ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಿಂಹಕುಟ್ಟಿ' ಮೊಮ್ಮಗ, ವರ್ಧಮಾನ್‍ರ ಪುತ್ರ ಈ ವಿಂಗ್ ಕಮಾಂಡರ್ ಅಭಿನಂದನ್

Last Updated 1 ಮಾರ್ಚ್ 2019, 15:53 IST
ಅಕ್ಷರ ಗಾತ್ರ

ಮುಂಬೈ: ದೇಶದ ಹೆಮ್ಮೆಯ ಪುತ್ರ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಾಯ್ನಾಡಿಗೆ ತಲುಪಿದಾಗ ಭಾರತೀಯರ ಪಾಲಿಗೆ ಅದು ಖುಷಿಯ ಗಳಿಗೆ. ಅಭಿನಂದನ್ ಧೈರ್ಯದ ಬಗ್ಗೆ ದೇಶಕ್ಕೆ ದೇಶವೇ ಕೊಂಡಾಡುವಾಗ ಆ ಕುಟುಂಬದ ಸದಸ್ಯರಿಗೆ ಹೆಮ್ಮೆಯ ಕ್ಷಣ.

ಚೆನ್ನೈ ನಿವಾಸಿಯಾದ ನಿವೃತ್ತ ಏರ್ ಮಾರ್ಷಲ್ ವರ್ಧಮಾನ್ ಸಿಂಹಕುಟ್ಟಿ ಅವರ ಪುತ್ರ ಈ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್.

ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಬುಧವಾರ ಪಾಕ್ ವಾಯುಪಡೆಯ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ಅಭಿನಂದನ್, ತಮ್ಮ ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ಸಂದರ್ಭ ಶತ್ರುದೇಶದ ಕ್ಷಿಪಣಿಯೊಂದು ತಾಗಿ ಅಭಿನಂದನ್ ಅವರಿದ್ದ ಮಿಗ್ ವಿಮಾನ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಹೊರಜಿಗಿದ ಅಭಿನಂದನ್ ನೆಲ ಮುಟ್ಟಿದ ಸ್ಥಳ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇರಿತ್ತು. ಸ್ಥಳೀಯರಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾದಾಗ ತಮ್ಮ ಬಳಿ ಇದ್ದ ದಾಖಲೆಗಳನ್ನು ಅಭಿನಂದನ್ ನಾಶಪಡಿಸಿದ್ದರು. ಸ್ಥಳೀಯರಿಂದ ಹಲ್ಲೆಗೊಳಗಾದ ಅಭಿನಂದನ್ ಅವರನ್ನು ನಂತರ ಪಾಕ್ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಪಾಕಿಸ್ತಾನದ ಎಫ್–16 ಯುದ್ಧವಿಮಾನ ಮಿಗ್ ವಿಮಾನಕ್ಕಿಂತಲೂ ಹೆಚ್ಚು ಪ್ರಬಲವಾದುದು ಎಂದು ಪರಿಗಣಿಸಲಾಗುತ್ತದೆ.ಅಂಥಾ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದುರುಳಿಸುವುದು ಸುಲಭದ ಮಾತೇನಲ್ಲ. ಒಬ್ಬಚಾಣಾಕ್ಷ ಪೈಲಟ್‍ಗೆಮಾತ್ರ ಇದು ಸಾಧ್ಯ. ಹಾಗಾಗಿ ಅಭಿನಂದನ್ ಶೌರ್ಯ ಶ್ಲಾಘನೀಯ.

ನೆನಪಿನ ಬುತ್ತಿ ಬಿಚ್ಚಿದ ನವಾಲೆ
5 ವರ್ಷಗಳ ಹಿಂದೆ ನಿವೃತ್ತರಾದ ವರ್ಧಮಾನ್ ಕೂಡಾ ಮಿಗ್ ವಿಮಾನ ಹಾರಿಸಿದ್ದರು.ಅಭಿನಂದನ್ ಅವರ ತಾತ ಸಿಂಹಕುಟ್ಟಿಯೂ ವಾಯುಪಡೆಯಲ್ಲಿದ್ದರು.

1969-72ರ ಅವಧಿಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‍ಡಿಎ)ಯಲ್ಲಿದ್ದ ವರ್ಧಮಾನ್ ಅವರ ಜತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ ಮುಂಬೈ ನಿವಾಸಿ ನಿವೃತ್ತ ವಿಂಗ್ ಕಮಾಂಡರ್ ಪ್ರಕಾಶ್ ನವಾಲೆ.ಆಗ ಅಭಿನಂದನ್‍ಗೆ ಮೂರು ವರ್ಷ. ಹೈದರಾಬಾದ್‍ನ ಹಕೀಂಪೇಟ್‍ನಲ್ಲಿರುವ ಯುದ್ಧ ವಿಮಾನ ತರಬೇತಿ ವಿಭಾಗದಲ್ಲಿ ಕಾರ್ಯವೆಸಗುತ್ತಿದ್ದಾಗ ತಾನು ವರ್ಧಮಾನ್ ಅವರಿಗೆ ಹೆಚ್ಚು ಆಪ್ತವಾದೆ ಅಂತಾರೆ 1994ರಲ್ಲಿ ನಿವೃತ್ತರಾದ ನವಾಲೆ.

ಏರ್‌ಫೋರ್ಸ್ ಅಕಾಡೆಮಿಯಲ್ಲಿ ಫೈಟರ್ ಪೈಲಟ್ ಆಗಿ ತಾನು ಪಾಸಾಗಿದ್ದರೂ ನಾನು ಆಮೇಲೆ ಹೆಲಿಕಾಪ್ಟರ್ ವಿಭಾಗಕ್ಕೆ ಬಂದೆ.ನಾನು ಮತ್ತು ವರ್ಧಮಾನ್ ಕೆಲ ಕಾಲ ಫ್ಲೈಯಿಂಗ್ ತರಬೇತುದಾರರಾಗಿದ್ದೆವು.

ಏರ್ ಮಾರ್ಷಲ್ ವರ್ಧಮಾನ್ ತಮಿಳುನಾಡಿನ ಅಮರಾವತಿನಗರ್ ಸೈನಿಕ್ ಸ್ಕೂಲ್‍ನಲ್ಲಿ ಕಲಿತಿದ್ದರು, ತಾಂಬರಂ ನಿವಾಸಿಯಾದ ವರ್ಧಮಾನ್ ತುಂಬಾ ಸರಳ ವ್ಯಕ್ತಿಯಾಗಿದ್ದು, ನಾವು ಹಲವಾರು ಬಾರಿ ಅವರ ಮನೆಯಲ್ಲಿ ಊಟ ಮಾಡಿದ್ದೆವು, ವರ್ಧಮಾನ್ ಅವರ ಪತ್ನಿ ಶೋಭಾ ವೈದ್ಯೆ. ನನ್ನ ಪತ್ನಿ ಅರುಣಾ ಗರ್ಭಿಣಿಯಾಗಿದ್ದಾಗ ಶೋಭಾ ಅವರೇ ಚಿಕಿತ್ಸೆ ನೀಡಿದ್ದರು.ಅವರ ವೈದ್ಯಕೀಯ ಆರೈಕೆಯಿಂದಲೇ ನನ್ನ ಮಗಳು ಪೂಜಾ ಹುಟ್ಟಿದ್ದು ಅಂತಾರೆ ನವಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT