ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಅಮ್ಮನೂ ಗಟ್ಟಿಗಿತ್ತಿ!

ಬುಧವಾರ, ಮಾರ್ಚ್ 27, 2019
22 °C

ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಅಮ್ಮನೂ ಗಟ್ಟಿಗಿತ್ತಿ!

Published:
Updated:

ಬೆಂಗಳೂರು: 'ಕೆಟ್ಟ ಮನೋಭಾವ'-  ಯುದ್ಧ ವಿಮಾನದ ಪೈಲಟ್‍ಗೆ ಮೊದಲು ಇರಬೇಕಾದುದು ಇದೇ. 2011ರಲ್ಲಿ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದಾಗ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೇಳಿದ ಮಾತು ಇದು. ಅಂದರೆ ಯುದ್ಧದ ವೇಳೆ ಆಶಾವಾದಕ್ಕಿಂತ ಹೆಚ್ಚು ಬೇಕಾಗಿರುವುದು ಏನು ಬಂದರೂ ಎದುರಿಸುವ ಧೈರ್ಯ ಎಂಬುದು ಇದರರ್ಥ.

ಪಾಕಿಸ್ತಾನ ವಶ ಪಡಿಸಿಕೊಂಡಾಗ ಆ ಮನೋಭಾವ ಅಭಿನಂದನ್ ಮುಖದಲ್ಲಿ ಕಾಣುತ್ತಿತ್ತು. ಶತ್ರು ರಾಷ್ಟ್ರದ ಮುಂದೆ ಎದೆಯುಬ್ಬಿಸಿ ನಿಂತದ್ದು ನೋಡಿದಾಗಲೇ ಅಭಿನಂದನ್ ಎಂಥಾ ಕೆಚ್ಚೆದೆಯ ಪೈಲಟ್ ಎಂಬುದು ಗೊತ್ತಾಗಿತ್ತು.

ಈ ಧೈರ್ಯ ಅವರಿಗೆ ರಕ್ತಗತವಾಗಿ ಬಂದಿದ್ದು. ಅಭಿನಂದನ್ ಅವರ ತಾತ, ಅಪ್ಪ ಎಲ್ಲರೂ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದವರೇ. ಅಭಿನಂದನ್ ಅಮ್ಮ ಡಾ.ಶೋಭಾ, ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ನಲ್ಲಿ ವೈದ್ಯೆಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಅಭಿನಂದನ್ ಅವರಿಗೆ ಆ ಧೈರ್ಯ ಸಿಕ್ಕಿದ್ದೇ ಅಮ್ಮನಿಂದ ಅಂತಾರೆ ಇವರ ಕುಟುಂಬ ಸ್ನೇಹಿತ ನಿವೃತ್ತ ಗ್ರೂಪ್ ಕ್ಯಾಪ್ಟನ್  ತರುಣ್. ಕೆ. ಸಿಂಘಾ.

 ನಿರಂತರ ಯುದ್ಧ ಮತ್ತು ಸಂಘರ್ಷಗಳು ನಡೆಯುತ್ತಿರುವ ವಲಯಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಡಾ. ಶೋಭಾ ವೃತ್ತಿ ನಿರ್ವಹಿಸಿದ್ದರು. ಗಂಭೀರ ಗಾಯಗೊಂಡು ಜೀವ ಇನ್ನುಳಿಯಲ್ಲ ಎಂಬ ಸ್ಥಿತಿಯಲ್ಲಿ ಇರುವವರನ್ನೂ ಬದುಕಿಸಿದವರು ಶೋಭಾ. ಐವರಿ ಕೋಸ್ಟ್ ನಲ್ಲಿ ಎಕೆ 47 ಮತ್ತು ಮಚ್ಚುಕತ್ತಿಯಿಂದಲೇ ಅಧಿಕಾರ ನಡೆಯುತ್ತಿದ್ದ ಕಾಲವಾಗಿದ್ದ 2005ನೇ ಇಸವಿಯಲ್ಲಿ ಶೋಭಾ ಅಲ್ಲಿ ಸೇವೆ ಸಲ್ಲಿಸಿದ್ದರು. ಎರಡನೇ ಗಲ್ಫ್ ಯುದ್ದ ನಡೆಯುವಾಗ ಇರಾಕ್‍ನಲ್ಲಿದ್ದರು.

2009ರಲ್ಲಿ ಇವರು ಪಪೂವ ನ್ಯೂಗಿನಿಗೆ ಬಂದರು. ಅಲ್ಲಿ ಚೀಫ್ ಮೆಡಿಕಲ್ ಆಫೀಸರ್ ಆಗಿದ್ದ ಶೋಭಾ, ಸರ್ಜಿಕಲ್, ಲೈಂಗಿಕ ದೌರ್ಜನ್ಯ ಮತ್ತು ಎಚ್‍ಐವಿ ಪ್ರಾಜೆಕ್ಟ್ ಹೀಗೆ ಮೂರು ವಿಭಿನ್ನ ಯೋಜನೆಗಳಲ್ಲಿ ಸೇವೆ ಸಲ್ಲಿಸಿದರು.ಇಲ್ಲಿ ಸಿಕ್ಕಿದ ಅನುಭವಗಳು ಅವರನ್ನು ಮತ್ತಷ್ಟು ಗಟ್ಟಿಗಿತ್ತಿಯನ್ನಾಗಿಸಿತು.

ಇದನ್ನೂ ಓದಿ'ಸಿಂಹಕುಟ್ಟಿ' ಮೊಮ್ಮಗ, ವರ್ಧಮಾನ್‍ರ ಪುತ್ರ ಈ ವಿಂಗ್ ಕಮಾಂಡರ್ ಅಭಿನಂದನ್

ಮಗ ಅಭಿನಂದನ್ ಅವರನ್ನು ಪಾಕ್ ಸೇನೆ ವಶ ಪಡಿಸಿಕೊಂಡ ಸುದ್ದಿಯನ್ನು ಅವರು ತುಂಬಾ ಧೈರ್ಯದಿಂದಲೇ ಸ್ವೀಕರಿಸಿದ್ದರು.
ಅಭಿನಂದನ್ ವಿಷಯ ತಿಳಿದ ಕೂಡಲೇ ನಾನು ಶೋಭಾ ಅವರಿಗೆ ಇಮೇಲ್ ಕಳುಹಿಸಿದೆ. ಇಂಥಾ ಪರಿಸ್ಥಿತಿಯಲ್ಲಿ ಅವರ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಹದಿನೈದು ನಿಮಿಷದಲ್ಲಿ ಶೋಭಾ ನನಗೆ ಪ್ರತಿಕ್ರಿಯಿಸಿದರು. ಅವರ ಮನೋಧೈರ್ಯ ಹೇಗಿದೆ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು.ಆಕೆ ಧೈರ್ಯಶಾಲಿ ಎಂದು  ಸಿಂಘಾ ಹೇಳಿದ್ದಾರೆ.

ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಶಾಸ್ತ್ರದಲ್ಲಿ ಪದವಿ ಪಡೆದ ಶೋಭಾ, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಇಂಗ್ಲೆಂಡ್‍ನಲ್ಲಿ ಅನಸ್ತೇಶಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರೋಗ್ಯ ಪರಿಪಾಲನೆ ಮತ್ತು ಶಿಕ್ಷಣ ರಂಗದಲ್ಲಿಯೂ ಸೇವೆ ಸಲ್ಲಿಸಿ ತನ್ನದೇ ಛಾಪು ಮೂಡಿಸಿದವರು ಇವರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಇವರು ಕಳೆದ ವರ್ಷ ಆನ್‍ಲೈನ್ ಅಭಿಯಾನ ನಡೆಸಿದ್ದರು. 

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !