ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಕಾ ನಿಮ್ಮ ಹೆಸರು ಅಮರವಾಗಿರುತ್ತದೆ’

Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

25ರ ವಯಸ್ಸಿನಲ್ಲೇ ಸಚಿವೆ l ಇಂದಿರಾ ಗಾಂಧಿ ನಂತರ ವಿದೇಶಾಂಗ ಸಚಿವೆಯಾಗಿದ್ದ ಹಾಗೂವಿದೇಶಾಂಗ ವ್ಯವಹಾರ ಸಚಿವೆಯಾಗಿ ಅವಧಿ ಪೂರೈಸಿದ ಏಕೈಕ ನಾಯಕಿ ಸುಷ್ಮಾ ಸ್ವರಾಜ್.ಅಗಲಿದ ನಾಯಕಿಗೆ ಬಿಜೆಪಿ ಕಾರ್ಯಕರ್ತರ ಕಣ್ಣೀರ ವಿದಾಯ ನೀಡಿದರು. ಪಕ್ಷಭೇದ ಮರೆತು ಬಹುತೇಕ ಎಲ್ಲಾ ರಾಜಕೀಯ ನಾಯಕರು ಸುಷ್ಮಾ ಅವರ ಅಂತಿಮ ದರ್ಶನ ಪಡೆದರು.

ಹಿರಿಯ ನಾಯಕಿಯ ಜೀವನ–ಸಾಧನೆ ತಿಳಿಯಲುಸುಷ್ಮಾ ಸ್ವರಾಜ್‌ ನೆನಪುಲಿಂಕ್ ಕ್ಲಿಕ್ಕಿಸಿ

ನವದೆಹಲಿ: ‘ಜಬ್‌ ತಕ್‌ ಸೂರಜ್ ಚಾಂದ್ ರಹೇಗಾ, ದೀದಿ ತೇರೆ ನಾಮ್ ರಹೇಗಾ’ (ಸೂರ್ಯಚಂದ್ರರು ಇರುವವರೆಗೂ, ಅಕ್ಕಾ ನಿಮ್ಮ ಹೆಸರು ಇರುತ್ತದೆ). ಸುಷ್ಮಾ ಸ್ವರಾಜ್ ಅವರನ್ನು ಹೊತ್ತಿದ್ದ ವಾಹನ ಅವರ ಮನೆಯಿಂದ ಹೊರಡುವಾಗ ಕೇಳಿದ ಘೋಷಣೆ ಇದು. ದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿವರೆಗಿನ ಮೆರವಣಿಗೆಯ ಉದ್ದಕ್ಕೂ ಈ ಘೋಷಣೆ ಮೊಳಗುತ್ತಲೇ ಇತ್ತು.

ಸುಷ್ಮಾ ಅವರ ಅಂತಿಮ ದರ್ಶನ ಪಡೆಯಲು ಬಿಜೆಪಿಯ ಕೇಂದ್ರ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ನೆರೆದಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸುಷ್ಮಾ ಅವರ ಮೇಲೆ ರಾಷ್ಟ್ರಧ್ವಜವನ್ನು ಹೊದಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಆಗ ಅಲ್ಲಿದ್ದವರ ಕಣ್ಣಾಲಿಗಳು ತೇವವಾದವು.

ಉತ್ತಮ ಸಂಸದೀಯ ಪಟು, ರಾಜಕೀಯ ನಾಯಕಿ, ಸಚಿವೆಯಾಗಿಯೂ ಹೆಸರು ಗಳಿಸಿದ್ದ ಸುಷ್ಮಾ ಸ್ವರಾಜ್ ಅವರು ಹಲವರ ಪಾಲಿಗೆ ದೀದಿ (ಅಕ್ಕ) ಸಹ ಆಗಿದ್ದರು. ಬಿಜೆಪಿ ಮಾತ್ರವಲ್ಲದೆ ಬೇರೆ ಬೇರೆ ರಾಜಕೀಯ ಪಕ್ಷಗಳ ಮುಖ್ಯಸ್ಥರು ಮತ್ತು ನಾಯಕರು ಸಹ ಸುಷ್ಮಾ ಅವರ ಅಂತಿಮ ದರ್ಶನ ಪಡೆದರು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಂತಿಮ ನಮನ ಸಲ್ಲಿಸಿದರು.

ರಾಜಕೀಯ ಜೀವನ: 1977ರಲ್ಲಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆ |2019ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ | ಶಾಸಕಿಯಾಗಿ, ಸಂಸದೆಯಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಕಾರ್ಯ

ಸುಷ್ಮಾ ಅವರ ಅಂತಿಮ ದರ್ಶನಕ್ಕಾಗಿ ಪಕ್ಷದ ಕಚೇರಿಯ ಆವರಣದಲ್ಲಿ ಸಾವಿರಾರು ಜನರು ಸರದಿಯಲ್ಲಿ ನಿಂತಿದ್ದರು. ರಾಜಕೀಯ ನಾಯಕರಿಂದ ಆರಂಭವಾಗಿ, ರಸ್ತೆ ಬದಿ ಹೂವು ಮಾರುವ ಮಹಿಳೆಯರೂ ಅಲ್ಲಿದ್ದರು. ‘ನಾವು ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ಹೂವು ನೀಡುತ್ತಿದ್ದೆವು. ಈಗ ಅವರ ಅಂತಿಮದರ್ಶನಕ್ಕೂ ಹೂವು ತಂದಿದ್ದೇವೆ’ ಎಂದು ಭಾವುಕರಾದರು.

ಸುಷ್ಮಾ ಅವರು ಬಿಜೆಪಿ ಪಾಳಯದಲ್ಲಿದ್ದ ಅತ್ಯಂತ ಹಿರಿಯ ಮಹಿಳಾ ರಾಜಕಾರಣಿಯಾಗಿದ್ದರು. ರಾಜಕಾರಣಿಗಳಿರಲಿ, ಸಾಮಾನ್ಯ ಜನರೇ ಇರಲಿ ಅವರೊಂದಿಗೆ ಸುಷ್ಮಾ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದಾಗ ಟ್ವೀಟ್ ಮೂಲಕ ಮನವಿ ಮಾಡಿಕೊಂಡವರ ಸಮಸ್ಯೆಗಳನ್ನು ಅತ್ಯಂತ ತ್ವರಿತವಾಗಿ ಬಗೆಹರಿಸುತ್ತಿದ್ದ ಹೆಗ್ಗಳಿಕೆ ಅವರದು.

***

ಸುಷ್ಮಾ ಜೀ ಅವರ ಸಾವು ಕೇವಲ ಬಿಜೆಪಿಗೆ ಆದ ನಷ್ಟವಲ್ಲ. ಅದು ರಾಷ್ಟ್ರರಾಜಕಾರಣಕ್ಕಾದ ನಷ್ಟ. ದೇಶವು ಅವರ ಸೇವೆಯನ್ನು ಮರೆಯುವುದಿಲ್ಲ

– ಅಮಿತ್ ಶಾ,ಗೃಹ ಸಚಿವ

ಜಗಳವಾಡಬೇಕಿದೆ...

ನಿಮ್ಮ ಬದಲಿಗೆ ಬಾನ್ಸುರಿ (ಮಗಳು) ನನ್ನನ್ನು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋದಳು. ನೀವು ನಿಮ್ಮ ಮಾತು ಉಳಿಸಿಕೊಳ್ಳಲಿಲ್ಲ. ನಿಮ್ಮೊಂದಿಗೆ ಜಗಳವಾಡಬೇಕಿದೆ ದೀದಿ

- ಸ್ಮೃತಿ ಇರಾನಿ,ಕೇಂದ್ರ ಸಚಿವೆ

ಭೇಟಿಯ ಭಾಗ್ಯ

ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದ ನಾಯಕಿ ಮೃತಪಟ್ಟಿದ್ದು ತೀರಾ ನೋವು ತಂದಿದೆ. ಭಾರತದ ಪ್ರವಾಸದ ವೇಳೆ, ಅವರನ್ನು ಭೇಟಿ ಮಾಡಿದ್ದು ನನ್ನ ಭಾಗ್ಯ

– ಮಾರಿಯಾ ಫರ್ನಾಂಡಾ ಎಸ್ಪಿನೋಸಾ,ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT