ಶನಿವಾರ, ಜನವರಿ 25, 2020
28 °C

ಸಿಎಎ ಉತ್ತಮ ಕಾನೂನು, ಒಪ್ಪಿಕೊಳ್ಳಲೇಬೇಕು: ಕಾಂಗ್ರೆಸ್ ನಾಯಕ ಜಾನ್ ಫರ್ನಾಂಡಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪಣಜಿ: ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ ನಿಲುವನ್ನು ಪಕ್ಷದ ನಾಯಕ ಮತ್ತು ಮಾಜಿ ಸಂಸದ ಜಾನ್ ಫರ್ನಾಂಡಿಸ್ ಟೀಕಿಸಿದ್ದು, ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಕಾಯ್ದೆಗೆ ರಸ್ತೆಯಲ್ಲಿ ಸವಾಲೆಸೆಯಬಾರದು ಎಂದು ಹೇಳಿದ್ದಾರೆ. 

ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಫರ್ನಾಂಡಿಸ್, ಪೌರತ್ವ ತಿದ್ದುಪಡಿ ಕಾಯಿದೆಯು ಅತ್ಯಂತ ಉತ್ತಮ ಕಾನೂನಾಗಿದ್ದು, ಜನರು ಅದನ್ನು ಒಪ್ಪಿಕೊಳ್ಳಲೇಬೇಕು. ಸಂಸತ್ತು ಅಂಗೀಕರಿಸಿ ಕಾಯ್ದೆಯಾಗಿ ರೂಪುಗೊಂಡ ಬಳಿಕ ಅದನ್ನು ಬೀದಿಯಲ್ಲಿ ನಿಂತು ವಿರೋಧಿಸುವಂತೆ ಯೊರೊಬ್ಬರನ್ನೂ ವಿಪಕ್ಷಗಳು ಪ್ರಚೋದಿಸಬಾರದು ಎಂದು ಕಿಡಿಕಾರಿದರು. 

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಸೇರಿ ಇತರೆ ವಿಶ್ವವಿದ್ಯಾಲಯಗಳ ಆವರಣದಲ್ಲಿ ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಏನು ನಡೆಯುತ್ತಿದೆಯೋ ಅದು ಪ್ರಸ್ತುತ ಎಂದು ನನಗನಿಸುವುದಿಲ್ಲ. ಇದು ಹೇಗೆ ಶುರುವಾಯಿತು ಎಂಬುದು ನನಗೆ ತಿಳಿದಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಶುರುವಾಯಿತು. ನಾನು ಅಲ್ಲಿನ ಮಂಡಳಿಯಲ್ಲಿ ನಿರ್ದೇಶಕನಾಗಿದ್ದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿದೆ. ಹಾಗಾಗಿಯೇ ನಾನು ಮಂಡಳಿಗೆ ರಾಜೀನಾಮೆ ಸಲ್ಲಿಸಿದೆ ಎಂದು ಹೇಳಿದರು. 

ಎರಡು ಬಾರಿ ರಾಜ್ಯಸಭಾ ಸಂಸದರಾಗಿದ್ದ ಅವರು, ಕಾನೂನುಗಳನ್ನು ರಸ್ತೆಯಲ್ಲಿ ರೂಪಿಸಲಾಗುವುದೇ? ಆಗ ಇದು ಕಾಡಿನ ನ್ಯಾಯವಾಗಿದೆ. ಒಮ್ಮೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ನಂತರ ಅಂತಹ ವಿಚಾರಗಳನ್ನು ಚರ್ಚಿಸುವುದು ತರವಲ್ಲ. ಇದೊಂದು ಉತ್ತಮ ಕಾನೂನಾಗಿರುವುದರಿಂದಾಗಿ ಈ ದೇಶದ ಜನರು ಅದನ್ನು ಒಪ್ಪಿಕೊಳ್ಳಬೇಕು ಎಂದರು. 

ನಾನು ನಿರ್ದಿಷ್ಟ ಪಕ್ಷವೊಂದಕ್ಕೆ ಸೇರಿದವನು ಆದರೆ ನನಗೂ ಕೂಡ ವೈಯಕ್ತಿಕ ಅಭಿಪ್ರಾಯಗಳಿವೆ. 70 ವರ್ಷಗಳಿಂದಲೂ ನಾವು ತಪ್ಪನ್ನು ಮಾಡಿದ್ದೇವೆ ಮತ್ತು ಮತ್ತೆ ಅದೇ ತಪ್ಪನ್ನು ಈಗಲೂ ಮುಂದುವರಿಸಬೇಕೇ? ಪ್ರಧಾನಿ ನಮ್ಮ ಪಕ್ಷದವರಲ್ಲದಿದ್ದರೂ ಕೂಡ ಅವರನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅವರು ಭಾರತದ ಪ್ರಧಾನಿ ಎಂದು ತಿಳಿಸಿದರು. 

ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯಿದೆಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು ಮತ್ತು ಪ್ರತಿಭಟನೆಗಳು ನಡೆದಿದ್ದವು. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಡಿಸೆಂಬರ್ 31, 2014ಕ್ಕೂ ಮುಂಚೆ ಬಂದಿದ್ದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯಿದೆಯನ್ನು ವಿಪಕ್ಷಗಳು ವಿರೋಧಿಸಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು