ಕಮರಿಗೆ ಬಿದ್ದ ತೆಲಂಗಾಣ ಬಸ್‌: 52 ಸಾವು

7

ಕಮರಿಗೆ ಬಿದ್ದ ತೆಲಂಗಾಣ ಬಸ್‌: 52 ಸಾವು

Published:
Updated:

ಹೈದರಾಬಾದ್‌: ತೆಲಂಗಾಣದ ಜಗತಿಯಾಳ್‌ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್‌ವೊಂದು ಕಮರಿಗೆ ಬಿದ್ದಿದ್ದು, 5 ಮಕ್ಕಳು ಸೇರಿ 52 ಜನರು ಮೃತಪಟ್ಟಿರುವ ದುರಂತ ಮಂಗಳವಾರ ಸಂಭವಿಸಿದೆ.

‘ಜಗತಿಯಾಳ್‌ನಿಂದ ಶನಿವಾರಪೇಟೆ ಹಳ್ಳಿಯತ್ತ ಪ್ರಯಾಣಿಸುತ್ತಿದ್ದ ಈ ಬಸ್‌ ಘಾಟಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ. ಬಸ್‌ನಲ್ಲಿ 55 ಜನರು ಪ್ರಯಾಣಿಸುತ್ತಿದ್ದರು’ ಎಂದು ಕಂದಾಯ ವಿಭಾಗೀಯ ಅಧಿಕಾರಿ ಜಿ.ನರೇಂದ್ರ ತಿಳಿಸಿದ್ದಾರೆ.

ಜಗತಿಯಾಳ್‌ನಿಂದ ಪ್ರಯಾಣ ಆರಂಭಿಸಿದ್ದ ಬಸ್‌ನಲ್ಲಿ ಕೆಲವೇ ಕೆಲವು ಪ್ರಯಾಣಿಕರಿದ್ದರು. ಮಾರ್ಗ ಮಧ್ಯೆ, ಬೆಟ್ಟದ ಪ್ರದೇಶದಲ್ಲಿರುವ ಕೊಂಡಗಟ್ಟು ದೇವಾಲಯದ ಬಳಿ ಹೆಚ್ಚು ಪ್ರಯಾಣಿಕರು ಬಸ್‌ ಏರಿದ್ದರು.

‘ಘಾಟಿ ರಸ್ತೆಗೆ ಬಸ್‌ ಪ್ರವೇಶಿಸಿದಾಗ ಬ್ರೇಕ್‌ ಫೇಲ್ಯೂರ್ ಅಥವಾ ಬೇರೆ ಸಮಸ್ಯೆಯಾಗಿ ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಆಳದ ಕಮರಿಗೆ ಬಿದ್ದಿದೆ. ಈ ವೇಳೆ 52 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದವರನ್ನು ಕರೀಂನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ನರೇಂದ್ರ ಮಾಹಿತಿ ನೀಡಿದರು.

‘ಚಾಲಕ ವೇಗ ನಿಯಂತ್ರಕದ ಬಳಿ ಬಸ್‌ಅನ್ನು ನಿಯಂತ್ರಿಸಲು ವಿಫಲವಾದುದರಿಂದ ಆಟೋರಿಕ್ಷಾಗೆ ಡಿಕ್ಕಿಯಾಯಿತು. ಬಳಿಕವೂ ಬಸ್‌ನ ವೇಗ ನಿಯಂತ್ರಣಕ್ಕೆ ಬರಲಿಲ್ಲ. ವೇಗ ಹೆಚ್ಚಾದ ಕಾರಣ ತಿರುವು ಪ್ರದೇಶದಲ್ಲಿ ಅಪಾಯ ಸಂಭವಿಸುವ ಅರಿವಾಗಿ ಪ್ರಯಾಣಿಕರು ಚೀರಲಾರಂಭಿಸಿದರು. ಈ ವೇಳೆ ಚಾಲಕ ಪದೇಪದೆ ಪ್ರಯತ್ನಿಸಿದರೂ ಬಸ್‌ ನಿಲ್ಲಿಸಲು ಸಾಧ್ಯವಾಗಲಿಲ್ಲ. ಆತನೂ ಜೋರಾಗಿ ಕೂಗಲಾರಂಭಿಸಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು’ ಎಂದು ತಿಳಿಸಿದರು.

ಅಪಘಾತ ಸ್ಥಳದಿಂದ ಐವರು ಮಕ್ಕಳು, 32 ಮಹಿಳೆಯರು ಹಾಗೂ 15 ಪುರುಷರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. 

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಮೃತರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದು, ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆ ಘೋಷಣೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 4

  Sad
 • 0

  Frustrated
 • 3

  Angry

Comments:

0 comments

Write the first review for this !