ಬುಲಂದ್‌ಶಹರ್‌ ಹಿಂಸೆ: ಪೊಲೀಸರಿಗೆ ಒಳಸಂಚಿನ ಶಂಕೆ

7

ಬುಲಂದ್‌ಶಹರ್‌ ಹಿಂಸೆ: ಪೊಲೀಸರಿಗೆ ಒಳಸಂಚಿನ ಶಂಕೆ

Published:
Updated:

ಲಖನೌ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸ್‌ ಹೊರಠಾಣೆಯ ಮೇಲೆ ಗುಂಪು ನಡೆಸಿದ ದಾಳಿ ಮತ್ತು ಇನ್‌ಸ್ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಹತ್ಯೆಯ ಹಿಂದೆ ‘ಒಳಸಂಚು’ ಇದೆ ಎಂಬ ಅನುಮಾನ ದಟ್ಟವಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌ ಹೇಳಿದ್ದಾರೆ.

ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನಕ್ಕೆ ಮೂರು ದಿನ ಮೊದಲು ಈ ಹಿಂಸಾಚಾರ ನಡೆದಿರುವುದು ಈ ಅನುಮಾನಕ್ಕೆ ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ. 

ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಮಾತ್ರ ಅಲ್ಲ. ಮಹಾವ್‌ ಗ್ರಾಮದ ಹೊರವಲಯದಲ್ಲಿ ಪ್ರಾಣಿಗಳ ಎಲುಬುಗಳು ಹೇಗೆ ಬಂದವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಎಲುಬುಗಳು ಸಿಕ್ಕವು ಎಂಬ ಕಾರಣಕ್ಕಾಗಿಯೇ ಮಹಾವ್‌ ಮತ್ತು ಚಿಂಗರಾವಟಿ ಗ್ರಾಮದಲ್ಲಿ ಸೋಮವಾರ ಹಿಂಸಾಚಾರ ನಡೆದಿತ್ತು. ಅದೇ ದಿನ ಮಹಾವ್‌ ಗ್ರಾಮದಿಂದ 40 ಕಿ.ಮೀ.ದೂರದ ಊರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಮಾವೇಶವೊಂದರಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಭಾರಿ ದೊಡ್ಡ ಕೋಮು ಗಲಭೆ ನಡೆಯುವುದನ್ನು ಪೊಲೀಸರು ತಡೆದಿದ್ದಾರೆ ಎಂದು ಒ.ಪಿ. ಸಿಂಗ್‌ ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಒಂದು ಎಫ್‌ಐಆರ್‌ ದನಗಳ ಹತ್ಯೆಯ ಬಗ್ಗೆ ಮತ್ತು ಇನ್ನೊಂದು ಹಿಂಸಾಚಾರದ ಬಗ್ಗೆ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರು ಇರುವವರನ್ನು ಸುಮ್ಮನೆ ಬಿಡುವುದಿಲ್ಲ. ಘಟನೆಯ ಹಿಂದೆ ಇರುವವರು ಯಾರು ಎಂಬುದನ್ನು ಪತ್ತೆ ಮಾಡಲು ವಿಶೇಷ ಕಾರ್ಯಪಡೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಮತ್ತು ಸುಮಿತ್‌ ಎಂಬ ಯುವಕನ ಹತ್ಯೆಯ ಬಗ್ಗೆ ಭಾರಿ ಪ್ರಮಾಣದ ರಾಜಕೀಯ ಕೆಸರೆರಚಾಟ ನಡೆದಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚನೆ ನೀಡಿದ್ದಾರೆ. ದನಗಳನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ. 

ಬುಲಂದ್‌ಶಹರ್‌ನಲ್ಲಿ ಹಿಂಸಾಚಾರ ನಡೆಯುತ್ತಿದ್ದಾಗ ಯೋಗಿ ಅವರು ಗೋರಖಪುರದಲ್ಲಿ ಲೇಸರ್‌ ಷೋದಲ್ಲಿ ಭಾಗವಹಿಸಿದ್ದರ ಬಗ್ಗೆಯೂ ಟೀಕೆಗಳು ಬಂದಿವೆ.

ಶರಣಾಗಲು ಬಜರಂಗ ದಳ ಸಲಹೆ

ಬುಲಂದ್‌ಶಹರ್‌ ಹಿಂಸಾಚಾರದ ಪ್ರಮುಖ ಆರೋಪಿ, ಬಜರಂಗ ದಳದ ಜಿಲ್ಲಾ ಸಂಚಾಲಕ ಯೋಗೇಶ್‌ ರಾಜ್‌ ವಿಡಿಯೊ ಬಿಡುಗಡೆ ಮಾಡಿ ತಾವು ಅಮಾಯಕ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಸೋಮವಾರದಿಂದ ಅವರು ತಲೆಮರೆಸಿಕೊಂಡಿದ್ದಾರೆ.

‘ಜೈ ಶ್ರೀ ರಾಮ್‌’ ಎಂದು ಅವರ ವಿಡಿಯೊ ಆರಂಭವಾಗುತ್ತದೆ. ಅವರು ತಮ್ಮನ್ನು ಬುಲಂದ್‌ಶಹರ್‌ ಜಿಲ್ಲೆಯ ಬಜರಂಗ ದಳದ ಸಂಚಾಲಕ ಎಂದೇ ಪರಿಚಯಿಸಿಕೊಂಡಿದ್ದಾರೆ. ಪೊಲೀಸರಿಗೆ ಶರಣಾಗುವಂತೆ ಯೋಗೇಶ್‌ ಅವರಿಗೆ ಬಜರಂದ ದಳ ಸಲಹೆ ಮಾಡಿದೆ.

ಮಕ್ಕಳ ಮೇಲೆ ಎಫ್‌ಐಆರ್‌ಗೆ ಆಕ್ಷೇಪ

ಮಹಾವ್‌ ಗ್ರಾಮದಲ್ಲಿ ನಡೆದಿದೆ ಎನ್ನಲಾದ ದನಗಳ ಹತ್ಯೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ದಾಖಲಾದ ಆರೋಪಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಎಫ್‌ಐಆರ್‌ನಲ್ಲಿ ಇರುವ ಏಳು ಹೆಸರುಗಳಲ್ಲಿ ಇಬ್ಬರು ಸಣ್ಣ ಮಕ್ಕಳು. ಇನ್ನೊಬ್ಬರು 40 ಕಿ.ಮೀ. ದೂರದ ಸ್ಥಳದಲ್ಲಿ ನಡೆದ ಮುಸ್ಲಿಂ ಸಮಾವೇಶಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ.

ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಹತ್ತು ಮತ್ತು ಇನ್ನೊಬ್ಬನಿಗೆ 12 ವರ್ಷ ವಯಸ್ಸು. ಇವರು ಕ್ರಮವಾಗಿ ಐದು ಮತ್ತು ಆರನೇ ತರಗತಿ ವಿದ್ಯಾರ್ಥಿಗಳು. ಈ ಮಕ್ಕಳ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬಾರದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಮಕ್ಕಳಲ್ಲಿ ಒಬ್ಬನ ತಂದೆ ಆರು ವರ್ಷಗಳ ಹಿಂದೆ ನಡೆದ ಬೈಕ್‌ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ.

ಪೊಲೀಸರು ಮಂಗಳವಾರ ರಾತ್ರಿ 2.15ಕ್ಕೆ ಮನೆಗೆ ಬಂದು ಆರನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗನ ಬಗ್ಗೆ ವಿಚಾರಿಸಿದರು. ಅವೇಳೆಯಲ್ಲಿ ಬಂದು ಮನೆಯಲ್ಲಿ ಹುಡುಕಾಡಿದರು. ಮಕ್ಕಳ ಹೆಸರಿನ ಬಗ್ಗೆಯೇ ಪೊಲೀಸರಿಗೆ ಅನುಮಾನ ಇತ್ತು. ಷೆಹಜಾದ್‌ ಮತ್ತು ಕಾಸಿಂ ಇದ್ದಾರೆಯೇ ಎಂದು ಪ್ರಶ್ನಿಸಿದರು. ಮನೆಯನ್ನು ಅಲ್ಲೋಲ ಕಲ್ಲೋಲ ಮಾಡಿ ಪೊಲೀಸರು ಮನೆಯಿಂದ ಹೋದರು ಎಂದು 12 ವರ್ಷದ ಬಾಲಕನ ತಾಯಿ ವಿವರಿಸಿದರು.

**

ಇದು ದೊಡ್ಡ ಪಿತೂರಿಯ ಭಾಗ. ಹಾಗಾಗಿ, ದನಗಳ ಹತ್ಯೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಕಾಲಮಿತಿಯೊಳಗೆ ಬಂಧಿಸಬೇಕು
- ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !