ಅಭ್ಯರ್ಥಿ ಆಯ್ಕೆ ಕಸರತ್ತು ಚುರುಕು

ಸೋಮವಾರ, ಮಾರ್ಚ್ 18, 2019
31 °C

ಅಭ್ಯರ್ಥಿ ಆಯ್ಕೆ ಕಸರತ್ತು ಚುರುಕು

Published:
Updated:

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮಧ್ಯೆ ಕ್ಷೇತ್ರ ಹಂಚಿಕೆ ಪ್ರಕ್ರಿಯೆಗೆ ತೆರೆಬಿದ್ದ ಬೆನ್ನಲ್ಲೆ, ಅಖಾಡಕ್ಕಿಳಿಯುವ ಹುರಿಯಾಳುಗಳನ್ನು ಅಂತಿಮಗೊಳಿಸುವ ಕಸರತ್ತು ಚುರುಕುಗೊಂಡಿದೆ.

ಆದರೆ, ಕಾಂಗ್ರೆಸ್‌ನಲ್ಲಿ ಕೆಲವು ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಒಮ್ಮತ ಮೂಡಿಸುವುದು  ರಾಜ್ಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಚುನಾವಣಾ ಸಮಿತಿಗೆ ಆಯ್ಕೆಯ ಹೊಣೆ ಹೊರಿಸುವ ನಿರ್ಧಾರಕ್ಕೆ ಪಕ್ಷ ಬಂದಿದೆ. ಇದೇ 16ರಂದು ಸಮಿತಿ ಸಭೆ ದೆಹಲಿಯಲ್ಲಿ ನಡೆಯಲಿದೆ.

ಈ ಮಧ್ಯೆ, ಬಿಜೆಪಿಯಲ್ಲೂ ಸ್ಪರ್ಧಾಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಶುಕ್ರವಾರ (ಮಾ. 15) ನಡೆಯುವ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಹೆಸರು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಅದಾದ ಬಳಿಕ ದೆಹಲಿಗೆ ತೆರಳಿರುವ ರಾಜ್ಯ ಪ್ರಮುಖರು, ವರಿಷ್ಠರ ಒಪ್ಪಿಗೆ ಪಡೆದು ಹೆಸರು ಪ್ರಕಟಿಸಲಿದ್ದಾರೆ.

ಏತನ್ಮಧ್ಯೆ, ಶೃಂಗೇರಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಚಿಕ್ಕಮಗಳೂರು–ಉಡುಪಿ ಕ್ಷೇತ್ರದ ಗೊಂದಲಕ್ಕೆ ತೆರೆ ಎಳೆದಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.

ಅಭ್ಯರ್ಥಿ ಗೊಂದಲ: ಕಾಂಗ್ರೆಸ್‌ಗೆ ಹಂಚಿಕೆಯಾದ 20 ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಆ ಪಕ್ಷದ ಹಾಲಿ ಸಂಸದರಿದ್ದಾರೆ. ಅವರೆಲ್ಲರಿಗೂ ಮತ್ತೊಂದು ಬಾರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ. ಉಳಿದ, 11 ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಾಗಿ ಪಕ್ಷ ಶೋಧ ನಡೆಸುತ್ತಿದೆ.

ಕಾಂಗ್ರೆಸ್‌ಗೆ ಕೆಲವು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಕೊರತೆ ಇದ್ದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ 4–5 ಪ್ರಬಲ ಅಭ್ಯರ್ಥಿಗಳಿದ್ದಾರೆ. ಬೆಂಗಳೂರು ಕೇಂದ್ರಕ್ಕೆ ಬಿ.ಕೆ. ಹರಿಪ್ರಸಾದ್‌, ಸಲೀಂ ಅಹ್ಮದ್‌, ರಿಜ್ವಾನ್‌ ಅರ್ಷದ್‌, ರೋಷನ್‌ಬೇಗ್‌ ಆಕಾಂಕ್ಷಿಗಳು. ಹೈಕಮಾಂಡ್‌ ಮಟ್ಟದಲ್ಲಿ ಹಿಡಿತ ಹೊಂದಿರುವ ಹರಿಪ್ರಸಾದ್‌, ಈ ಕ್ಷೇತ್ರ ಅಥವಾ ದಕ್ಷಿಣ ಕನ್ನಡದಿಂದ ಸ್ಪರ್ಧಿಸಲು ಅವಕಾಶ ಕೇಳುತ್ತಿದ್ದಾರೆ.

ಬೀದರ್‌ನಿಂದ ಕಣಕ್ಕಿಳಿಯಲು ಈಶ್ವರ ಖಂಡ್ರೆ ಉತ್ಸುಕರಾಗಿದ್ದಾರೆ. ಜೊತೆಗೆ, ಧರಂ ಸಿಂಗ್‌ ಪುತ್ರ ವಿಜಯಸಿಂಗ್‌, ಸಿದ್ದರಾಮಯ್ಯ ಆಪ್ತ ಸಿ.ಎಂ. ಇಬ್ರಾಹಿಂ ಇಲ್ಲಿನ ಟಿಕೆಟ್‌ ಆಕಾಂಕ್ಷಿಗಳು. ಕೊಪ್ಪಳದಲ್ಲಿ ಬಸಜರಾಜ ಹಿಟ್ನಾಳ, ಬಸವರಾಜ ರಾಯರಡ್ಡಿ, ವಿರೂಪಾಕ್ಷಪ್ಪ ಸರದಿಯಲ್ಲಿ ನಿಂತಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬಾದರ್ಲಿ ಕೂಡ ಟಿಕೆಟ್ ಆಕಾಂಕ್ಷಿ. ಆದರೆ, ಬೆಳಗಾವಿ ಕ್ಷೇತ್ರಕ್ಕೆ ಹುರಿಯಾಳು ಆಯ್ಕೆ ವಿಷಯದಲ್ಲಿ ಇನ್ನೂ ಒಮ್ಮತ ಮೂಡಿಲ್ಲ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ವಿನಯ್‍ ಕುಲಕರ್ಣಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಲು ಚರ್ಚೆ ನಡೆದಿದೆ. ಆದರೆ, ಮಾಜಿ ಸಂಸದ ಐ.ಜಿ. ಸನದಿ ಮಗ ಶಾಕೀರ್ ಸನದಿ, ಹಿರಿಯ ಕಾಂಗ್ರೆಸಿಗ ವೀರಣ್ಣ ಮತ್ತಿಕಟ್ಟಿ ಕೂಡಾ ಟಿಕೆಟ್ ಕೇಳುತ್ತಿದ್ದಾರೆ. ಹಾವೇರಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಮತ್ತು ಬಸವರಾಜ ಶಿವಣ್ಣನವರ ಹೆಸರು ಮುಂಚೂಣಿಯಲ್ಲಿವೆ.

ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿಯೇ ಇಲ್ಲ!
ಬಿಜೆಪಿಯ ಅನಂತಕುಮಾರ್‌ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ! ಬಿಟಿಎಂ ಲೇಔಟ್‌ ಶಾಸಕ, ಪಕ್ಷದ ಹಿರಿಯ ನಾಯಕ ರಾಮಲಿಂಗರೆಡ್ಡಿ  ಮತ್ತು ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯ ಕೃಷ್ಣ ಹೆಸರು ಮುಂಚೂಣಿಯಲ್ಲಿದ್ದರೂ, ಇಬ್ಬರೂ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.

ಹೀಗಾಗಿ, ಗುರಪ್ಪ ನಾಯ್ಡು ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. 2018ರ ವಿಧಾನಸಭೆಗೆ ಪದ್ಮನಾಭ ಕ್ಷೇತ್ರದಿಂದ ಟಿಕೆಟ್‌ ಪಡೆದವರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ನಾಯ್ಡು, ಕೊನೆಕ್ಷಣದಲ್ಲಿ ಅವಕಾಶ ವಂಚಿತರಾಗಿದ್ದರು.

‘ಕೈ’ಯಲ್ಲೆ ಉಳಿಸಿಕೊಳ್ಳಲು ಒತ್ತಡ
ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದಕ್ಕೆ ಸ್ಥಳೀಯ ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಬೆನ್ನಿಗೆ ನಿಂತಿರುವ ಕೆಲವರು, ನಿಲುವು ಪುನರ್‌ ಪರಿಶೀಲಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

‘ಹಾಲಿ ಸಂಸದರ ಕ್ಷೇತ್ರ‌ ಬಿಟ್ಟು ಕೊಡುವುದಿಲ್ಲವೆಂದು ಹೇಳಿ, ಬಿಟ್ಟುಕೊಟ್ಟಿದ್ದು ಯಾಕೆ’ ಎಂದು ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ, ಕೆ. ಷಡಕ್ಷರಿ ಸೇರಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪ್ರಶ್ನಿಸಿದ್ದಾರೆ. ಕ್ಷೇತ್ರ ಉಳಿಸಿಕೊಡುವಂತೆ ಖರ್ಗೆ ಮೇಲೆ ಒತ್ತಡವನ್ನೂ ಹೇರಿದ್ದಾರೆ.

ಬೆಂಗಳೂರು ಉತ್ತರಕ್ಕೆ ಗೋಪಾಲಗೌಡ?
ಬೆಂಗಳೂರು: ತಮ್ಮ ಪಾಲಿಗೆ ಸಿಕ್ಕಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜೆಡಿಎಸ್‌ ನಾಯಕರು ಸರಣಿ ಸಭೆ ನಡೆಸಿದರು.

ಗುರುವಾರ ಸಭೆ ನಡೆಸಿದ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌ ಅವರು ಜಿಲ್ಲಾಘಟಕದ ಪ್ರಮುಖರು, ಶಾಸಕರ ಜತೆ ಸಮಾಲೋಚನೆ ನಡೆಸಿದರು.

ದೇವೇಗೌಡರು ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಅವರ  ಭಾರಿ ಅಂತರದಿಂದ ಗೆಲ್ಲಿಸುವುದಾಗಿ ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಪ್ರಮುಖರು ಪ್ರತಿಪಾದಿಸಿದರು. ಒಂದು ಹಂತದಲ್ಲಿ ಗೌಡರ ಸ್ಪರ್ಧೆ ಬಗ್ಗೆ ಎರಡೂ ಕ್ಷೇತ್ರಗಳ ಪ್ರಮುಖರು ವಾಗ್ವಾದವನ್ನೂ ನಡೆಸಿದರು.

ಜೆಡಿಎಸ್‌ ಪಾಲಿಗೆ ಈಗ ಬಿಟ್ಟುಕೊಟ್ಟಿರುವ ತುಮಕೂರು ಕ್ಷೇತ್ರದ ವಿಷಯದಲ್ಲಿ ಯಾವುದೇ ಬದಲಾವಣೆಯಾಗದೇ ಇದ್ದರೆ ದೇವೇಗೌಡರು ಅಲ್ಲಿಂದಲೇ ಕಣಕ್ಕೆ ಇಳಿಯುವುದು ಖಚಿತ ಎನ್ನಲಾಗಿದೆ. ಬೆಂಗಳೂರು ಉತ್ತರದಿಂದ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ.

ಚಿಕ್ಕಮಗಳೂರು–ಉಡುಪಿ ಕ್ಷೇತ್ರದಿಂದ ಮಾಜಿ ಸಂಸದ ಹಾಗೂ ಹಾಲಿ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ಅವರು ಬರಲೊಪ್ಪದೇ ಇದ್ದರೆ ವಿಧಾನಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ಸ್ಪರ್ಧಾಳು ಆಗಲಿದ್ದಾರೆ.

ಉತ್ತರ ಕನ್ನಡದಿಂದ ಆನಂದ ಆಸ್ನೋಟಿಕರ, ವಿಜಯಪುರದಿಂದ ಶಾಸಕ ದೇವಾನಂದ ಚವ್ಹಾಣ ತಮ್ಮ ರವಿ ಚೌವ್ಹಾಣ ಅವರನ್ನು ಹುರಿಯಾಳು ಆಗಿಸುವ ಚಿಂತನೆ ನಡೆದಿದೆ.

ಶಿವಮೊಗ್ಗ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಜತೆಗೂ ಕುಮಾರಸ್ವಾಮಿ ಚರ್ಚಿಸಿ, ಕಾರ್ಯತಂತ್ರ ಹೆಣೆದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !