವಾಗಿದ್ದ ವರದಿ ಪ್ರಕಾರ, ಡಸಾಲ್ಟ್ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್ ನಡುವಣ ರಕ್ಷಣಾ ಒಪ್ಪಂದಕ್ಕೆ 2012ರಲ್ಲೇ ಸಹಿ ಹಾಕಲಾಗಿತ್ತು’ ಎಂದು ಪ್ರತಿಪಾದಿಸಿದ್ದರು. ಜತೆಗೆ, ಸಂಬಂಧಿಸಿದ ವರದಿಯ ಲಿಂಕ್‌ ಅನ್ನೂ ಶೇರ್ ಮಾಡಿದ್ದರು.

ಬಿಜೆಪಿಯ ದೆಹಲಿ ಘಟಕದ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಸಹ ಇದೇ ವರದಿಯ ಹಲವು ತುಣಕುಗಳ ಸಹಿತ ಟ್ವೀಟ್ ಮಾಡಿದ್ದರು.

ರಿಲಯನ್ಸ್‌ ಇಂಡಸ್ಟ್ರೀಸ್ ಮುಕೇಶ್ ಅಂಬಾನಿ, ರಿಲಯನ್ಸ್‌ ಡಿಫೆನ್ಸ್‌ ಅನಿಲ್‌ ಅಂಬಾನಿದು

ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ಒಡೆತನ ಉದ್ಯಮಿ ಮುಕೇಶ್‌ ಅಂಬಾನಿಯದಾಗಿದ್ದರೆ, ರಿಲಯನ್ಸ್‌ ಡಿಫೆನ್ಸ್‌ ಮಾಲೀಕ ಅನಿಲ್ ಅಂಬಾನಿಯಾಗಿದ್ದಾರೆ. ರಿಲಯನ್ಸ್‌ ಸಮೂಹ ಕಂಪೆನಿಗಳು 2005ರಲ್ಲೇ ಪ್ರತ್ಯೇಕಗೊಂಡಿವೆ.

2012ರಲ್ಲಿ ಡಸಾಲ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು ಮುಕೇಶ್ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಸೇರಿದ ಕಂಪೆನಿ ರಿಲಯನ್ಸ್‌ ಏರೋಸ್ಪೇಸ್‌ ಟೆಕ್ನಾಲಜೀಸ್ (ಆರ್‌ಎಟಿಎಲ್) ಆಗಿದೆ (ಈ ಕಂಪೆನಿಯು 2008ರ ಸೆಪ್ಟೆಂಬರ್ 4ರಂದು ನೋಂದಣಿಯಾಗಿತ್ತು). ಆದರೆ, ವ್ಯೂಹಾತ್ಮಕ ಕಾರಣಗಳಿಗಾಗಿ ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು 2014ರಲ್ಲಿ ಆರ್‌ಎಟಿಎಲ್ ಹೇಳಿಕೊಂಡಿತ್ತು. ಹೀಗಾಗಿ ಒಪ್ಪಂದ ಮುಂದುವರಿದಿರಲಿಲ್ಲ.

ಡಸಾಲ್ಟ್ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಫೆನ್ಸ್ ಕಂಪೆನಿಯು 2015ರ ಮಾರ್ಚ್‌ 28ರಂದು ಮುಂಬೈನಲ್ಲಿ ನೋಂದಣಿಯಾಗಿದ್ದಕ್ಕೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ದಾಖಲೆ ಲಭ್ಯವಿದೆ.


ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಮಾಹಿತಿ

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಡಸಾಲ್ಟ್‌ ಜತೆ 2012ರಲ್ಲಿ ರಿಲಯನ್ಸ್‌ ಏರೋಸ್ಪೇಸ್‌ ಟೆಕ್ನಾಲಜೀಸ್ ಒಪ್ಪಂದ ಮಾಡಿಕೊಂಡಿದ್ದು ನಿಜ. ವ್ಯೂಹಾತ್ಮಕ ಕಾರಣಗಳಿಗಾಗಿ ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು 2014ರಲ್ಲಿ ಕಂಪೆನಿ ಹೇಳಿಕೊಂಡಿದ್ದರಿಂದ ಒಪ್ಪಂದ ಮುಂದುವರಿದಿರಲಿಲ್ಲ ಎಂದು ಎಕಾನಮಿಕ್‌ ಟೈಮ್ಸ್ ಸಹ ಇತ್ತೀಚೆಗೆ ವರದಿ ಮಾಡಿದೆ.

ಯುಪಿಎ ವಿರುದ್ಧ ಗೂಬೆ ಕೂರಿಸಲು ಬಿಜೆಪಿ ತನ್ನ ಟ್ವೀಟ್‌ನಲ್ಲಿ ಬಳಸಿದ್ದ ಟೈಮ್ಸ್‌ ಆಫ್‌ ಇಂಡಿಯಾ ವರದಿಯಲ್ಲಿರುವ ಮಾಹಿತಿ ಡಸಾಲ್ಟ್‌ ಮತ್ತು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ್ದಾದರೆ; ಎನ್‌ಡಿಎ ಅವಧಿಯಲ್ಲಿ ಸಹಿ ಹಾಕಲಾಗಿರುವ ರಫೇಲ್‌ ಒಪ್ಪಂದದಲ್ಲಿ ಡಸಾಲ್ಟ್‌ ಸಹಭಾಗಿತ್ವ ವಹಿಸಿಕೊಂಡಿರುವುದು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಆಗಿದೆ.

ಡಸಾಲ್ಟ್‌ ಕಂಪನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇ ದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಇತ್ತೀಚೆಗೆ ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಇನ್ನಷ್ಟು...

*  ರಫೇಲ್ ಒಪ್ಪಂದ: ಭಾರತೀಯ ಕಂಪೆನಿ ಆಯ್ಕೆಯಲ್ಲಿ ನಮ್ಮ ಪಾತ್ರವಿಲ್ಲ ಎಂದ ಫ್ರಾನ್ಸ್

* ರಫೇಲ್‌ ಒಪ್ಪಂದ: ರಿಲಯನ್ಸ್‌ ಡಿಫೆನ್ಸ್‌ ನಮ್ಮ ಆಯ್ಕೆ ಎಂದ ಡಸಾಲ್ಟ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು