ಶುಕ್ರವಾರ, ಜೂನ್ 18, 2021
27 °C

ಕನಿಷ್ಠ ಬೆಂಬಲ ಬೆಲೆಗೆ ‘ಪಿಎಂ–ಆಶಾ: ರಾಜ್ಯಗಳಿಗೆ ಮೂರು ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸಂಪುಟವು ಬುಧವಾರ ಅನುಮೋದನೆ ನೀಡಿರುವ ಹೊಸ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀತಿ ‘ಪಿಎಂ–ಆಶಾ’ (ಪ್ರಧಾನ ಮಂತ್ರಿ ಅನ್ನದಾತ ಆಯ್‌ ಸಂರಕ್ಷಣಾ ಯೋಜನಾ) ಅಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಪಾವತಿಸಲು ರಾಜ್ಯ ಸರ್ಕಾರಗಳಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. 

ಹೊಸ ನೀತಿ ಜಾರಿಗಾಗಿ ₹15,053 ಕೋಟಿ ವಿನಿಯೋಗಿಸಲು ಒಪ್ಪಿಗೆ ಕೊಡಲಾಗಿದೆ. ಈ ಮೊತ್ತದಲ್ಲಿ ₹6,250 ಕೋಟಿಯನ್ನು ಈ ವರ್ಷ ವೆಚ್ಚ ಮಾಡಲಾಗುವುದು. ಉಳಿಕೆ ಮೊತ್ತ ಮುಂದಿನ ಹಣಕಾಸು ವರ್ಷದಲ್ಲಿ ಬಳಕೆಯಾಗಲಿದೆ. 

ರೈತರಿಗೆ ಪ್ರತಿಫಲಾತ್ಮಕ ಬೆಲೆ ದೊರೆಯುವಂತೆ ಮಾಡುವುದಾಗಿ 2018ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದನ್ನು ಖಾತರಿಪಡಿಸುವುದಕ್ಕಾಗಿ ‘ಪಿಎಂ–ಆಶಾ’ವನ್ನು ಜಾರಿಗೆ ತರಲಾಗುತ್ತಿದೆ. ಇದೊಂದು ಚಾರಿತ್ರಿಕ ನಿರ್ಧಾರ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಹೇಳಿದ್ದಾರೆ. 

ಮಾರುಕಟ್ಟೆ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇದ್ದಾಗ ಪಿಡಿಪಿಎಸ್‌ ಅನ್ವಯವಾಗುತ್ತದೆ. ಎಂಎಸ್‌ಪಿ ಮತ್ತು ಮಾರುಕಟ್ಟೆ ಬೆಲೆಯ ನಡುವಣ ವ್ಯತ್ಯಾಸವನ್ನು ಸರ್ಕಾರ ತುಂಬಿ ಕೊಡಬೇಕು. ಯಾವುದೇ ರಾಜ್ಯದಲ್ಲಿನ ಶೇ 25ರಷ್ಟು ಎಣ್ಣೆಬೀಜ ಬೆಳೆಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. 

ಪಾರದರ್ಶಕ ಹರಾಜು ಪ್ರಕ್ರಿಯೆ ನಡೆಸುವ ಅಧಿಕೃತ ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡು ಅಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಮಾರುಕಟ್ಟೆ ದರ ಮತ್ತು ಎಂಎಸ್‌ಪಿಯ ವ್ಯತ್ಯಾಸದ ಮೊತ್ತವನ್ನು ನೀಡಲಾಗುವುದು. 

ಎಣ್ಣೆಬೀಜ ಖರೀದಿಗೆ ಖಾಸಗಿ ಕ್ಷೇತ್ರವನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ಅವಕಾಶ ಕೊಡಲಾಗುವುದು. ಎಂಟು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಬೇಕು. 

ಈಗಾಗಲೇ ಜಾರಿಯಲ್ಲಿರುವ ಬೆಲೆ ಬೆಂಬಲ ಯೋಜನೆಯನ್ನು (ಪಿಎಸ್‌ಎಸ್‌) ಆಯ್ಕೆ ಮಾಡಿಕೊಳ್ಳುವ ಅವಕಾಶವೂ ರಾಜ್ಯಗಳಿಗೆ ಇದೆ. ಈ ಯೋಜನೆ ಪ್ರಕಾರ, ಬೆಲೆಯು ಎಂಎಸ್‌ಪಿಗಿಂತ ಕಡಿಮೆ ಆದರೆ ಕೇಂದ್ರ ಸರ್ಕಾರದ ಸಂಸ್ಥೆಗಳೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತವೆ. 

ಭತ್ತ, ಗೋಧಿ, ಇತರ ಧಾನ್ಯಗಳು ಮತ್ತು ಹತ್ತಿಯಂತಹ ವಾಣಿಜ್ಯ ಬೆಳೆಗಳಿಗೆ ಈಗ ಜಾರಿಯಲ್ಲಿರುವ ಎಂಎಸ್‌ಪಿ ನಿಯಮಗಳೇ ಅನ್ವಯವಾಗುತ್ತವೆ. 

ಮೂರು ಆಯ್ಕೆಗಳು

* ಈಗ ಇರುವ ಕನಿಷ್ಠ ಬೆಂಬಲ ಬೆಲೆ ಯೋಜನೆ (ಪಿಎಸ್‌ಎಸ್‌)

* ಬೆಲೆ ಕೊರತೆಯ ಪ್ರಮಾಣ ಪಾವತಿ ಯೋಜನೆ (ಪಿಡಿಪಿಎಸ್‌): ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಭವಂತರ್‌ ಭಕ್ತರ್‌ ಯೋಜನಾದ ಮಾದರಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದು ಎಣ್ಣೆಬೀಜ ಬೆಳೆಗಾರರಿಗೆ ಮಾತ್ರ ಅನ್ವಯ. 

* ಖಾಸಗಿ ಖರೀದಿ ಮತ್ತು ಸಂಗ್ರಹ ಯೋಜನೆ (ಪಿಪಿಎಸ್‌ಎಸ್‌): ದರವು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇದ್ದಾಗ ಕೃಷಿ ಉತ್ಪನ್ನಗಳ ಖರೀದಿಗೆ ಖಾಸಗಿಯವರನ್ನು ಬಳಸಿಕೊಳ್ಳುವ ಯೋಜನೆ

 ಎಥೆನಾಲ್‌ ದರ ಶೇ 25 ಏರಿಕೆ

ಕಬ್ಬಿನಿಂದ ತಯಾರಿಸುವ ಮತ್ತು ಪೆಟ್ರೋಲ್‌ಗೆ ಮಿಶ್ರಣ ಮಾಡಲು ಬಳಸುವ ಎಥೆನಾಲ್‌ ದರವನ್ನು ಶೇ 25ರಷ್ಟು ಏರಿಕೆ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುವುದು ಮತ್ತು ತೈಲ ಆಮದು ಕಡಿತಗೊಳಿಸುವುದು ಇದರ ಉದ್ದೇಶವಾಗಿದೆ. 

ಸಂ‍ಪೂರ್ಣವಾಗಿ ಕಬ್ಬಿನಿಂದ ತಯಾರಿಸಲಾದ ಎಥೆನಾಲ್‌ ದರವನ್ನು ಲೀಟರ್‌ಗೆ ₹47.13ರಿಂದ ₹59.13ಕ್ಕೆ ಏರಿಸಲಾಗಿದೆ. ಬಿ–ಹೆವಿ ಕಾಕಂಬಿಯಿಂದ ತಯಾರಿಸುವ ಎಥೆನಾಲ್‌ ದರವನ್ನು ₹47.13ರಿಂದ ₹52.43ಕ್ಕೆ ಹೆಚ್ಚಿಸಲಾಗಿದೆ. ಸಿ–ಹೆವಿ ಕಾಕಂಬಿಯಿಂದ ತಯಾರಿಸಲಾಗುವ ಎಥೆನಾಲ್‌ ದರವನ್ನು ಈಗಿನ ₹43.70ಯಿಂದ ₹43.46ಕ್ಕೆ ಇಳಿಸಲಾಗಿದೆ. 

ಕಬ್ಬಿನಿಂದ ತಯಾರಿಸುವ ಎಥೆನಾಲ್‌ ಅನ್ನು ಪೆಟ್ರೋಲ್‌ಗೆ ನೇರವಾಗಿ ಮಿಶ್ರ ಮಾಡಬಹುದು. 

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ ಪಾವತಿಸಲು ಎಥೆನಾಲ್‌ ಬೆಲೆ ಏರಿಕೆ ನೆರವಾಗಲಿದೆ. ಕಬ್ಬು ಬೆಳೆಗಾರರ ಬಾಕಿ ₹13 ಸಾವಿರ ಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ 40ರಷ್ಟು ಉತ್ತರ ಪ್ರದೇಶದಲ್ಲಿಯೇ ಬಾಕಿ ಇದೆ. 

ಈಗ, ಪೆಟ್ರೋಲ್‌ಗೆ ಶೇ 4–5ರಷ್ಟು ಎಥೆನಾಲ್‌ ಸೇರಿಸಲು ಅವಕಾಶ ಇದೆ. ಅದನ್ನು ಒಂದೆರಡು ವರ್ಷಗಳಲ್ಲಿ ಶೇ 10ಕ್ಕೆ ಏರಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.  

ಎಲ್ಲ ರೈಲು ಮಾರ್ಗಗಳ ವಿದ್ಯುದೀಕರಣ

ವಿದ್ಯುದೀಕರಣಕ್ಕೆ ಬಾಕಿ ಉಳಿದಿರುವ ಸುಮಾರು 13 ಸಾವಿರ ಕಿ.ಮೀ ರೈಲು ಮಾರ್ಗದ ವಿದ್ಯುದೀಕರಣಕ್ಕೆ ಸಂಪುಟ ಒಪ್ಪಿಗೆ ಕೊಟ್ಟಿದೆ. ಇದಕ್ಕೆ ₹12,134 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆ 2021–22ಕ್ಕೆ ಪೂರ್ಣಗೊಳ್ಳಲಿದೆ. 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು