ಬುಧವಾರ, ಏಪ್ರಿಲ್ 1, 2020
19 °C

ಬಿಜೆಪಿ ನಿದ್ದೆಗೆಡಿಸಿದ ನಿತೀಶ್ ನಡೆ: ಮಹಾಘಟಬಂಧನಕ್ಕೆ ಮರಳುವರೇ ಜೆಡಿಯು ಸಾರಥಿ?

ಅಭಯ್ ಕುಮಾರ್ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ನಡುವಿನ ಭೇಟಿ ಬಿಜೆಪಿಯನ್ನು ಚಿಂತೆಗೀಡು ಮಾಡಿತ್ತು. ಕಳೆದ 48 ಗಂಟೆಗಳ ಅವಧಿಯಲ್ಲಿ ಇಬ್ಬರ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿರುವುದೂ ದಿಗಿಲು ಹುಟ್ಟಿಸಿದೆ. 

ವಿಧಾನಸಭೆ ಸ್ಪೀಕರ್ ವಿಜಯ ಚೌಧರಿ ಕಚೇರಿಯಲ್ಲಿ ನಡೆದ ಭೇಟಿಯನ್ನು ‘ಸೌಜನ್ಯದ ಭೇಟಿ’ ಎನ್ನಲಾಗಿದ್ದರೂ, ಮತ್ತಿನ್ನೇನೋ ನಡೆಯುತ್ತಿದೆ ಎಂಬುದು ಬಿಜೆಪಿಯ ಅನುಮಾನ.

ನಿತೀಶ್–ತೇಜಸ್ವಿ ನಡುವೆ ಯಾವ ಸಂದೇಶ ವಿನಿಮಯಗೊಂಡಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲವಾದರೂ, ತಮ್ಮ ಭೇಟಿಯನ್ನು ತೇಜಸ್ವಿ ಸಮರ್ಥಿಸಿಕೊಂಡಿದ್ದಾರೆ.ನಿತೀಶ್ ಅವರು ಮುಂದಿನ ದಿನಗಳಲ್ಲಿ ಮತ್ತೊಂದು ಪ್ರಯೋಗ ನಡೆಸಲಿದ್ದಾರೆಯೇ ಎಂಬ ಸಂಶಯ ಸೇರಿದಂತೆ ಉಭಯ ನಾಯಕರ ನಡುವಿನ ಎರಡನೇ ಭೇಟಿ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದೆ. 

ನಿತೀಶ್ ಅವರು ಮಹಾಘಟಬಂಧನ್‌ಗೆ ಮರಳಿದರೆ ತಪ್ಪೇನು? ಎಂದು ಮಾಜಿ ಮುಖ್ಯಮಂತ್ರಿ ಜಿತನ್‌ರಾಮ್ ಮಾಂಝಿ ಪ್ರಶ್ನಿಸಿದ್ದಾರೆ.

‘ನಿತೀಶ್ ಅವರ ಜಾತ್ಯತೀತ ನಿಲುವುಗಳನ್ನು ಯಾರಿಂದಾದರೂ ಪ್ರಶ್ನಿಸಲಾಗುತ್ತದೆಯೇ? ಎನ್‌ಆರ್‌ಸಿ ತಿರಸ್ಕರಿಸಿ, ಯುಪಿಎ ಅವಧಿಯ ಎನ್‌ಪಿಆರ್ ಜಾರಿಗೊಳಿಸಿದ ಎನ್‌ಡಿಎ ಆಡಳಿತದ ಮೊದಲ ರಾಜ್ಯ ಬಿಹಾರ’ ಎಂದು  ಕಾಂಗ್ರೆಸ್‌ನ ಹಿರಿಯ ಮುಖಂಡ ಅವಧೀಶ್ ಸಿಂಗ್ ಹೇಳಿದ್ದಾರೆ. . 

ಮಹಾಘಟಬಂಧನ್‌ ನಾಯಕರ ಮಾತುಗಳು ಬಿಜೆಪಿಯನ್ನು ಆತಂಕಕ್ಕೆ ದೂಡಿವೆ. ಎನ್‌ಆರ್‌ಸಿ, ಎನ್‌ಪಿಆರ್ ವಿಚಾರದಲ್ಲಿ ತಮ್ಮನ್ನು ಕತ್ತಲಲ್ಲಿ ಇರಿಸಲಾಗಿತ್ತು ಎಂದು ಬಿಜೆಪಿ ನಾಯಕರು ಅಲವತ್ತುಕೊಂಡಿದ್ದರು. ನಿತೀಶ್ ವಿಚಾರದಲ್ಲಿ ಬಿಜೆಪಿ ಪಾಳಯ ತಲ್ಲಣಗೊಂಡಿರುವುದು ನಿಜ. ಇದೇ ಅಕ್ಟೋಬರ್‌ನಲ್ಲಿ ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಎನ್‌ಆರ್‌ಸಿ, ಎನ್‌ಪಿಆರ್‌ಗಳೇ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರಗಳಾಗಿರಲಿವೆ ಎಂಬುದೂ ಅಷ್ಟೇ ಸ್ಪಷ್ಟ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು