ಪಾಕ್‌ ಭಾಷೆಯಲ್ಲಿ ಕಾಂಗ್ರೆಸ್‌ ಮಾತು: ಬಿಜೆಪಿ

ಶನಿವಾರ, ಮೇ 25, 2019
25 °C
‘ಕಾಶ್ಮೀರ ಸಮಸ್ಯೆಯ ಸೃಷ್ಟಿಕರ್ತ ಜವಾಹರಲಾಲ್‌ ನೆಹರೂ’

ಪಾಕ್‌ ಭಾಷೆಯಲ್ಲಿ ಕಾಂಗ್ರೆಸ್‌ ಮಾತು: ಬಿಜೆಪಿ

Published:
Updated:

ನವದೆಹಲಿ: ಪುಲ್ವಾಮಾ ದಾಳಿಯ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಕಾಶ್ಮೀರ ಸಮಸ್ಯೆಯ ಸೃಷ್ಟಿಕರ್ತ ಜವಾಹರಲಾಲ್‌ ನೆಹರೂ ಎಂದು ಹೇಳಿದೆ. ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರದ ನೈತಿಕತೆಯನ್ನು ಕಾಂಗ್ರೆಸ್‌ ಪಕ್ಷ ಕುಗ್ಗಿಸುತ್ತಿದೆ ಎಂದು ಹರಿಹಾಯ್ದಿದೆ. 

‘ನೀವು ನಮಗೆ ರಾಷ್ಟ್ರೀಯತೆಯ ಪಾಠ ಹೇಳಬೇಕಾಗಿಲ್ಲ. ನಮ್ಮ ಪ್ರತಿ ಹನಿ ರಕ್ತದಲ್ಲಿಯೂ ರಾಷ್ಟ್ರೀಯತೆ ಇದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. 

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಮಾತನಾಡುತ್ತಿರುವ ರೀತಿಯಲ್ಲಿಯೇ ಕಾಂಗ್ರೆಸ್‌  ವಕ್ತಾರರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನ ವಕ್ತಾರರ ಹೇಳಿಕೆ ಕೇಳಿ ಪಾಕಿಸ್ತಾನದ ಜನರು ಮುದಗೊಂಡಿರುತ್ತಾರೆ. ಶೈಲಿಯಲ್ಲಿ ಬದಲಾವಣೆ ಇರಬಹುದು, ಆದರೆ, ವಿಷಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. 

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್‌ ದೇವಧರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯ್ಡು ಅವರು ಪಾಕಿಸ್ತಾನ ಪ್ರಧಾನಿಯತ್ತ ವಾಲಿರುವಂತೆ ಕಾಣಿಸುತ್ತಿದೆ. ನಾಯ್ಡು ಅವರಿಗೆ ಭಾರತದ ಪ್ರಧಾನಿಗಿಂತ ಪಾಕಿಸ್ತಾನ ಪ್ರಧಾನಿ ಮೇಲೆ ಹೆಚ್ಚು ನಂಬಿಕೆ ಇದ್ದಂತಿದೆ ಎಂದು ಹೇಳಿದ್ದಾರೆ. 

ಪುಲ್ವಾಮಾ ದಾಳಿಯ ಬಳಿಕ ಇಡೀ ದೇಶ ಒಂದಾಗಿದೆ. ಒಂದಾದ ಬಳಿಕ ಒಂದರಂತೆ ದೇಶಗಳು ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿವೆ. ಭಾರತದ ಜತೆ ಗಟ್ಟಿಯಾಗಿ ನಿಂತಿವೆ. ಭಾರತವು ಸಂಕಷ್ಟದ ಸ್ಥಿತಿ ಎದುರಿಸುತ್ತಿರುವಾಗ ಕಾಂಗ್ರೆಸ್‌ ಪಕ್ಷದ ಬಣ್ಣ ಬಯಲಾಗಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. 

ಮೋದಿ ಅವರು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೂ ಅವರು ಉತ್ತರ ಕೊಟ್ಟಿದ್ದಾರೆ. ಭಯೋತ್ಪಾದಕರ ಸಂಚಿಗೆ ಅನುಗುಣವಾಗಿ ಭಾರತ ಸ್ಥಗಿತವಾಗದು. ಉಗ್ರರ ದಾಳಿಯಿಂದಾಗಿ ಭಾರತ ಸ್ಥಗಿತವಾಯಿತು ಎಂಬ ಸಂದೇಶ ರವಾನೆ ಆಗಬಾರದು ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !