ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ 40 ವರ್ಷ| ಯಶಸ್ವಿ ಪಕ್ಷದ ಮುಂದಿರುವ ಸವಾಲುಗಳೇನು?

Last Updated 6 ಏಪ್ರಿಲ್ 2020, 6:28 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷಕ್ಕೆ ಇಂದಿಗೆ (ಏ.6) ನಲ್ವತ್ತು ತುಂಬಿದೆ. ಅದರ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಜಗತ್‌ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಅಧಿಕಾರ ವಹಿಸಿಕೊಂಡಿದ್ದಾರೆ. ನಡ್ಡಾ ಅವರ ಸಂಘಟನಾ ಸಾಮರ್ಥ್ಯ, ಬದ್ಧತೆ ಮತ್ತು ಸಿದ್ಧಾಂತ ನಿಷ್ಠೆಯ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆಯಿದೆ. ಆದರೆ ಪಕ್ಷದ ಎದುರು ದೊಡ್ಡಮಟ್ಟದ ಸವಾಲುಗಳು ಈ ಸಾಮರ್ಥ್ಯಗಳನ್ನು ಒರೆಗೆ ಹಚ್ಚಲಿವೆ.

ಬಿಜೆಪಿಗೆ ಇಂದು ವಿಶಿಷ್ಟ ಚಾಕಚಕ್ಯತೆ ಮತ್ತು ಕ್ಷಿಪ್ರವಾಗಿ ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ರೂಢಿಸಿಕೊಂಡ ನಾಯಕ ಬೇಕು. ನಡ್ಡಾ ಅವರು ಮುಂದಿನ ದಿನಗಳಲ್ಲಿ ಈ ಗುಣಗಳನ್ನು ಅಳವಡಿಸಿಕೊಳ್ಳಲು ಲಕ್ಷ್ಯಕೊಟ್ಟರೆ ಮಾತ್ರ ದೇಶದಾದ್ಯಂತ ಬಿಜೆಪಿ ಪ್ರಭಾವ ವಿಸ್ತರಣೆ ಸಾಧ್ಯ ಎನ್ನುವುದು ಹಲವರ ಅಭಿಪ್ರಾಯ.

ಬಿಜೆಪಿಗೆ ಬಲ ತುಂಬುವ ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ನಡ್ಡಾ ರೂಪಿಸಬೇಕಿದೆ. ಇಂಥ ತಂಡದಲ್ಲಿ ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎನ್ನುವ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ. ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಸೋಲನ್ನೂ ಮೀರಿ ಬಿಹಾರ ಚುನಾವಣೆಗಳಲ್ಲಿ ನಡ್ಡಾ ಅವರು ಪಕ್ಷವನ್ನು ಹೇಗೆ ಮುನ್ನಡೆಸಬಲ್ಲರು ಎಂಬುದಕ್ಕೆ ಅಳತೆಗೋಲುಗಳಾಗುತ್ತವೆ.

ಹೀಗಿತ್ತು ಅಮಿತ್ ಶಾ ಕಾರ್ಯವೈಖರಿ

ಬಿಜೆಪಿಯಲ್ಲಿ ಅತ್ಯಂತ ಕಡಿಮೆ ವಯಸ್ಸಿಗೆ ಅಧ್ಯಕ್ಷರಾದ ಶ್ರೇಯ ಅಮಿತ್ ಶಾ ಅವರದ್ದು. 2019ರ ಜನವರಿಗೆ ಅವರ ಅಧಿಕಾರಾವಧಿ ಮುಗಿದುಹೋಗಿತ್ತು. ಆದರೂ ಹಂಗಾಮಿ ಅಧ್ಯಕ್ಷರಾಗಿದ್ದುಕೊಂಡು ರಾಜ್ಯ ಘಟಕಗಳ ಚುನಾವಣೆ ನಡೆಸಿದರು. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಭೂಮಿಕೆ ಸಿದ್ಧಪಡಿಸಲು ಈ ಚುನಾವಣೆಗಳು ನಡೆಯುವುದು ಅನಿವಾರ್ಯವಾಗಿತ್ತು.

ಅಧ್ಯಕ್ಷರಾದ ನಂತರ ಅಮಿತ್ ಶಾ ಬಿಜೆಪಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಸದಸ್ಯತ್ವ ನೋಂದಣಿ ಪ್ರಕ್ರಿಯೆಯ ಯೋಜನೆ ಮತ್ತು ಅನುಷ್ಠಾನ ಪ್ರಕ್ರಿಯೆಗಳನ್ನು ಹತ್ತಿರದಿಂದ ಗಮನಿಸಿದರು. ಪಕ್ಷ ಈಗ ಏರಿರುವ ಎತ್ತರಕ್ಕೆ ಅವರ ಕಾರ್ಯವೈಖರಿಯೂ ಮುಖ್ಯಕಾರಣ. ಅವರ ಅವಧಿಯಲ್ಲಿಯೇ ಬಿಜೆಪಿಯ ಸದಸ್ಯತ್ವ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಯಿತು. ತನ್ನ ಸಾಂಪ್ರದಾಯಿಕ ನೆಲೆಗಳಿಂದ ಆಚೆಯೇ ಉಳಿದಿದ್ದ ಅಸ್ಸಾಂನಂಥ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂತು.

ಭಾವಸೇತು ಕಟ್ಟುವ ಸವಾಲು

ತನ್ನೊಂದಿಗೆ ಮುನಿಸಿಕೊಂಡಿರುವ ಒಂದು ಕಾಲದ ಮಿತ್ರಪಕ್ಷಗಳನ್ನು ಸಾಮ, ದಾನ, ಭೇದ ಮತ್ತು ದಂಡ ಮಾರ್ಗಗಳಿಂದ ಮತ್ತೆ ಬಿಜೆಪಿಯ ಸಖ್ಯಕ್ಕೆ ತರುವುದು ಜೆ.ಪಿ.ನಡ್ಡಾ ಎದುರು ಈಗ ಇರುವ ದೊಡ್ಡ ಸವಾಲು.

ಈ ಹಿಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದ್ದ ಹಲವು ಪಕ್ಷಗಳು ಈಗ ಮುನಿಸಿಕೊಂಡು ದೂರ ಹೋಗಿವೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚಿಸಿದೆ. ಕೆಲ ರಾಜ್ಯಗಳಲ್ಲಿ ಹೊಸ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸಬೇಕಾದ ಅಗತ್ಯ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮಿತ್ರಪಕ್ಷಗಳೊಡನೆ ಮತ್ತೆ ಬಾಂಧವ್ಯ ಬೆಸೆಯುವ ಹೊಣೆಗಾರಿಕೆ ಮತ್ತು ಸವಾಲನ್ನು ನಡ್ಡಾ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಕ್ಷದ ಇಮೇಜ್ ಪ್ರಶ್ನೆ

ಸಾಮಾಜಿಕ ಧ್ರುವೀಕರಣವನ್ನು ಬಿಜೆಪಿ ಪ್ರೋತ್ಸಾಹಿಸುತ್ತಿದೆ ಎಂಬ ಆರೋಪಗಳು ಈಗ ದೊಡ್ಡಮಟ್ಟದಲ್ಲಿ ಕೇಳಿಬರುತ್ತಿವೆ. ಪೌರತ್ವ (ತಿದ್ದುಪಡಿ) ಕಾಯ್ದೆಯ ನಂತರ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ. ಪೌರತ್ವ ಕಾಯ್ದೆಯ ಪರ ಜನಜಾಗೃತಿ ಮೂಡಿಸಲು ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಬಹುತೇಕ ಎಲ್ಲ ಸಚಿವರೂ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆದರೂ ವಿರೋಧದ ಬಿಸಿ ತಣ್ಣಗಾಗುತ್ತಿಲ್ಲ.

ಇದರ ಜೊತೆಗೆ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಬಗ್ಗೆಯೂ ಹಲವು ಸಮುದಾಯಗಳಲ್ಲಿ ಆತಂಕ ವ್ಯಕ್ತವಾಗಿದೆ. ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಮಾತುಗಳೇ ಜನಾಭಿಪ್ರಾಯವಾಗಿ ಬದಲಾಗುವ ಅಪಾಯವನ್ನೂ ನಡ್ಡಾ ನಿರ್ವಹಿಸಬೇಕಿದೆ. ಪಕ್ಷ ಸಂಘಟನೆ, ಸಾರ್ವಜನಿಕರಲ್ಲಿ ಪಕ್ಷದ ಪರವಾಗಿ ಪೂರಕ ಅಭಿಪ್ರಾಯಗಳನ್ನು ರೂಪಿಸುವ ಸವಾಲು ಮತ್ತು ಸರ್ಕಾರದ ಜೊತೆಗೆ ಹೊಂದಾಣಿಕೆಯನ್ನು ನಡ್ಡಾ ಹೇಗೆ ಸಮತೋಲನದಿಂದ ನಿರ್ವಹಿಸಬಲ್ಲರು ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.

ಗೆಲುವಿನ ಟಾನಿಕ್ ಬೇಕಿದೆ

ದೇಶದ ರಾಜಕಾರಣದ ಶಕ್ತಿಕೇಂದ್ರ ಎನಿಸಿರುವ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ದಶಕಗಳೇ ಕಳೆದಿವೆ. ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳ ಪರಿಶ್ರಮದಿಂದ ಸಂಘಟನೆಯ ಬಲವೃದ್ಧಿಸಿಕೊಂಡಿರುವ ಬಿಜೆಪಿಗೆ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆ. ಮಮತಾ ದೀದಿಯಿಂದ ಅಧಿಕಾರ ಕಸಿದುಕೊಳ್ಳಬೇಕೆನ್ನುವ ಬಿಜೆಪಿ ನಾಯಕರ ಮಹತ್ವಾಕಾಂಕ್ಷೆಗೆ ನಡ್ಡಾ ನಿರ್ಧಾರಗಳು ಪೂರಕವಾಗಿದ್ದರೆ ಪಕ್ಷದ ಕನಸನ್ನು ನನಸು ಮಾಡಿದ ಸಾಧನೆಯಿಂದ ನಡ್ಡಾ ಬೀಗಬಹುದು.

ಹಲವು ಕಾರಣಗಳಿಂದ ಕೇಂದ್ರ ನಾಯಕರೊಂದಿಗೆ ಮುನಿಸಿಕೊಂಡಿರುವ ಬಿಹಾರದ ನಿತೀಶ್ ಕುಮಾರ್ ಅವರನ್ನು ಸಂಭಾಳಿಸಿಕೊಂಡು ಅಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಪಕ್ಷದ ಮತ್ತು ನಡ್ಡಾ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಟಿಕೆಟ್ ಹಂಚಿಕೆ, ಪ್ರಚಾರ ಸಂಯೋಜನೆ ಸೇರಿದಂತೆ ಹಲವು ಎಡರುತೊಡರುಗಳನ್ನು ನಡ್ಡಾ ಎದುರಿಸಬೇಕಾಗುತ್ತದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಜಯಗಳಿಸಿದ ನಂತರ ನಡೆದ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳಲ್ಲಿ ವೈಫಲ್ಯ ಅನುಭವಿಸಿತ್ತು. ಈ ಸಾಲುಸಾಲು ಸೋಲಿನಿಂದ ಕಳಾಹೀನವಾಗಿರುವ ಪಕ್ಷಕ್ಕೆ ತುರ್ತಾಗಿ ಗೆಲುವಿನ ಟಾನಿಕ್ ಬೇಕಿದೆ.

ಸುಲಭವಲ್ಲ ಅಧ್ಯಕ್ಷಗಾದಿ ನಿರ್ವಹಣೆ

ಬಿಜೆಪಿಯಂಥ ವಿಶಾಲ ನೆಲೆಯ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುವುದು ಸುಲಭವಲ್ಲ. ಅಂಥವರಿಗೆ ಎಲ್ಲರೂ ಜೊತೆಗೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಜೊತೆಗೆ ವಿಶಾಲ ದೃಷ್ಟಿಕೋನಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಹಲವು ಶೈಲಿಯ ರಾಜಕಾರಣದ ಆಳವಾದ ಜ್ಞಾನವಿರಬೇಕು.

ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳ ರಾಜಕಾರಣದ ವೈಖರಿಯೇ ಬೇರೆ, ಈಶಾನ್ಯ ಭಾರತದ ಬುಡಕಟ್ಟು ರಾಜ್ಯಗಳ ರಾಜಕಾರಣ ವೈಖರಿಯೇ ಬೇರೆ. ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿರುವ ದಕ್ಷಿಣ ಭಾರತ ರಾಜ್ಯಗಳಲ್ಲಿ ಜನರನ್ನು ಒಲಿಸಿಕೊಳ್ಳಲು ಅನುಸರಿಸಬೇಕಾದ ತಂತ್ರಕ್ಕೂ, ಪಶ್ಚಿಮ ಭಾರತದಲ್ಲಿ ಜನರ ಮನಗೆಲ್ಲಲು ಬೇಕಾದ ಚಾಕಚಕ್ಯತೆಯೇ ಬೇರೆ.

‘ದೇಶದ ಪ್ರತಿ ರಾಜ್ಯದಲ್ಲಿಯೂ ಬಿಜೆಪಿ ಹತ್ತಾರು ಸವಾಲುಗಳಿವೆ. ಅವನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ಹೆಣೆಯುವುದು ಅಷ್ಟು ಸುಲಭವಲ್ಲ’ ಎನ್ನುವ ಜವಾಹರ್‌ಲಾಲ್ ನೆಹರು ವಿವಿ ಪ್ರಾಧ್ಯಾಪಕ ಮಿಲಿಂದ್ ಅವಧ್ ಅವರ ಹೇಳಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಸಂಘಟನಾ ಚತುರ ನಡ್ಡಾ

ಬಿಜೆಪಿಗೆ ಬರುವ ಮೊದಲು ಆರ್‌ಎಸ್‌ಎಸ್‌ ಪ್ರಣೀತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರಧಾನ ಕಾರ್ಯದರ್ಶಿಯಾಗಿದ್ದ ನಡ್ಡಾ, ಸಂಘಟನಾ ಚಾತುರ್ಯಕ್ಕೆ ಹೆಸರುವಾಸಿಯಾದವರು. ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಅನುಭವ ಪಡೆದ ನಡ್ಡಾ ಅವರಿಗೆ, ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಮೇಲುಗೈ ಖಾತ್ರಿಪಡಿಸಲು ಅಮಿತ್ ಶಾ ಹಾಕಿಕೊಟ್ಟ ಮಾರ್ಗ ಉಪಯೋಗಕ್ಕೆ ಬರಲಿದೆ ಎನ್ನುವುದು ಬಿಜೆಪಿ ಆಂತರಿಕ ವಲಯದಲ್ಲಿ ಚಾಲ್ತಿಯಲ್ಲಿರುವ ಲೆಕ್ಕಾಚಾರ.

‘ಪರಿಶ್ರಮಿ, ಸಾವಧಾನಿ ಮತ್ತು ಸ್ನೇಹಪರ ವ್ಯಕ್ತಿತ್ವದ ನಡ್ಡಾ ಕಾರ್ಯಕರ್ತರಿಗೆ ಸುಲಭ ಲಭ್ಯ. ಎಲ್ಲರೊಡನೆ ಬೆರೆಯುವ ವ್ಯಕ್ತಿ ಎನಿಸಿದರೂ ವಿಭಿನ್ನ ಸಮೂಹದಿಂದ ರೂಪುಗೊಂಡ ಒಂದು ದೊಡ್ಡ ಸಂಘಟನೆಯನ್ನು ಮುನ್ನಡೆಸಲು ಬೇಕಿರುವ ಸಾಮರ್ಥ್ಯ ಅವರಿಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದವರಿಗಿಂತಲೂ ನಡ್ಡಾ ವಿಭಿನ್ನವಾಗಿ ಕೆಲಸ ಮಾಡುತ್ತಾರೆ’ ಎಂಬ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ನಡ್ಡಾ ಅವರ ಆಪ್ತರೊಬ್ಬರ ಮಾತನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿದ್ದಾಗ ಅಯ್ಕೆಯಾಗಿದ್ದ ವಿವಿಧ ರಾಜ್ಯಘಟಕಗಳಿ ಅಧ್ಯಕ್ಷರನ್ನು ನಡ್ಡಾ ಮುಂದುವರಿಸಿದ್ದಾರೆ. ಮೋದಿ–ಶಾ ಜೋಡಿ ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುವ ಜಾಣ ಯತ್ನ ಇದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT