ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಪ್‌ ಇನ್‌ ಇಂಡಿಯಾ ಹೇಳಿಕೆ: ರಾಹುಲ್‌ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

Last Updated 13 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ನೀಡಿದ್ದ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಯು ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ‘ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿಯ ಸದಸ್ಯರು ಪಟ್ಟು ಹಿಡಿದರು. ಪರಿಣಾಮ ಲೋಕಸಭೆಯಲ್ಲಿ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು.

‘ಪ್ರಧಾನಿ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಈಗ ದೇಶದ ವಿವಿಧ ಭಾಗಗಳಲ್ಲಿ ‘ರೇಪ್‌ ಇನ್‌ ಇಂಡಿಯಾ’ ಮಾತ್ರ ಕಾಣಿಸುತ್ತಿದೆ’ ಎಂದು ರಾಹುಲ್‌ ಅವರು ಜಾರ್ಖಂಡ್‌ನಲ್ಲಿ ಗುರುವಾರ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು.

ಲೋಕಸಭೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ರಾಹುಲ್‌ ವಿರುದ್ಧ ವಾಗ್ದಾಳಿ ಆರಂಭಿಸಿದರು. ‘ರಾಜಕೀಯ ವಿರೋಧಿಗಳನ್ನು ಗೇಲಿ ಮಾಡಲು ರಾಹುಲ್‌ ಅವರು ಅತ್ಯಾಚಾರ ಪ್ರಕರಣಗಳನ್ನು ಬಳಸಿಕೊಂಡಿದ್ದಾರೆ. ಮಹಿಳೆಯರ ವಿರುದ್ಧ ಇಂಥ ಹೇಳಿಕೆ ನೀಡಿರುವ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಮಹಿಳಾ ಸಂಸದರೇ ರಾಹುಲ್‌ ವಿರುದ್ಧದ ವಾಗ್ದಾಳಿಯ ಮುಂಚೂಣಿಯಲ್ಲಿದ್ದರು. ಪ್ರಜ್ಞಾ ಠಾಕುರ್‌ ಸೇರಿದಂತೆ 30ಕ್ಕೂ ಹೆಚ್ಚು ಸಂಸದರು ಎದ್ದುನಿಂತು ರಾಹುಲ್‌ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು.

‘ರಾಹುಲ್‌ ಅವರು ಮಹಿಳೆಯರನ್ನಷ್ಟೇ ಅಲ್ಲ ದೇಶದ ಪ್ರತಿಯೊಬ್ಬರನ್ನೂ ಅವಮಾನಿಸಿದ್ದಾರೆ. ಎಲ್ಲಾ ಪುರುಷರು ಅತ್ಯಾಚಾರಿಗಳಲ್ಲ’ ಎಂದು ಬಿಜೆಪಿ ನಾಯಕಿ ಲಾಕೆಟ್‌ ಚಟರ್ಜಿ ಹೇಳಿದರು.

ಗದ್ದಲ ಜೋರಾದಾಗ ರಾಹುಲ್‌ ಪರವಾಗಿ ಮಾತನಾಡಿದ ಡಿಎಂಕೆ ಸದಸ್ಯೆ ಕನಿಮೊಳಿ ಅವರು, ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳನ್ನು ಸರ್ಕಾರವು ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿದರು.

‘ಪ್ರಧಾನಿ ಅವರ ಮೇಕ್‌ ಇನ್‌ ಇಂಡಿಯಾ ಘೋಷಣೆಯನ್ನು ನಾವು ಗೌರವಿಸುತ್ತೇವೆ. ದೇಶದ ಆರ್ಥಿಕತೆ ಬೆಳೆಯಬೇಕು ಎಂಬುದು ನಮ್ಮ ಬಯಕೆಯೂ ಆಗಿದೆ. ಆದರೆ, ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಸುವುದು ರಾಹುಲ್‌ ಅವರ ಉದ್ದೇಶವಾಗಿತ್ತು. ದುರದೃಷ್ಟವಶಾತ್‌, ಮೇಕ್‌ ಇನ್‌ ಇಂಡಿಯಾ ಯಶಸ್ವಿಯಾಗಿಲ್ಲ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದು ಕಳವಳದ ವಿಚಾರ’ ಎಂದು ಕನಿಮೊಳಿ ಹೇಳಿದರು.

ಕನಿಮೊಳಿ ಅವರ ಸಮರ್ಥನೆಯು ಸ್ಮೃತಿ ಅವರಿ ಇನ್ನಷ್ಟು ಕೆರಳಲು ಕಾರಣವಾಯಿತು. ‘ಕಾಂಗ್ರೆಸ್‌ ನಾಯಕರ ಇಂಥ ಹೇಳಿಕೆಯನ್ನು ಮಹಿಳೆಯೊಬ್ಬರು ಬೆಂಬಲಿಸುತ್ತಾರೆ ಎಂಬುದು ಅಸಹ್ಯಕರ’ ಎಂದು ಅವರು ತಿರುಗೇಟು ನೀಡಿದರು.

ಆಯೋಗಕ್ಕೆ ದೂರು: ಬಿಜೆಪಿಯ ಮಹಿಳಾ ಸಂಸದರ ನಿಯೋಗವೊಂದು ಶುಕ್ರವಾರ ಸಂಜೆ ಚುನಾವಣಾ ಆಯುಕ್ತರನ್ನು ಭೇಟಿಮಾಡಿ, ರಾಹುಲ್‌ ಗಾಂಧಿ ವಿರುದ್ಧ ಕಠಿಣ ಕ್ರಮ ಕೈಗೊಲ್ಳುವಂತೆ ಒತ್ತಾಯಿಸಿದೆ.

ಕ್ಷಮೆ ಯಾಚಿಸುವುದಿಲ್ಲ: ರಾಹುಲ್‌ ಗಾಂಧಿ

ಲೋಕಸಭೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ‘ನಾನು ಯಾವ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ವಿರುದ್ಧ ಕಿಡಿಕಾರಿದರು.

‘ಮೇಕ್‌ ಇನ್‌ ಇಂಡಿಯಾ ಬಗ್ಗೆ ಮೋದಿ ಅವರು ಮಾತನಾಡುತ್ತಲೇ ಇರುತ್ತಾರೆ. ಹಾಗಿದ್ದ ಮೇಲೆ ಪತ್ರಿಕೆಗಳಲ್ಲೂ ಅದೇ ಸುದ್ದಿಯಾಗಬೇಕಾಗಿತ್ತಲ್ಲವೇ? ಆದರೆ, ಪತ್ರಿಕೆಗಳಲ್ಲಿ ಏನನ್ನು ನೋಡುತ್ತಿದ್ದೇವೆ? ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿಗಳೇ ಪತ್ರಿಕೆಗಳಲ್ಲಿರುತ್ತವೆ, ಅದನ್ನೇ ನಾನು ಹೇಳಿದ್ದೆ. ಈ ಹೇಳಿಕೆಗಾಗಿ ನಾನು ಕ್ಷಮೆ ಯಾಚಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ’ ಎಂದರು.

ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿದ ರಾಹುಲ್‌, ‘ದೆಹಲಿಯು ಅತ್ಯಾಚಾರದ ರಾಜಧಾನಿಯಾಗುತ್ತಿದೆ’ ಎಂದು ಹಿಂದೆ ಮೋದಿ ಅವರು ಹೇಳಿದ್ದ ಭಾಷಣದ ವಿಡಿಯೊದ ತುಣುಕನ್ನು ಟ್ಯಾಗ್‌ ಮಾಡಿದ್ದಾರೆ.

***

ಪ್ರಧಾನಿ ಹಾಗೂ ಗೃಹಸಚಿವರು ಈಶಾನ್ಯ ರಾಜ್ಯಗಳಿಗೆ ಬೆಂಕಿ ಹಚ್ಚಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ

***

ಇದು ಭಯಾನಕ ಹೇಳಿಕೆ. ಮಹಿಳೆಯ ಘನತೆಯನ್ನು ಮರೆತು ಕಾಂಗ್ರೆಸ್‌ ನಾಯಕ ಇಂಥ ಮಾತನಾಡಿದ್ದಾರೆ ಎಂಬುದು ನಾಚಿಕೆಯ ಸಂಗತಿ

–ನಿರ್ಮಲಾ ಸೀತಾರಾಮನ್‌, ಕೇಂದ್ರದ ಹಣಕಾಸು ಸಚಿವೆ

***

ಸಂಸತ್ತನ್ನು ಮಾತ್ರವಲ್ಲ, ದೇಶದ ಜನರನ್ನು ಅವಮಾನಿಸಿದ ಇಂಥವರಿಗೆ ಸಂಸದರಾಗುವ ನೈತಿಕ ಹಕ್ಕು ಇಲ್ಲ. ಅವರು ದೇಶದ ಕ್ಷಮೆ ಯಾಚಿಸಬೇಕು

– ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

***

ನೆಹರೂ–ಗಾಂಧಿ ಕುಟುಂಬದ ಕುಡಿಯು ‘ಬನ್ನಿ, ಭಾರತದ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ’ ಎಂದು ಹೇಳಿದೆ. ಇದು ದೇಶದ ಜನರಿಗೆ ರಾಹುಲ್‌ ಗಾಂಧಿ ಅವರು ನೀಡಿದ ಸಂದೇಶವೇ?

– ಸ್ಮೃತಿ ಇರಾನಿ, ಕೇಂದ್ರಸ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT